ADVERTISEMENT

ಅಧಿಕ ಬಡ್ಡಿ ಆಮಿಷ: ₹2.5 ಕೋಟಿ ವಂಚನೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2024, 20:21 IST
Last Updated 18 ಜನವರಿ 2024, 20:21 IST
ವಂಚನೆ
ವಂಚನೆ   

ಸಾಂದರ್ಭಿಕ ಚಿತ್ರ

ಬೆಂಗಳೂರು: ಅಧಿಕ ಬಡ್ಡಿಯ ಆಮಿಷವೊಡ್ಡಿ ಆಂಧ್ರಪ್ರದೇಶದ ಇಬ್ಬರಿಂದ ₹2.5 ಕೋಟಿ ಹೂಡಿಕೆ ಮಾಡಿಸಿಕೊಂಡು ವಂಚಿಸಿದ ಆರೋಪದಡಿ ಎಸ್5ಎಸ್ ಗ್ಲೋಬಲ್ ಡೆವಲಪರ್ಸ್ ಕಂಪನಿ ಮಾಲೀಕ ಸೇರಿ ಆರು ಮಂದಿ ವಿರುದ್ಧ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಂಧ್ರಪ್ರದೇಶದ ಕಡಪದ ಸಂದಡಿ ನರಸಿಂಹರೆಡ್ಡಿ ಅವರು ನೀಡಿದ ದೂರು ಆಧರಿಸಿ ತನಿಖೆ ನಡೆಸಲಾಗುತ್ತಿದೆ.

ADVERTISEMENT

ಕೆ.ಆರ್.ಪುರ ಕಸ್ತೂರಿನಗರದ ಎಸ್5ಎಸ್ ಗ್ಲೋಬಲ್ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮುಖ್ಯಸ್ಥ ಪ್ರತಾಪ್, ಆತನ ಪತ್ನಿ ಶ್ವೇತಾ, ಕಂಪನಿಯ ಕಾನೂನು ಸಲಹೆಗಾರ ಓಬಳೇಶ್, ಅಕೌಂಟೆಂಟ್ ಮಣಿ, ಚಾಲಕ ಗೋಪಿ ಹಾಗೂ ಮೊಹಮ್ಮದ್ ಮುಸ್ತಾಫ‌ ವಿರುದ್ಧ ದೂರು ದಾಖಲಾಗಿದೆ.

ವಂಚನೆ, ನಂಬಿಕೆ ದ್ರೋಹ, ಹಲ್ಲೆ, ಜೀವ ಬೆದರಿಕೆ ಆರೋಪದಡಿ ಪ್ರಕರಣ ದಾಖಲಾಗಿದೆ.

ಕೃಷಿಕರಾದ ಸಂದಡಿ ನರಸಿಂಹ ರೆಡ್ಡಿಗೆ ಒಂದೂವರೆ ವರ್ಷದ ಹಿಂದೆ ಬೆಂಗಳೂರಿನ ಮಹಮ್ಮದ್ ಮುಸ್ತಾಫನ ಪರಿಚಯವಾಗಿತ್ತು. ಬಳಿಕ ಇಬ್ಬರು ತಮ್ಮ ವ್ಯವಹಾರಗಳ ಬಗ್ಗೆ ಚರ್ಚಿಸಿಕೊಂಡಿದ್ದಾರೆ. ಆ ನಂತರ 2023ರ ಜನವರಿಯಲ್ಲಿ ಮುಸ್ತಾಫಾ, ಪ್ರತಾಪ್‌ನನ್ನು ತಿರುಪತಿಯಲ್ಲಿ ನರಸಿಂಹರೆಡ್ಡಿಗೆ ಪರಿಚಯಿಸಿದ್ದಾರೆ.

ಆಗ ಪ್ರತಾಪ್, ‘ನಾನು ಬೆಂಗಳೂರಿನಲ್ಲಿ ಅಧಿಕ ಬಡ್ಡಿ ಬರುವ ಪ್ಯಾಕೇಜ್ ನಡೆಸುತ್ತಿದ್ದು, ನೀವು ನನಗೆ ₹ 1 ಲಕ್ಷ ನೀಡಿದರೆ 10 ತಿಂಗಳ ಬಳಿಕ ₹1.90 ಲಕ್ಷ ವಾಪಸ್ ನೀಡುತ್ತೇನೆಂದು ಹೇಳಿದ್ದರು. ಅದನ್ನೇ ನಂಬಿ, ಹಣ ಹೂಡಿಕೆ ಮಾಡಲಾಗಿತ್ತು ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.