ADVERTISEMENT

ಮುಂಬೈ ಪೊಲೀಸ್ ಹೆಸರಿನಲ್ಲಿ ₹ 1.52 ಕೋಟಿ ವಂಚನೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2023, 0:18 IST
Last Updated 21 ನವೆಂಬರ್ 2023, 0:18 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಮುಂಬೈ ಪೊಲೀಸರ ಹೆಸರಿನಲ್ಲಿ ಕರೆ ಮಾಡಿ ‘ಕೊರಿಯರ್‌ನಲ್ಲಿ ಡ್ರಗ್ಸ್ ಸಾಗಣೆ’ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಸಿ ನಗರದ ವ್ಯಕ್ತಿಯೊಬ್ಬರಿಂದ ₹ 1.52 ಕೋಟಿ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಮೈಕೊ ಲೇಔಟ್ ನಿವಾಸಿಯೊಬ್ಬರು ವಂಚನೆ ಸಂಬಂಧ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

‘ಫೆಡೆಕ್ಸ್ ಕೊರಿಯರ್ ಪ್ರತಿನಿಧಿ ಸೋಗಿನಲ್ಲಿ ನ.10ರಂದು ದೂರುದಾರರಿಗೆ ಕಾರ್ತಿಕೇಯನ್ ಹೆಸರಿನಲ್ಲಿ ಕರೆ ಮಾಡಿದ್ದ ಆರೋಪಿ, ‘ನಿಮ್ಮ ಹೆಸರಿನಲ್ಲಿ ಡ್ರಗ್ಸ್ ಹಾಗೂ ನಿಷೇಧಿತ ವಸ್ತುಗಳ ಕೊರಿಯರ್ ಬಂದಿದೆ. ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಕೊರಿಯರ್ ಜಪ್ತಿ ಮಾಡಿದ್ದಾರೆ. ನಿಮ್ಮ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಹೇಳುತ್ತಿದ್ದಾರೆ’ ಎಂದಿದ್ದ. ಕೊರಿಯರ್ ತಮ್ಮದಲ್ಲವೆಂದರೆ ಪೊಲೀಸರನ್ನು ಸಂಪರ್ಕಿಸುವಂತೆ ತಿಳಿಸಿದ್ದ.’

‘ಕೆಲ ನಿಮಿಷಗಳ ನಂತರ ಮುಂಬೈ ಸೈಬರ್ ಕ್ರೈಂ ಪೊಲೀಸರ ಹೆಸರಿನಲ್ಲಿ ಕರೆ ಮಾಡಿದ್ದ ಆರೋಪಿ, ‘ಕೊರಿಯರ್ ನಿಮ್ಮದಲ್ಲವೆಂದರೆ ವೈಯಕ್ತಿಕ ವಿವರ ಹಾಗೂ ಖಾತೆ ವಿವರ ನೀಡಿ. ಪ್ರಕರಣ ದಾಖಲಿಸುವುದಿಲ್ಲ. ಇಲ್ಲದಿದ್ದರೆ, ಡ್ರಗ್ಸ್ ಸಾಗಣೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗುವುದು’ ಎಂಬುದಾಗಿ ಬೆದರಿಸಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಬಂಧನದ ಭೀತಿಯಲ್ಲಿದ್ದ ದೂರುದಾರ, ಆರೋಪಿಗಳು ಹೇಳಿದ್ದ ಖಾತೆಗಳಿಗೆ ಹಂತ ಹಂತವಾಗಿ ₹ 1.52 ಕೋಟಿ ವರ್ಗಾಯಿಸಿದ್ದರು. ಇದಾದ ನಂತರ, ಆರೋಪಿಗಳು ಮತ್ತಷ್ಟು ಹಣಕ್ಕೆ ಬೇಡಿಕೆ ಇರಿಸಿದ್ದರು. ಅನುಮಾನಗೊಂಡ ದೂರುದಾರ ಠಾಣೆಗೆ ದೂರು ನೀಡಿದ್ದಾರೆ’ ಎಂದು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.