ADVERTISEMENT

RR ನಗರ ವಿಧಾನಸಭಾ ಕ್ಷೇತ್ರದಲ್ಲಿ ನಕಲಿ ಬಿಲ್‌ ಕೊಟ್ಟು ₹ 118.26 ಕೋಟಿ ಗುಳುಂ!

ಆರ್‌.ಆರ್‌. ನಗರದಲ್ಲಿ ಕಾಮಗಾರಿ ನಿರ್ವಹಿಸದೆ ಬಿಲ್‌ ಪಾವತಿ

ರಾಜೇಶ್ ರೈ ಚಟ್ಲ
Published 9 ಫೆಬ್ರುವರಿ 2022, 3:47 IST
Last Updated 9 ಫೆಬ್ರುವರಿ 2022, 3:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜರಾಜೇಶ್ವರಿನಗರ (ಆರ್‌.ಆರ್‌. ನಗರ) ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿಮುಖ್ಯಮಂತ್ರಿಯ ನವ ನಗರೋತ್ಥಾನ ಯೋಜನೆಯಡಿ ಮಂಜೂರಾದ ಕಾಮಗಾರಿಗಳನ್ನು ನಿರ್ವಹಿಸದೆ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಐಡಿಎಲ್‌) ನಕಲಿ ಬಿಲ್ ಪಾವತಿಸಿ ರಾಜ್ಯದ ಬೊಕ್ಕಸಕ್ಕೆ ₹ 118.26 ಕೋಟಿ ನಷ್ಟ ಉಂಟು ಮಾಡಿರುವುದು ಲೋಕಾಯುಕ್ತ ತನಿಖೆಯಿಂದ ಬಹಿರಂಗವಾಗಿದೆ.

‘ಆರ್‌.ಆರ್‌. ನಗರ ಕ್ಷೇತ್ರದಲ್ಲಿ 2020ರ ಜನವರಿಯಲ್ಲಿ 126 ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸದೆ ₹ 250 ಕೋಟಿ ಲಪಟಾಯಿಸಿ ಭ್ರಷ್ಟಾಚಾರ ಎಸಗಲಾಗಿದೆ’ ಎಂದು ಆರೋಪಿಸಿದ್ದ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್‌ ಸಂಸದ ಡಿ.ಕೆ. ಸುರೇಶ್‌ ಅವರು, ದಾಖಲೆಗಳ ಸಹಿತ 2020ರ ಸೆಪ್ಟೆಂಬರ್‌ನಲ್ಲಿ ಲೋಕಾಯುಕ್ತರಿಗೆ ದೂರು ನೀಡಿದ್ದರು. 'ಈ ಪ್ರಕರಣದಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ತಪ್ಪಿತಸ್ಥ ಎಂಜಿನಿಯರ್‌ಗಳನ್ನು ಬಂಧಿಸಿ ವಿಚಾರಣೆ ನಡೆಸಬೇಕು' ಎಂದು ವಿನಂತಿಸಿದ್ದರು.

ಈ ಬಗ್ಗೆ ತನಿಖೆ ನಡೆಸಿದ್ದ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ (ಜ.27ರಂದು ನಿವೃತ್ತರಾಗಿದ್ದಾರೆ), 60 ಪುಟಗಳ ವರದಿಯನ್ನು ಜ.24ರಂದು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ವರದಿ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ADVERTISEMENT

‘ಒಟ್ಟು ಕಾಮಗಾರಿಗಳ ಪೈಕಿ 114 ಕಾಮಗಾರಿಗಳ ಅನುಷ್ಠಾನದಲ್ಲಿ ಭಾರಿ ಪ್ರಮಾಣದ ಲೋಪಗಳನ್ನು ಪತ್ತೆ ಹಚ್ಚಲಾಗಿದೆ. ಕಾಮಗಾರಿ ಅನುಷ್ಠಾನಗೊಳಿಸದೇ ಇದ್ದರೂ ಕೆಆರ್‌ಐಡಿಎಲ್‌ಗೆ ₹ 118.25 ಕೋಟಿ ಹೆಚ್ಚುವರಿಯಾಗಿ ಪಾವತಿಸಿ ಸರ್ಕಾರಕ್ಕೆ ನಷ್ಟ ಉಂಟು ಮಾಡಲಾಗಿದೆ’ ಎಂದು ವರದಿ ಉಲ್ಲೇಖಿಸಿದೆ.

