ADVERTISEMENT

ನನ್ನ ವಿರುದ್ಧ ವರದಿ ಪ್ರಕಟಿಸುವುದನ್ನು ನಿರ್ಬಂಧಿಸಬೇಕು: ಹೈಕೋರ್ಟ್‌ಗೆ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2019, 20:06 IST
Last Updated 10 ಜನವರಿ 2019, 20:06 IST

ಬೆಂಗಳೂರು: ‘ನನ್ನ ಆಪ್ತ ಸಹಾಯಕ ಮೋಹನ್ ಬಳಿ ₹ 25.76 ಲಕ್ಷ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ನನ್ನ ವಿರುದ್ಧ ವರದಿ ಪ್ರಕಟಿಸುವುದನ್ನು ನಿರ್ಬಂಧಿಸಬೇಕು’ ಎಂದು ಕೋರಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಸಚಿವರ ಪರ ವಕೀಲರು ಗುರುವಾರ ಕೋರ್ಟ್‌ ಕಲಾಪದ ಕೊನೆ ಅವಧಿಯಲ್ಲಿ ನ್ಯಾಯಮೂರ್ತಿ ಕೆ.ಸೋಮಶೇಖರ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಹಾಜರಾಗಿ ‘ಅರ್ಜಿಯ ತುರ್ತು ವಿಚಾರಣೆ ನಡೆಸಬೇಕು’ ಎಂದು ಮನವಿ ಮಾಡಿದರು.

ಆದರೆ ನ್ಯಾಯಪೀಠ ಈ ಮನವಿಯನ್ನು ನಿರಾಕರಿಸಿ ವಿಚಾರಣೆಯನ್ನು ಇದೇ 14ಕ್ಕೆ ನಿಗದಿಪಡಿಸಿತು.

ADVERTISEMENT

ಈ ಮೊದಲು ಪುಟ್ಟರಂಗಶೆಟ್ಟಿ ಸಿವಿಲ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ಸುದ್ದಿ ಪ್ರಕಟಿಸದಂತೆ ಮಾಧ್ಯಮಗಳ ಮೇಲೆ ನಿರ್ಬಂಧ ವಿಧಿಸಬೇಕು’ ಎಂದು ಕೋರಿದ್ದರು. ಆದರೆ, ಈ ಮನವಿಯನ್ನು ತಿರಸ್ಕರಿಸಿದ್ದ ಸಿವಿಲ್‌ ನ್ಯಾಯಾಲಯ, ‘ಮಾಧ್ಯಮಗಳ ವಿರುದ್ಧ ಏಕಪಕ್ಷೀಯ ನಿರ್ಬಂಧ ಹೇರಲು ಸಾಧ್ಯವಿಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.