ADVERTISEMENT

ಮಗಳಿಗೆ ಯಕೃತ್ತು ದಾನ ಮಾಡಿದ ತಾಯಿ

ಆಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ ಕಸಿ

​ಪ್ರಜಾವಾಣಿ ವಾರ್ತೆ
Published 8 ಜುಲೈ 2020, 20:51 IST
Last Updated 8 ಜುಲೈ 2020, 20:51 IST

ಬೆಂಗಳೂರು: ಹಳದಿ ರೋಗದಿಂದಾಗಿ ಯಕೃತ್ತು ಸಮಸ್ಯೆ ಎದುರಿಸುತ್ತಿದ್ದ ತುಮಕೂರಿನ ಐದು ವರ್ಷದ ಬಾಲಕಿಗೆ ತಾಯಿಯೇ ಯಕೃತ್ತನ್ನು ದಾನ ಮಾಡಿದ್ದು, ನಗರದ ಆಸ್ಟರ್ ಸಿಎಂಐ ಆಸ್ಪತ್ರೆಯ ವೈದ್ಯರು ಕಸಿ ಮಾಡಿದ್ದಾರೆ.

ಏಳು ತಿಂಗಳ ಮಗುವಾಗಿರುವಲ್ಲಿಂದ ಬಾಲಕಿ ಯಕೃತ್ತು ಸಮಸ್ಯೆಯಿಂದ ಬಳಲುತ್ತಿದ್ದಳು. ಆ ಸಮಸ್ಯೆ ಗಂಭೀರ ಸ್ವರೂಪ ಪಡೆದಿತ್ತು. ಆಸ್ಪತ್ರೆಗೆ ದಾಖಲಾದ ಬಳಿಕ ಬಾಲಕಿಯ ಹೃದಯ ಬಡಿತ 40 ನಿಮಿಷಗಳ ಕಾಲ ಸ್ಥಗಿತವಾಗಿತ್ತು. ಈ ವೇಳೆ ಜೀವರಕ್ಷಕ ಸಾಧನಗಳ ಸಹಾಯದಿಂದ ಆಕೆಯ ದೇಹದಲ್ಲಿ ರಕ್ತ ಸಂಚಲನ ನಿಲ್ಲದಂತೆ ನೋಡಿಕೊಂಡ ವೈದ್ಯರು, 14 ಗಂಟೆಗಳ ಅವಧಿಯಲ್ಲಿ ಶಸ್ತ್ರಚಿಕಿತ್ಸೆಯನ್ನು ಪೂರ್ಣಗೊಳಿಸಿದರು. ಇದರ ವೆಚ್ಚವನ್ನು ಆಸ್ಪತ್ರೆಯು ತನ್ನ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್) ಹಾಗೂ ದಾನಿಗಳ ನೆರವಿನಿಂದ ಭರಿಸಿದೆ.

‘ಯಕೃತ್ತು ಕಸಿ ಮಾಡಿದಲ್ಲಿ ಮಾತ್ರ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಿತ್ತು. ಬಾಲಕಿಯ ತಾಯಿಯ ಯಕೃತ್ತನ್ನು ಅಳವಡಿಸಿದ ಕೆಲ ನಿಮಿಷಗಳ ಬಳಿಕ ಅವಳ ಹೃದಯ ಬಡಿತವನ್ನು ಸಹಜ ಸ್ಥಿತಿಗೆ ತರಲು ಸಾಧ್ಯವಾಯಿತು. ಈಗ ಮಗು ಚೇತರಿಸಿಕೊಂಡಿದೆ’ ಎಂದು ಆಸ್ಪತ್ರೆಯ ಯಕೃತ್ತು ಕಸಿ ಶಸ್ತ್ರಚಿಕಿತ್ಸೆಯ ಹಿರಿಯ ಸಲಹಾತಜ್ಞ ಡಾ. ರಾಜೀವ್ ಲೋಚನ್ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.