ADVERTISEMENT

ಹಣ ದ್ವಿಗುಣ ಆಮಿಷ: ಬಂಧನ

2,500 ಜನರಿಗೆ ಅಂದಾಜು ₹ 20 ಕೋಟಿ ವಂಚನೆ?

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2019, 2:58 IST
Last Updated 6 ಸೆಪ್ಟೆಂಬರ್ 2019, 2:58 IST
ಸುನಿಲ್‌ಕುಮಾರ್
ಸುನಿಲ್‌ಕುಮಾರ್   

ಬೆಂಗಳೂರು: ಹಣ ದ್ವಿಗುಣ ಮಾಡಿಕೊಡುವುದಾಗಿ ನಂಬಿಸಿ, ವಂಚಿಸುತ್ತಿದ್ದ ಆರೋಪದಲ್ಲಿ ಮೂವರನ್ನು ಕಬ್ಬನ್‌ ಪಾರ್ಕ್‌ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಈ ಆರೋಪಿಗಳು ಸುಮಾರು 2,500 ಜನರಿಂದ ಅಂದಾಜು ₹ 20 ಕೋಟಿ ಸಂಗ್ರಹಿಸಿ ವಂಚಿಸಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಹರಿಯಾಣದ ಜಿಂದ್ ಜಿಲ್ಲೆಯ ಸುನಿಲ್‌ಕುಮಾರ್ ಚೌಧರಿ (36) ಹಾಗೂ ಕೇರಳದ ಕಣ್ಣೂರು ಜಿಲ್ಲೆಯವರಾದ ರಿಜೇಶ್‌ (36) ಮತ್ತು ರಾಜೇಶ್‌ (41) ಬಂಧಿತರು.

ವಂಚನೆಗೆ ಒಳಗಾದ ಸಂಜೀವ್ ಕುಮಾರ್‌ ಎಂಬುವವರು ಇದೇ 2ರಂದು ನೀಡಿದ್ದ ದೂರು ಆಧರಿಸಿ ಕಾರ್ಯಾಚರಣೆಗಿಳಿದಿದ್ದ ಪೊಲೀಸರಿಗೆ ಯುಬಿಸಿಟಿಯ ಓಕ್‍ವುಡ್ ಹೋಟೆಲ್‍ನಲ್ಲಿ ತಂಗಿದ್ದ ಸುನಿಲ್ ಕುಮಾರ್ ಚೌಧರಿಮತ್ತು ರಿಜೇಶ್‌ ಸಿಕ್ಕಿಬಿದ್ದಿದ್ದರು. ಅವರಿಬ್ಬರನ್ನೂ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಮತ್ತೊಬ್ಬ ವಂಚಕ ರಾಜೇಶ್‌ ಕೂಡಾ ಬಲೆಗೆ ಬಿದ್ದಿದ್ದಾನೆ.

ADVERTISEMENT

ಯು.ಬಿ ಸಿಟಿಯಲ್ಲಿ ವಾಮ್‌ ಸರ್ವೀಸ್‌ ಪ್ರೈವೇಟ್‌ ಲಿಮಿಟೆಡ್‌ ಎಂಬ ಕಂಪನಿ ಆರಂಭಿಸಿದ್ದ ಆರೋಪಿಗಳು, ‘₹ 25 ಸಾವಿರ ಕಟ್ಟಿದರೆ ವಾರಕ್ಕೆ ₹ 1,250ರಂತೆ 20 ವಾರ, 21ನೇ ವಾರ ₹ 25 ಸಾವಿರ ವಾಪಸು ನೀಡುತ್ತೇವೆ. ₹ 50 ಸಾವಿರ ಕಟ್ಟಿದರೆ ವಾರಕ್ಕೆ ₹2,500ರಂತೆ 20 ವಾರ ಮತ್ತು 21ನೇ ವಾರ ₹ 50 ಸಾವಿರ ವಾಪಸು ನೀಡುತ್ತೇವೆ. ₹ 1 ಲಕ್ಷ ಕಟ್ಟಿದರೆ ವಾರಕ್ಕೆ ₹ 5 ಸಾವಿರದಂತೆ 20 ವಾರ ಹಾಗೂ 21ನೇ ವಾರ ₹ 1 ಲಕ್ಷ ವಾಪಸು ನೀಡುವುದಾಗಿ ನಂಬಿಸಿ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.

ಬಂಧಿತರ ಪೈಕಿ ರಿಜೇಶ್‌, ಗ್ರಾಹಕರನ್ನು ಕೇರಳದಿಂದ ಕರೆದುಕೊಂಡು ಬಂದು ಈ ವಂಚನೆಗೆ ಜಾಲಕ್ಕೆ ಸೇರಿಸಿರುವ ಸಂಗತಿ ವಿಚಾರಣೆ ವೇಳೆ ಗೊತ್ತಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.