ADVERTISEMENT

ಕೋವಿಡ್‌ ಪತ್ತೆಗೆ ಸಂಚಾರಿ ಲ್ಯಾಬ್‌; ಲಸಿಕೆ ಅಭಿಯಾನಕ್ಕೂ ಬಳಕೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 3:42 IST
Last Updated 20 ಫೆಬ್ರುವರಿ 2021, 3:42 IST
ಸಂಚಾರಿ ಪ್ರಯೋಗಾಲಯ
ಸಂಚಾರಿ ಪ್ರಯೋಗಾಲಯ   

ಬೆಂಗಳೂರು: ಇನ್ನು ಮುಂದೆ ಕೊರೊನಾ ವೈರಾಣುಗಳ ಪತ್ತೆ ಮತ್ತು ಪರೀಕ್ಷೆಗೆ ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳಿಗೆ ಎಡತಾಕುವ ಅಗತ್ಯವಿಲ್ಲ. ಈ ವೈರಾಣುಗಳನ್ನು ಪತ್ತೆ ಮಾಡಬಲ್ಲ ಸಂಚಾರಿ ಪ್ರಯೋಗಾಲಯಗಳು (ಮೊಬೈಲ್‌ ಲ್ಯಾಬ್‌) ಮನೆ ಬಾಗಿಲಿಗೇ ಬರಲಿವೆ.

ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಇತರ ಕೆಲವು ಸಂಸ್ಥೆಗಳ ಜತೆಗೂಡಿ ವಿಶಿಷ್ಟ ಸಂಚಾರಿ ಪ್ರಯೋಗಾಲಯವನ್ನು ಅಭಿವೃದ್ಧಿಪಡಿಸಿದೆ. ವಿಶ್ವದಲ್ಲೇ ಈ ರೀತಿಯ ಪ್ರಯೋಗಾಲಯ ಪ್ರಥಮ ಎಂದು ಐಐಎಸ್‌ಸಿ ಹೇಳಿಕೊಂಡಿದೆ.

ಈ ಸಂಚಾರಿ ಪ್ರಯೋಗಾಲಯವು ಬಿಎಸ್‌ಎಲ್‌–2+ ಮೂಲ ಸೌಕರ್ಯ ಮತ್ತು ಸಾಧನಗಳನ್ನು ಒಳಗೊಂಡಿದೆ. ಮಿನಿ ಸ್ಪಿನ್ಸ್‌, ವೊರ್ಟೆಕ್ಸ್‌ ಮಿಕ್ಸರ್‌, ಸೆಂಟ್ರಿಫ್ಯೂಗ್ ಮುಂತಾದ ಸಾಧನಗಳನ್ನು ಒಳಗೊಂಡಿದೆ. ಅಲ್ಲದೆ, ಆರ್‌ಟಿ– ಪಿಸಿಆರ್‌ ಪರೀಕ್ಷಾ ಸಾಧನವನ್ನೂ ಹೊಂದಿದೆ. ಕೊರೊನಾ ವೈರಾಣು ಮತ್ತು ಸಾರ್ಸ್‌ ಸಿಒವಿ–2 ಗಳನ್ನು ತ್ವರಿತವಾಗಿ ಪತ್ತೆ ಮಾಡಲು ಇರುವ ಸುವರ್ಣ ಮಾನದಂಡ ಎಂದೇ ಪರಿಗಣಿಸಲಾಗಿದೆ.

ADVERTISEMENT

ಈ ಹಿಂದಿನ ಸಂಚಾರಿ ಪ್ರಯೋಗಾಲಯಕ್ಕಿಂತ ಇದು ಹೆಚ್ಚು ಸುಧಾರಿತವಾದುದು. 20 ಅಡಿಯಷ್ಟು ವಿಸ್ತೀರ್ಣದ ಭಾರತ್‌ ಬೆನ್ಜ್‌ ಚಾಸೀಸ್‌ ಬಳಸಿ ಪ್ರಯೋಗಾಲಯವನ್ನು ನಿರ್ಮಿಸಲಾಗಿದೆ. ಸ್ಯಾಂಪಲ್‌ ಮತ್ತು ಕಿಟ್‌ಗಳ ಸಂಗ್ರಹ, ಬಯೋ ಮೆಡಿಕಲ್‌ ತ್ಯಾಜ್ಯ ನಿರ್ವಹಣೆ, ಪ್ರಧಾನ ಮಿಶ್ರಣ ತಯಾರಿಕೆಯಂತಹ (ಮಾಸ್ಟರ್‌ ಮಿಕ್ಸರ್‌) ವ್ಯವಸ್ಥೆ ಇದರಲ್ಲಿದೆ.

‘ಟಾಟಾ ಮೆಡಿಕಲ್‌ ಅಂಡ್‌ ಡಯಾಗ್ನಸ್ಟಿಕ್‌ ಸಂಸ್ಥೆ’ ಇತ್ತೀಚೆಗಷ್ಟೇ ಚಾಲನೆ ನೀಡಿದ ಕೋವಿಡ್‌ ಪತ್ತೆ ಮಾಡುವ ಫೆಲುಡಾ ಸಾಧನವನ್ನು(ಕಿಟ್) ಬಳಸಿಕೊಂಡು ಸ್ವತಂತ್ರ ಪರೀಕ್ಷಾ ಘಟಕವಾಗಿಯೂ ಕಾರ್ಯ ನಿರ್ವಹಿಸಬಹುದು. ಇದರ ಜತೆಗೆ ಲಸಿಕೆ ನೀಡಿಕೆಯ ಕಾರ್ಯಕ್ಕೂ ಬಳಸಬಹುದಾಗಿದೆ. ಇದಕ್ಕೆ ಮೊಬೈಲ್‌ ಇನ್‌ಫೆಕ್ಷನ್‌ ಟೆಸ್ಟಿಂಗ್‌ ಅಂಡ್‌ ರಿಪೋರ್ಟಿಂಗ್‌ ಲ್ಯಾಬ್‌ (ಎಂಐಟಿಆರ್‌) ಎಂದು ಹೆಸರಿಸಲಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆಯ ಜತೆಗೆ ಶಾನ್‌ಮುಖ್ ಇನ್ನೊವೇಷನ್ಸ್‌ ನವೋದ್ಯಮ ಸಂಸ್ಥೆ ಈ ಸಂಚಾರಿ ಪ್ರಯೋಗಾಲಯವನ್ನು ಅಭಿವೃದ್ಧಿ ಪಡಿಸಿವೆ. ಇದಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯೂ ಅನುಮತಿ ನೀಡಿದೆ.

ಮಿತ್ರ ಲ್ಯಾಬ್ಸ್‌, ಪಾರೆಕ್ಸೆಲ್‌, ಸ್ಟೇಟ್‌ ಸ್ಟ್ರೀಟ್, ಯುನೈಟೆಡ್‌ ವೇ, ಭಾರತ್‌ ಬೆನ್ಜ್‌ ಸಂಸ್ಥೆಗಳ ಸಹಯೋಗವಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.