ADVERTISEMENT

‘ಪುಸ್ತಕ ಓದಿದ ಅನುಭವ ಕಟ್ಟಿಕೊಡುವ ಸಿನಿಮಾ’

ಮೂಕಜ್ಜಿಯ ಕನಸುಗಳು ವಿಚಾರಗೋಷ್ಠಿಯಲ್ಲಿ ಕೃಷ್ಣಮೂರ್ತಿ ಹನೂರು ಅಭಿಮತ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2019, 20:06 IST
Last Updated 28 ಏಪ್ರಿಲ್ 2019, 20:06 IST
ನಿರ್ದೇಶಕ ಪಿ.ಶೇಷಾದ್ರಿ ಮತ್ತು ಅವರ ಪತ್ನಿ ಮಧುಮತಿ ಹಾಗೂ ಮಗ ಪ್ರಥಮ್ ಅವರನ್ನು ಸಾಹಿತಿ ಎಸ್.ಎಲ್‌.ಭೈರಪ್ಪ ಅವರು ಸನ್ಮಾನಿಸಿದರು. (ಎಡದಿಂದ) ಸಾಹಿತಿದೊಡ್ಡಹುಲ್ಲೂರು ರುಕ್ಕೋಜಿ, ಟಿ.ಎಸ್‌.ನಾಗಾಭರಣ, ಗಿರೀಶ್ ಕಾಸರವಳ್ಳಿ, ಕೃಷ್ಣಮೂರ್ತಿ ಹನೂರು, ಎಚ್‌.ಆರ್‌.ಸ್ವಾಮಿ ಹಾಗೂ ಇತರರು ಇದ್ದಾರೆ –ಪ್ರಜಾವಾಣಿ ಚಿತ್ರ
ನಿರ್ದೇಶಕ ಪಿ.ಶೇಷಾದ್ರಿ ಮತ್ತು ಅವರ ಪತ್ನಿ ಮಧುಮತಿ ಹಾಗೂ ಮಗ ಪ್ರಥಮ್ ಅವರನ್ನು ಸಾಹಿತಿ ಎಸ್.ಎಲ್‌.ಭೈರಪ್ಪ ಅವರು ಸನ್ಮಾನಿಸಿದರು. (ಎಡದಿಂದ) ಸಾಹಿತಿದೊಡ್ಡಹುಲ್ಲೂರು ರುಕ್ಕೋಜಿ, ಟಿ.ಎಸ್‌.ನಾಗಾಭರಣ, ಗಿರೀಶ್ ಕಾಸರವಳ್ಳಿ, ಕೃಷ್ಣಮೂರ್ತಿ ಹನೂರು, ಎಚ್‌.ಆರ್‌.ಸ್ವಾಮಿ ಹಾಗೂ ಇತರರು ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಒಂದು ಸಿನಿಮಾ ನೋಡುವುದು ಒಂದು ಪುಸ್ತಕ ಓದುವುದಕ್ಕೆ ಸಮಾನ. ಪಿ.ಶೇಷಾದ್ರಿಯವರು ತಮ್ಮಸಿನಿಮಾಗಳ ಮೂಲಕ ಪುಸ್ತಕ ಓದಿದ ಅನುಭವವನ್ನು ಕಟ್ಟಿಕೊಡುತ್ತಾರೆ’ ಎಂದು ಸಾಹಿತಿ ಕೃಷ್ಣಮೂರ್ತಿ ಹನೂರುಅಭಿಪ್ರಾಯಪಟ್ಟರು.

ಕೆ.ಶಿವರಾಮ ಕಾರಂತ ಕಾದಂಬರಿ ಆಧಾರಿತ ‘ಮೂಕಜ್ಜಿಯ ಕನಸುಗಳು’ ಚಲನಚಿತ್ರದ ಕುರಿತು ಪ್ರೀತಿ ಪುಸ್ತಕ ಪ್ರಕಾಶನವು ನಗರದಲ್ಲಿ ಭಾನುವಾರ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಶೇಷಾದ್ರಿಯವರು ನಿರ್ದೇಶನ ಮಾಡಿದ ಅಷ್ಟೂ ಸಿನಿಮಾಗಳಲ್ಲಿ ಮೂಕಜ್ಜಿಯ ಕನಸುಗಳು ಉತ್ತಮ ಚಿತ್ರ. ಗ್ರಾಮೀಣ ಪ್ರದೇಶದಿಂದ ಬಂದ ಅವರ ಚಿತ್ರಗಳಲ್ಲಿಯೂ ಹಳ್ಳಿ ಸೊಬಗಿನ ಸ್ಪರ್ಶವಿರುತ್ತದೆ. ಸಿನಿಮಾಕ್ಕೆ ಬಂದ ಬಳಿಕವೂ ಸಾಹಿತ್ಯದ ಸಾಂಗತ್ಯವನ್ನು ಅವರು ಬಿಟ್ಟಿಲ್ಲ. ಇದಕ್ಕೆ ಅವರ ನಿರ್ದೇಶನದ ಸಿನಿಮಾಗಳೇ ಸಾಕ್ಷಿ’ ಎಂದು ಹೇಳಿದರು.