ಕೆಲವು ಕಾಮಗಾರಿಗಳ ಅನುಷ್ಠಾನವೇ ಆಗಿಲ್ಲ. ಕೆಲವು ಕಾಮಗಾರಿಗಳಲ್ಲಿ ಹೆಚ್ಚುವರಿ ಅಳತೆ ನಮೂದಿಸಲಾಗಿದೆ, ಕೆಲವು ಕಳಪೆ ಗುಣಮಟ್ಟದಿಂದ ಕೂಡಿದ್ದು, ಇನ್ನೂ ಕೆಲವು ಕಾಮಗಾರಿಗಳನ್ನು ಟೆಂಡರ್‌ನಲ್ಲಿ ನಿರ್ದಿಷ್ಟಪಡಿಸಿದ ಅಂಶಗಳಂತೆ ಅನುಷ್ಠಾನಗೊಳಿಸದಿರುವ ಬಗ್ಗೆ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಪ್ರತಿ ಕಾಮಗಾರಿಯಲ್ಲಿ ಆಗಿರುವ ಬಹುಕೋಟಿ ಹಣ ದುರುಪಯೋಗದ ಬಗ್ಗೆಯೂ ವಿವರಿಸಲಾಗಿದೆ.

‘ಆಪಾದಿತ ನೌಕರರು ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಕೆಲಸ ನಿರ್ವಹಿಸದೇ ಇದ್ದರೂ ಹಣ ಪಾವತಿ ಮಾಡಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು. ಕರ್ನಾಟಕ ನಾಗರಿಕ ಸೇವೆಗಳು (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮ 14–ಎ ಅಡಿ ಇಲಾಖಾ ವಿಚಾರಣೆಗೆ ಅನುಮತಿ ನೀಡಬೇಕು’ ಎಂದು ಸೂಚಿಸಿದ್ದಾರೆ.

ವರದಿ ತಲುಪಿದ ಎರಡು ತಿಂಗಳ ಒಳಗೆ ಎಲ್ಲ ಆಪಾದಿತರ ಮೇಲೆ ತೆಗೆದುಕೊಂಡ ಕ್ರಮ ಅಥವಾ ತೆಗೆದುಕೊಳ್ಳಲು ಉದ್ದೇಶಿಸಿದ ಕ್ರಮಗಳ ಬಗ್ಗೆ ಲೋಕಾಯುಕ್ತಕ್ಕೆ ಮಾಹಿತಿ ನೀಡಬೇಕು ಎಂದೂ ತನಿಖಾ ವರದಿಯಲ್ಲಿ ಆದೇಶಿಸಿದ್ದಾರೆ.

ಆಪಾದಿತರು ಯಾರೆಲ್ಲ?
*ದೊಡ್ಡಯ್ಯ, ಮುಖ್ಯ ಎಂಜಿನಿಯರ್‌, ತಾಂತ್ರಿಕ ಮತ್ತು ಜಾಗೃತ ಕೋಶ (ಟಿವಿಸಿಸಿ), ಬಿಬಿಎಂಪಿ ಮುಖ್ಯ ಕಚೇರಿ

* ಸತೀಶ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ಟಿವಿಸಿಸಿ, ಬಿಬಿಎಂಪಿ

*ಬಸವರಾಜ್, ಕಾರ್ಯಪಾಲಕ ಎಂಜಿನಿಯರ್‌ (ಸಹಾಯಕಕಾರ್ಯಪಾಲಕ ಎಂಜಿನಿಯರ್‌ ಪ್ರಭಾರ), ಆರ್‌ಆರ್‌ ನಗರ ಉಪ ವಿಭಾಗ

*ಸಿದ್ದರಾಮಯ್ಯ, ಸಹಾಯಕ ಎಂಜಿನಿಯರ್‌, ವಾರ್ಡ್‌ ನಂ 129 ಮತ್ತು 160,ಆರ್‌ಆರ್‌ ನಗರ ಉಪ ವಿಭಾಗ

* ಉಮೇಶ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ (ಸಹಾಯಕ ಎಂಜಿನಿಯರ್‌ ಪ್ರಭಾರ, ವಾರ್ಡ್‌ ನಂಬರ್‌ 73, ಲಗ್ಗೆರೆ ಉಪ ವಿಭಾಗ)

*ಚಂದ್ರನಾಥ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ಕೆಆರ್‌ಐಡಿಎಲ್‌

*ಶ್ರೀನಿವಾಸ್, ಕಾರ್ಯಪಾಲಕ ಎಂಜಿನಿಯರ್‌, ಕೆಆರ್‌ಐಡಿಎಲ್‌

* ವೆಂಕಟಲಕ್ಷ್ಮಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ಟಿವಿಸಿಸಿ, ಬಿಬಿಎಂಪಿ

*ಶ್ರೀತೇಜ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ಟಿವಿಸಿಸಿ, ಬಿಬಿಎಂಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.