ADVERTISEMENT

ಬೆಂಗಳೂರಿನಲ್ಲಿ ಒಂದೇ ದಿನ 783 ಮಂದಿಗೆ ಕೋವಿಡ್‌ ಸೋಂಕು

ಸೋಂಕಿತರ ಸಂಖ್ಯೆ 3,314ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2020, 21:39 IST
Last Updated 28 ಜೂನ್ 2020, 21:39 IST
ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಕೋವಿಡ್‌ ಕೇರ್‌ ಸೆಂಟರ್‌ಗಾಗಿ ಸಿದ್ಧತೆ ಮಾಡಲಾಗುತ್ತಿದೆ – ಪ್ರಜಾವಾಣಿ ಚಿತ್ರ
ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಕೋವಿಡ್‌ ಕೇರ್‌ ಸೆಂಟರ್‌ಗಾಗಿ ಸಿದ್ಧತೆ ಮಾಡಲಾಗುತ್ತಿದೆ – ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಭಾನುವಾರ ಒಂದೇ ದಿನ 783 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಇದರಿಂದಾಗಿ ಸೋಂಕಿತರ ಸಂಖ್ಯೆ 3,314ಕ್ಕೆ ತಲುಪಿದೆ.

ಸತತ ಎರಡನೇ ದಿನ ಕೂಡ ಸೋಂಕಿತರ ಸಂಖ್ಯೆ 500ರ ಗಡಿ ದಾಟಿದ್ದು, ನಗರದಲ್ಲಿ 48 ಗಂಟೆಗಳಲ್ಲೇ 1,379 ಮಂದಿ ಕೋವಿಡ್ ಪೀಡಿತರಾಗಿ ಆಸ್ಪತ್ರೆಗೆ ಸೇರಿದ್ದಾರೆ. ವಿವಿಧ ಆಸ್ಪತ್ರೆಗಳಲ್ಲಿ 2,692 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಲು ಪೂರ್ಣ ಪ‍್ರಮಾಣದಲ್ಲಿ ಸಜ್ಜಾಗಿಲ್ಲ. ಹಾಗಾಗಿ, ಸರ್ಕಾರಿ ಆಸ್ಪತ್ರೆಯಲ್ಲಿಯೇ ರೋಗಿಗಳನ್ನು ದಾಖಲಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಈಗಾಗಲೇ ವಿಕ್ಟೋರಿಯಾ, ಬೌರಿಂಗ್, ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ ಹಾಸಿಗೆಗಳು ಭರ್ತಿಯಾಗಿವೆ.

ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಾಲ್ವರು ಸೋಂಕಿತರಾಗಿದ್ದಾರೆ. ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಒಬ್ಬರು ವೈದ್ಯರು, ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಶುಶ್ರೂಷಕಿಯೊಬ್ಬರು ಕೋವಿಡ್ ಪೀಡಿತರಾಗಿದ್ದಾರೆ. ಅವರೊಂದಿಗೆ ಸಂಪರ್ಕದಲ್ಲಿದ್ದ 20 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಬಸವನಗುಡಿಯ ಎನ್‌.ಆರ್. ಕಾಲೊನಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಸೋಂಕಿತರಾಗಿದ್ದಾರೆ.

ADVERTISEMENT

ವಿಜಯನಗರದಲ್ಲಿ ಕ್ಲಿನಿಕ್ ನಡೆಸುತ್ತಿದ್ದ ಬಾಪೂಜಿ ಬಡಾವಣೆಯ ದಂತ ವೈದ್ಯರೊಬ್ಬರು ಕೋವಿಡ್‌ ಪೀಡಿತರಾಗಿದ್ದಾರೆ. ಅವರಿಗೆ ಸೋಂಕಿನ ಲಕ್ಷಣಗಳು ಬಹಿರಂಗವಾಗಿ ಗೋಚರಿಸದ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಆರೈಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ಮೃತರ ಸಂಖ್ಯೆ 88ಕ್ಕೆ: ನಗರದಲ್ಲಿ ಮತ್ತೆ ನಾಲ್ಕು ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಇವರು ಮಧು
ಮೇಹ ಹಾಗೂ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಕೂಡ ಬಳಲುತ್ತಿದ್ದರು. ನಗರದಲ್ಲಿ ಕೋವಿಡ್‌ಗೆ ಸಾವಿಗೀಡಾದವರ ಸಂಖ್ಯೆ 88ಕ್ಕೆ ಏರಿಕೆಯಾಗಿದೆ.