ADVERTISEMENT

ಚಲನಚಿತ್ರ ನಿರ್ದೇಶಕಗಿರೀಶ್‌ ಕಾಸರವಳ್ಳಿ,‘ಶಿವರಾಮ ಕಾರಂತರು ಕನ್ನಡದ ಅತಿದೊಡ್ಡ ಕಾದಂಬರಿಕಾರರು. ಆದರೆ, ಚೋಮನದುಡಿ ಸಿನಿಮಾ ಆಗುವವರೆಗೂ ಅವರ ಪುಸ್ತಕಗಳ ಕಡೆ ಯಾವ ನಿರ್ದೇಶಕರೂ
ಗಮನಹರಿಸಿರಲಿಲ್ಲ’ ಎಂದರು.

‘ಚೋಮನದುಡಿಯ ಬಳಿಕ ಚಿಗುರಿದ ಕನಸು, ಬೆಟ್ಟದ ಜೀವ, ಸರಸಮ್ಮನ ಸಮಾಧಿ ಹಾಗೂ ಕುಡಿಯರ ಕೂಸು ಕಾದಂಬರಿಗಳು ಚಿತ್ರಗಳಾದವು. ಈಗ ಪಿ.ಶೇಷಾದ್ರಿಯವರು
ಮೂಕಜ್ಜಿಯ ಕನಸು ಕಾದಂಬರಿಯನ್ನು ಸಿನಿಮಾ ಮಾಡಿರುವುದು ಖುಷಿ ತಂದಿದೆ’ ಎಂದು ಹೇಳಿದರು.

‘ಮೂಕಜ್ಜಿ ನೋವುಂಡ ಜೀವ. ಆದರೆ, ಆಕೆ ಅದನ್ನು ಕಹಿ ಎಂದು ಸ್ವೀಕರಿಸುವುದಿಲ್ಲ. ಆ ನೋವೇ ಲೋಕದೃಷ್ಟಿಯನ್ನು ಬೆಳೆಸಿ ಅವಳನ್ನು ಪಕ್ವವಾಗಿಸುತ್ತದೆ. ನೋವನ್ನು ಹೇಳಿಕೊಳ್ಳಲಾಗದೆ ಆಕೆ ಮೌನವಾಗುತ್ತಾಳೆ. ಸಂಕಟಗಳನ್ನೆಲ್ಲಾ ಒಳಗೆ ತೆಗೆದುಕೊಳ್ಳುತ್ತಾಳೆ. ಅದು ಮೂಕಜ್ಜಿಗೆ ಒಳನೋಟವೊಂದನ್ನು ಒದಗಿಸುತ್ತದೆ. ಅದನ್ನು ಶೇಷಾದ್ರಿ ಸಿನಿಮಾದಲ್ಲಿ ಚೆನ್ನಾಗಿ ಚಿತ್ರಿಸಿದ್ದಾರೆ’ ಎಂದರು.

ಚಲನಚಿತ್ರ ನಿರ್ದೇಶಕ ಟಿ.ಎಸ್‌.ನಾಗಾಭರಣ, ‘ಎಲ್ಲ ನಿರ್ದೇಶಕರಿಗೂ ಕಾದಂಬರಿಯನ್ನು ತೆರೆಯ ಮೇಲೆ ತರಲು ಸಾಧ್ಯವಿಲ್ಲ. ಕಾದಂಬರಿಗಳ ಆತ್ಮವನ್ನು ಹಿಡಿದು ಸಿನಿಮಾ ಮಾಡುವ ಕಲೆ ಎಲ್ಲರಿಗೂ ದಕ್ಕುವುದಿಲ್ಲ. ಈ ನಿಟ್ಟಿನಲ್ಲಿ ಶೇಷಾದ್ರಿ ಅವರದು ಅದ್ಭುತವಾದ ಪ್ರಯೋಗ’ ಎಂದರು.

ಸಾಹಿತಿಎಸ್.ಎಲ್.ಭೈರಪ್ಪ ಮಾತನಾಡಿ,‘ವಾಣಿಜ್ಯ ಉದ್ದೇಶಕ್ಕೆ ಸಿನಿಮಾ ಮಾಡಬಾರದು. ಸಮಾಜಕ್ಕೆ ಏನಾದರೂ ಸಂದೇಶ ನೀಡಬೇಕು ಎನ್ನುವ ಉದ್ದೇಶದಿಂದ ಸಿನಿಮಾ ಮಾಡಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.