ADVERTISEMENT

ಲಕ್ಷಾಂತರ ಹಣ ವಂಚನೆ: ಮೂವರ ಬಂಧನ

ಎಎಸ್‌ಐಗೆ ಕಾರು ಡಿಕ್ಕಿ ಹೊಡೆಸಿ ಪರಾರಿಗೆ ಯತ್ನ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2019, 19:40 IST
Last Updated 16 ಡಿಸೆಂಬರ್ 2019, 19:40 IST

ಬೆಂಗಳೂರು: ಬ್ಯಾಂಕಿನಿಂದ ಸಾಲ ಕೊಡಿಸುವುದಾಗಿ ಜಾಹೀರಾತು ನೀಡಿ ಲಕ್ಷಾಂತರ ರೂಪಾಯಿ ಪಡೆದು ವಂಚಿಸುತ್ತಿದ್ದ ಕೇರಳದ ಮೂವರನ್ನು ಕಬ್ಬನ್ ಪಾರ್ಕ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಎಂ. ಶರೂನ್, ರಿಬಿನ್ ಮತ್ತು ಸಯ್ಯದ್ ಅಹಮದ್ ಬಂಧಿತರು. ಸ್ಯಾಂಕಿ ರಸ್ತೆಯಲ್ಲಿರುವ ವಿಂಡ್ಸರ್ ಮ್ಯಾನರ್‌ ಹೋಟೆಲ್ ಮುಂಭಾಗದಲ್ಲಿ ಡಿ. 11ರಂದು ರಾತ್ರಿ ಬಂಧಿಸಲು ತೆರಳಿದ ಸಹಾಯಕ ಸಬ್ ಇನ್‌ಸ್ಪೆಕ್ಟರ್‌ (ಎಎಸ್‌ಐ) ಹನುಮಂತರಾಜು ಮೇಲೆ ಕಾರು ಡಿಕ್ಕಿ ಹೊಡೆದು ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದರು.

ಮಹಿಳೆಯರನ್ನು ಗುರಿ ಮಾಡಿಕೊಂಡು ರಾಷ್ಟ್ರೀಕೃತ ಬ್ಯಾಂಕುಗಳಿಂದ ₹ 33 ಕೋಟಿ ಹಣ ಬ್ಯಾಂಕ್ ಸಾಲ ಕೊಡಿಸುವುದಾಗಿ ನಂಬಿಸಿ, ಆರೋಪಿಗಳು ₹ 26 ಲಕ್ಷ ವಂಚಿಸಿದ ಆರೋಪ ಎದುರಿಸುತ್ತಿದ್ದಾರೆ. ಸಾಲ ಕೊಡಿಸುವುದಾಗಿ ಹೇಳಿ ಮಹಿಳೆಯೊಬ್ಬರಿಂದ ₹ 3 ಲಕ್ಷ ಕಮಿಷನ್‌ ಪಡೆದು ಆರೋಪಿಗಳು ಪರಾರಿಯಾಗಿದ್ದರು.

ADVERTISEMENT

ಆರೋಪಿಗಳು ವಂಚನೆ ಎಸಗಲೆಂದೇ ತಂಡ ಕಟ್ಟಿಕೊಂಡು ಕೇರಳದಲ್ಲಿ ಪತ್ರಿಕೆಗಳಲ್ಲಿ ಜಾಹೀರಾತು ನೀಡುತ್ತಿದ್ದರು. ಅಲ್ಲದೆ, ಸಾಲ ಕೊಡಿಸುವುದಾಗಿ ಮೊಬೈಲ್‌ಗಳಿಗೆ ಸಂದೇಶ ಕಳುಹಿಸುತ್ತಿದ್ದರು. ಸಾಲ ಪಡೆಯುವ ಆಸೆಯಿಂದ ಬಂದವರಿಂದ ಹಣ ಪಡೆದು ವಂಚಿಸುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದರು.