ಸಂಚಾರ ಪೊಲೀಸ್‌ ಠಾಣೆ ಸೀಲ್‌ಡೌನ್‌(ಯಲಹಂಕ ವರದಿ): ಇಲ್ಲಿನ ಸಂಚಾರ ಪೊಲೀಸ್ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸಂಚಾರ ಪೊಲೀಸ್ ಠಾಣೆಯನ್ನು ಸೀಲ್‌ಡೌನ್‌ ಮಾಡಲಾಗಿದೆ.

ಎಸಿಪಿಯವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕನಿಂದ ಸೋಂಕು ಹರಡಿರಬಹುದು ಎಂಬ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಡಿ.ಜಿ ಹಳ್ಳಿ ಠಾಣೆಯಿಂದ ಇಲ್ಲಿನ ಠಾಣೆಗೆ ನಿಯೋಜನೆಗೊಂಡ ಸಹಾಯಕ ಸಬ್ ಇನ್‌ಸ್ಪೆಕ್ಟರ್‌ ಒಬ್ಬರಿಗೂ ಸೋಂಕು ತಗಲಿರುವುದು ಶನಿವಾರ ದೃಢಪಟ್ಟಿದೆ.

155 ರೋಗಿಗಳ ಸ್ಥಿತಿ ಗಂಭೀರ
ಕೊರೊನಾ ಸೋಂಕಿತ ಬಹುತೇಕ ರೋಗಿಗಳಲ್ಲಿ ರೋಗ ಲಕ್ಷಣಗಳು ಬಹಿರಂಗವಾಗಿ ಗೋಚರಿಸದಿರುವುದು ಬಿಬಿಎಂಪಿ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಅವರ ಸಂಪರ್ಕಿತರನ್ನು ಪತ್ತೆ ಮಾಡಲು ಸಾಧ್ಯವಾಗದೆ ಅಧಿಕಾರಿಗಳು ಕೈಚೆಲ್ಲಲಾರಂಭಿಸಿದ್ದಾರೆ. ಬಹಳಷ್ಟು ರೋಗಿಗಳಿಗೆ ಸೋಂಕು ತಗುಲಿರುವುದು ನಿಗೂಢವಾಗಿಯೇ ಇದೆ. ಇನ್ನೊಂದೆಡೆ, ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಾಗುತ್ತಿರುವ ರೋಗಿಗಳ ಸಂಖ್ಯೆ ಕೂಡ ಹೆಚ್ಚಳವಾಗುತ್ತಿದೆ. ಭಾನುವಾರ ಮತ್ತೆ 35 ರೋಗಿಗಳನ್ನು ಐಸಿಯುವಿನಲ್ಲಿ ದಾಖಲಿಸಿಕೊಳ್ಳಲಾಗಿದೆ. ಇದರಿಂದಾಗಿ ತೀವ್ರ ನಿಗಾ ಘಟಕಕ್ಕೆ ದಾಖಲಾದ ರೋಗಿಗಳ ಸಂಖ್ಯೆ155ಕ್ಕೆ ಏರಿಕೆಯಾಗಿದೆ.

ಮತ್ತೊಬ್ಬ ಕಾರ್ಪೊರೇಟರ್‌ಗೆ ಸೋಂಕು
ನಗರದ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವಾರ್ಡ್‌ವೊಂದರ ಪಾಲಿಕೆ ಸದಸ್ಯರೊಬ್ಬರಿಗೆ ಕೊರೊನಾ ಸೋಂಕು ತಗುಲಿದೆ. ಅವರು ಖಾಸಗಿ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಿಕೊಂಡಿದ್ದರು. ಇದರೊಂದಿಗೆ ಒಟ್ಟು ಮೂವರು ಕಾರ್ಪೊರೇಟರ್‌ಗಳಿಗೆ ಸೋಂಕು ತಗುಲಿದಂತಾಗಿದೆ.

‘ಖಾಸಗಿ ಪ್ರಯೋಗಾಲಯದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಪಾಲಿಕೆ ಸದಸ್ಯರಿಗೆ ಸೋಂಕು ದೃಢಪಟ್ಟ ಬಗ್ಗೆ ಮಾಹಿತಿ ಇದೆ. ಆದರೆ, ಐಸಿಎಂಆರ್‌ ಪೋರ್ಟಲ್‌ನಲ್ಲಿ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.