ADVERTISEMENT

ಭರ್ತಿಯಾಗಿ ಕಾರ್ಯಾಚರಣೆ: ‘ಅಂಬಾರಿ ಉತ್ಸವ’ ಬಸ್‌ಗೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 11 ಮೇ 2023, 19:46 IST
Last Updated 11 ಮೇ 2023, 19:46 IST
ಅಂಬಾರಿ ಉತ್ಸವ್ ಬಸ್‌
ಅಂಬಾರಿ ಉತ್ಸವ್ ಬಸ್‌   

ಬೆಂಗಳೂರು:‌ ಕೆಎಸ್‌ಆರ್‌ಟಿಸಿ ಹೊಸದಾಗಿ ಆರಂಭಿಸಿರುವ ‘ಅಂಬಾರಿ ಉತ್ಸವ್‌’ ಸ್ಲೀಪರ್‌ ಬಸ್‌ಗಳಿಗೆ ಭಾರಿ ಬೇಡಿಕೆ ಬಂದಿದ್ದು, ಪ್ರತಿನಿತ್ಯ ಭರ್ತಿಯಾಗಿ ಕಾರ್ಯಾಚರಣೆ ಮಾಡುತ್ತಿವೆ.

ಒಟ್ಟು 20 ಬಸ್‌ಗಳ ಕಾರ್ಯಾಚರಣೆಯನ್ನು ಕೆಎಸ್‌ಆರ್‌ಟಿಸಿ ಆರಂಭಿಸಿದ್ದು, ಒಂಬತ್ತು ಮಾರ್ಗಗಳಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಪ್ರತಿನಿತ್ಯ ಸರಾಸರಿ 4700 ಕಿಲೋ ಮೀಟರ್‌ಗೂ ಅಧಿಕ ಕಾರ್ಯಾಚರಣೆ ಮಾಡುತ್ತಿವೆ.

ಐಷಾರಾಮಿ ಬಸ್‌ನಲ್ಲಿ ಅರಾಮದಾಯಕ ಪ್ರಯಾಣಕ್ಕೆ ಪ್ರಯಾಣಿಕರು ಒಲವು ತೋರಿಸುತ್ತಿದ್ದು, ಎಲ್ಲ ಬಸ್‌ಗಳು ಭರ್ತಿಯಾಗಿ ಕಾರ್ಯಾಚರಣೆ ಮಾಡುತ್ತಿವೆ. ಫೆಬ್ರುವರಿ 26ರಿಂದ ಕಾರ್ಯಾಚರಣೆ ಆರಂಭಿಸಿದ್ದು, ಪ್ರತಿ ಕಿಲೋ ಮೀಟರ್‌ಗೆ ಸರಾಸರಿ ₹78.15 ವರಮಾನ ಸಂಗ್ರಹವಾಗುತ್ತಿದೆ. ಈವರೆಗೆ ₹4 ಕೋಟಿಗೂ ಅಧಿಕ ವರಮಾನವನ್ನು ನಿಗಮಕ್ಕೆ ತಂದುಕೊಟ್ಟಿವೆ.

ADVERTISEMENT

ಬೆಂಗಳೂರಿನಿಂದ ಎರ್ನಾಕುಲಂ, ತ್ರಿಶ್ಶೂರು, ಹೈದರಾಬಾದ್, ಪಣಜಿ, ಚೆನ್ನೈ ಮತ್ತು ಮುರುಡೇಶ್ವರಕ್ಕೆ ಬಸ್‌ಗಳು ನಿತ್ಯ ಕಾರ್ಯಾಚರಣೆ ಮಾಡುತ್ತಿವೆ.