ಎಎಸ್‌ಐ ಅವರಿಗೆ ಕಾರು ಗುದ್ದಿಸಿ ಪರಾರಿಯಾಗಿರುವ ಜೈಸನ್ ವರ್ಗೀಸ್‌, ಪ್ರಣವ್, ರಫೀಕ್ ಅವರ ಬಂಧನಕ್ಕೆ ಕ್ರಮ ವಹಿಸಲಾಗಿದೆ ಎಂದೂ ಅಧಿಕಾರಿ ತಿಳಿಸಿದರು.

ಹನುಮಂತರಾಜು ಅವರಿಗೆ ಕಾರು ಗುದ್ದಿಸಿ ಪರಾರಿಯಾಗಿರುವ ಆರೋಪಿಗಳ ವಿರುದ್ಧ ಹೈಗ್ರೌಂಡ್‌ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ, ಕರ್ತವ್ಯಕ್ಕೆ ಅಡ್ಡಿ ಆರೋಪದಡಿ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿದ್ದ ಪಿಎಸ್‌ಐ ರೇಣುಕಾ ನೇತೃತ್ವದ ತಂಡಕ್ಕೆ ಆರೋಪಿಗಳು ಡಿ.11ರಂದು ರಾತ್ರಿ ವಿಂಡ್ಸರ್ ಮ್ಯಾನರ್ ಹೋಟೆಲ್‌ಗೆ ಬರುವ ಬಗ್ಗೆ ಸುಳಿವು ಸಿಕ್ಕಿತ್ತು. ತನಿಖಾ ತಂಡ ಅಲ್ಲಿಗೆ ತೆರಳಿ ಆರೋಪಿಗಳ ಬಂಧನಕ್ಕೆ ಕಾದಿತ್ತು.

ರಾತ್ರಿ 11.30ರ ಸುಮಾರಿಗೆ ಕಾರಿನಲ್ಲಿ ಬಂದ ನಾಲ್ಕೈದು ಮಂದಿಯನ್ನು ಬಂಧಿಸಲು ಪೊಲೀಸರ ತಂಡ ಮುಂದಾಗುತ್ತಿದ್ದಂತೆ ಪೊಲೀಸರನ್ನೇ ತಳ್ಳಿ ಮೂವರು ಪರಾರಿಯಾಗಲು ಯತ್ನಿಸಿದ್ದಾರೆ. ಅವರನ್ನು ಬೆನ್ನಟ್ಟಿದ್ದ ಹೆಡ್‌ ಕಾನ್‌ಸ್ಟೆಬಲ್‌ ಕೃಷ್ಣಮೂರ್ತಿ ಅವರು ಶರೂನ್ ಎಂ. ಅಲಿಯಾಸ್ ಅರವಿಂದ್‌ನನ್ನು ಹಿಡಿದಿದ್ದಾರೆ. ಹೆಡ್‌ ಕಾನ್‌ಸ್ಟೆಬಲ್‌ ರವೀಂದ್ರ ಹಾಗೂ ಸಚ್ಚಿದಾನಂದ ಅವರು ರಿಬಿನ್ ಎಂಬಾತನನ್ನು, ಕಾನ್‌ಸ್ಟೆಬಲ್‌ಗಳಾದ ಪ್ರಶಾಂತ್ ಹಾಗೂ ಶ್ರೀನಿವಾಸ್ ಅವರು ಸಯ್ಯದ್ ಅಹಮದ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.

ಕಾರು ನಿಲ್ಲಿಸದೆ ಚಾಲಕ ಹಾಗೂ ಇತರ ಇಬ್ಬರು ತೆರಳುತ್ತಿದ್ದರು. ಅವರನ್ನು ಬಂಧಿಸಲು ಹನುಮಂತರಾಜು ಅವರು ಬೈಕ್‌ನಲ್ಲಿ ಹಿಂಬಾಲಿಸಿದ್ದರು. ಆದರೆ, ಆರೋಪಿಗಳು ಎಎಸ್‌ಐ ಅವರ ಬೈಕ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ. ಬೈಕ್‌ನಿಂದ ಕೆಳಗೆ ಬಿದ್ದ ಹನುಮಂತರಾಜು ಅವರನ್ನು ಇತರ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.