ADVERTISEMENT

ಜಾಗತಿಕ ಹೂಡಿಕೆದಾರರ ಸಮಾವೇಶ: ಶೇ 75 ಯೋಜನೆಗಳ ಅನುಷ್ಠಾನ: ನಿರಾಣಿ

ನಾಳೆಯಿಂದ ಜಾಗತಿಕ ಹೂಡಿಕೆದಾರರ ಸಮಾವೇಶ: ಪ್ರಧಾನಿ ವರ್ಚುವಲ್‌ ಭಾಷಣ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2022, 20:00 IST
Last Updated 31 ಅಕ್ಟೋಬರ್ 2022, 20:00 IST
ಸಚಿವ ಮುರುಗೇಶ ನಿರಾಣಿ ಮಾತನಾಡಿದರು. ಇಲಾಖೆಯ ಆಯುಕ್ತೆ ಗುಂಜನ್‌ ಕೃಷ್ಣ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ ಇದ್ದರು
ಸಚಿವ ಮುರುಗೇಶ ನಿರಾಣಿ ಮಾತನಾಡಿದರು. ಇಲಾಖೆಯ ಆಯುಕ್ತೆ ಗುಂಜನ್‌ ಕೃಷ್ಣ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ ಇದ್ದರು   

ಬೆಂಗಳೂರು: ಉದ್ಯಮ ವಲಯಕ್ಕೆ ಹೊಸ ಚೈತನ್ಯ ತುಂಬುವ ನಿಟ್ಟಿನಲ್ಲಿಜಾಗತಿಕ ಹೂಡಿಕೆದಾರರ ಸಮಾವೇಶ ನ.2ರಿಂದ 4ರವರೆಗೆ ಮೂರು ದಿನಗಳ ಕಾಲ ನಗರದ ಅರಮನೆ ಮೈದಾನದಲ್ಲಿ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್‌ ವ್ಯವಸ್ಥೆ ಮೂಲಕ ಸಮಾವೇಶದಲ್ಲಿ ಭಾಷಣ ಮಾಡಲಿದ್ದಾರೆ.

‘ಬಿಲ್ಡ್‌ ಫಾರ್‌ ದ ವರ್ಲ್ಡ್‌’ ಪರಿಕಲ್ಪನೆಯೊಂದಿಗೆ ಸಮಾವೇಶ ನಡೆಯಲಿದ್ದು, ₹5 ಲಕ್ಷ ಕೋಟಿ ಹೂಡಿಕೆಯಾಗುವ ನಿರೀಕ್ಷೆ ಇದೆ.

‘2012ರಲ್ಲಿ ನಡೆದ ಹೂಡಿಕೆದಾರರ ಸಮಾವೇಶದಲ್ಲಿ ಮಾಡಿಕೊಳ್ಳಲಾದ ಒಪ್ಪಂದಗಳಲ್ಲಿ ಶೇ 27ರಷ್ಟು ಯೋಜನೆ ಗಳು ಮಾತ್ರ ಅನುಷ್ಠಾನಗೊಂಡಿದ್ದವು. ಆದರೆ, ಈ ಬಾರಿ ಶೇ 75ಕ್ಕೂ ಹೆಚ್ಚು ಯೋಜನೆಗಳು ಅನುಷ್ಠಾನಗೊಳ್ಳಲಿವೆ. ಕೇವಲ ಒಪ್ಪಂದಕ್ಕೆ ಮಾತ್ರ ಯೋಜನೆಗಳು ಸೀಮಿತವಾಗಿರುವುದಿಲ್ಲ’ ಎಂದುಬೃಹತ್‌ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಮುರುಗೇಶ ನಿರಾಣಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ADVERTISEMENT

‘ಈ ಬಾರಿಯ ಸಮಾವೇಶದಲ್ಲಿ ಹಸಿರು ಇಂಧನಕ್ಕೆ ಆದ್ಯತೆ ನೀಡಲಾಗಿದೆ. ಸೌರಶಕ್ತಿ, ಪವನ ವಿದ್ಯುತ್‌ ಮತ್ತು ಹೈಡ್ರೊಜನ್‌ ಇಂಧನದ ವಲಯಗಳಲ್ಲಿ ಹೆಚ್ಚಿನ ಹೂಡಿಕೆಯಾಗುವ ನಿರೀಕ್ಷೆ ಇದೆ. ಈ ವಲಯಗಳಲ್ಲೇ ₹2 ಲಕ್ಷ ಕೋಟಿಯಷ್ಟು ಹೂಡಿಕೆಯಾಗಲಿದೆ. ಉದ್ಯಮಿ ಸಜ್ಜನ್‌ ಜಿಂದಾಲ್‌ ಅವರು ತಮ್ಮ ಜೆಎಸ್‌ಡಬ್ಲ್ಯೂ ಕಂಪನಿಗೆ ಸೇರಿದ ಜಮೀನಿನಲ್ಲೇ ₹42 ಸಾವಿರ ಕೋಟಿ ಹೂಡಿಕೆ ಮಾಡಲಿದ್ದಾರೆ’ ಎಂದು ವಿವರಿಸಿದರು. ‘ನೂತನ ಕೈಗಾರಿಕಾ ನೀತಿಯಿಂದಾಗಿ ರಾಜ್ಯ ಉದ್ಯಮ ಸ್ನೇಹಿ ರಾಜ್ಯಗಳ ಪಟ್ಟಿಯಲ್ಲಿ ಅತ್ಯಂತ ಪ್ರಮುಖ ಸ್ಥಾನ ಪಡೆದುಕೊಂಡಿದೆ. 2021ರ ಏಪ್ರಿಲ್‌ 21ರಿಂದ 2022ರ ಮಾರ್ಚ್‌ ಅವಧಿಯಲ್ಲಿ ₹1.76 ಲಕ್ಷ ಕೋಟಿ ವಿದೇಶಿ ನೇರ ಹೂಡಿಕೆ ಆಕರ್ಷಿಸುವಲ್ಲಿ ಸಫ‌ಲವಾಗಿದೆ’ ಎಂದರು.

‘ಬೆಳಿಗ್ಗೆ 10.30ಕ್ಕೆ ಪ್ರಧಾನಿ ಮೋದಿ ವರ್ಚುವಲ್‌ ಮೂಲಕ ಭಾಷಣ ಮಾಡಲಿದ್ದಾರೆ. ಇದೇ 4ರಂದು ಸಂಜೆ 4 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ಸಚಿವ ನಿತಿನ್‌ ಗಡ್ಕರಿ ಪಾಲ್ಗೊಳ್ಳಲಿದ್ದಾರೆ.

‘ಸಮಾವೇಶದಲ್ಲಿ ಸಜ್ಜನ್‌ ಜಿಂದಾಲ್‌, ಕುಮಾರಮಂಗಳಂ ಬಿರ್ಲಾ ಸೇರಿದಂತೆ ಹಲವು ಖ್ಯಾತ ಉದ್ಯಮಿಗಳು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.