‘ದೂರದ ಊರುಗಳಿಗೆ ತೆರಳಲು ಪ್ರಯಾಣಿಕರು ಸ್ಲೀಪರ್‌ ಬಸ್‌ಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಅಂಬಾರಿ ಉತ್ಸವ್ ಬಸ್‌ಗಳು ನಿಗಮಕ್ಕೆ ವರಮಾನ ತಂದುಕೊಡುತ್ತಿವೆ. ಸ್ಲೀಪರ್‌ ಬಸ್‌ಗಳಿಗೆ ಬೇಡಿಕೆ ಇದೆ ಎಂಬುದು ಇದರಿಂದ ಅರ್ಥವಾಗಿದೆ. ಮುಂದಿನ ದಿನಗಳಲ್ಲಿ ಖರೀದಿಸುವ ಹೊಸ ಐಷಾರಾಮಿ ಬಸ್‌ಗಳನ್ನು ಸ್ಲೀಪರ್ ಸೇವೆಗಾಗಿಯೇ ಬಳಕೆ ಮಾಡಲಾಗುವುದು’ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದರು.

ಹವಾನಿಯಂತ್ರಿತ ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆಗೂ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಅವರು ವಿವರಿಸಿದರು.

ಬಿಎಂಟಿಸಿಗೆ ಒಂದೇ ದಿನ ₹8 ಕೋಟಿ ವರಮಾನ

ಮತದಾನದ ಹಿಂದಿನ ದಿನ ಮತ್ತು ಮರುದಿನ ಹೊರ ಜಿಲ್ಲೆಗಳಲ್ಲೂ ಕಾರ್ಯಾಚರಣೆ ಮಾಡಿದ ಬಿಎಂಟಿಸಿ ಬಸ್‌ಗಳು ಜನರಿಗೆ ಅನುಕೂಲ ಕಲ್ಪಿಸುವ ಜತೆಗೆ ದಾಖಲೆಯ ವರಮಾನ ಸಂಗ್ರಹಿಸಿವೆ.

ಸಾಮಾನ್ಯವಾಗಿ ದಿನಕ್ಕೆ ₹3 ಕೋಟಿಯಿಂದ ₹4 ಕೋಟಿ ತನಕ ವರಮಾನ ಸಂಗ್ರಹಿಸುವ ಬಿಎಂಟಿಸಿ ಗುರುವಾರ ಒಂದೇ ದಿನ ₹8 ಕೋಟಿ ವರಮಾನ ಸಂಗ್ರಹಿಸಿ ದಾಖಲೆ ಬರೆದಿದೆ. ಕೆಎಸ್‌ಆರ್‌ಟಿಸಿಯಲ್ಲಿ 8100 ಬಸ್‌ಗಳಿದ್ದು ಮತಯಂತ್ರಗಳನ್ನು ಕೊಂಡೊಯ್ಯಲು ಮತ್ತು ಪೊಲೀಸ್ ಸಿಬ್ಬಂದಿ ಕರೆದೊಯ್ಯಲು 3700 ಬಸ್‌ಗಳನ್ನು ಚುನಾವಣಾ ಆಯೋಗ ಬಳಸಿಕೊಂಡಿತ್ತು.

ಪ್ರಯಾಣಿಕರಿಗೆ ಆಗಲಿರುವ ಅನಾನುಕೂಲ ತಪ್ಪಿಸಲು ಹೊರ ಜಿಲ್ಲೆಗಳಿಗೆ ಬಿಎಂಟಿಸಿ ಬಸ್‌ಗಳ ಕಾರ್ಯಾಚರಣೆಗೂ ಅವಕಾಶ ನೀಡಿತ್ತು. ಮತದಾನದ ಹಿಂದಿನ ದಿನ ಬಿಎಂಟಿಸಿಯ 550 ಮತ್ತು ಮರು ದಿನ 300 ಬಸ್‌ಗಳು ಹೊರ ಜಿಲ್ಲೆಗಳಿಗೆ ಕಾರ್ಯಾಚರಣೆ ಮಾಡಿವೆ. ವೋಲ್ವೊ ಮತ್ತು ಸಾಮಾನ್ಯ ಬಸ್‌ಗಳನ್ನೂ ಬಿಎಂಟಿಸಿ ಕಾರ್ಯಾಚರಣೆಗೆ ಇಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.