ADVERTISEMENT

ಡಾ. ಎಂ.ಆರ್‌. ಜಯರಾಮ್‌ಗೆ ಅಮೆರಿಕದ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌

​ಪ್ರಜಾವಾಣಿ ವಾರ್ತೆ
Published 1 ಜೂನ್ 2022, 19:59 IST
Last Updated 1 ಜೂನ್ 2022, 19:59 IST
ಎಂ.ಆರ್‌. ಜಯರಾಮ್‌ ಅವರಿಗೆ ‘ಡಾಕ್ಟರ್‌ ಆಫ್‌ ಹ್ಯೂಮನ್‌ ಲೆಟರ್ಸ್‌’ ಪದವಿ ಪ್ರದಾನ ಮಾಡಲಾಯಿತು
ಎಂ.ಆರ್‌. ಜಯರಾಮ್‌ ಅವರಿಗೆ ‘ಡಾಕ್ಟರ್‌ ಆಫ್‌ ಹ್ಯೂಮನ್‌ ಲೆಟರ್ಸ್‌’ ಪದವಿ ಪ್ರದಾನ ಮಾಡಲಾಯಿತು   

ಬೆಂಗಳೂರು: ಗೋಕುಲ ಎಜುಕೇಷನ್‌ ಫೌಂಡೇಷನ್‌ ಅಧ್ಯಕ್ಷ ಡಾ. ಎಂ.ಆರ್‌. ಜಯರಾಮ್‌ ಅವರಿಗೆ ಅಮೆರಿಕದ ಷಿಕಾಗೊದ ಇಲಿನಾಯ್ಸ್‌ ವಿಶ್ವವಿ ದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಅಮೆರಿಕದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಇಲಿನಾಯ್ಸ್‌ ವಿಶ್ವವಿದ್ಯಾಲಯದ ಅಧ್ಯಕ್ಷ ಡಾ. ತಿಮೋತಿ ಕಿಲ್ಲೀನ್‌ ಅವರು ಜಯರಾಮ್‌ ಅವರಿಗೆ ‘ಡಾಕ್ಟರ್‌ ಆಫ್‌ ಹ್ಯೂಮನ್‌ ಲೆಟರ್ಸ್‌’ ಪದವಿ ಪ್ರದಾನ ಮಾಡಿದರು. ಆ ಮೂಲಕ ಜಯರಾಮ್‌ ಅವರು ಈ ಪದವಿ ಸ್ವೀಕರಿಸಿದ ಮೂರನೇ ಭಾರತೀಯ ಎಂಬ ಹೆಗ್ಗಳಿಕೆಗೆ
ಭಾಜನರಾಗಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಅನಿಸಿಕೆ ಹಂಚಿಕೊಂಡ ಜಯರಾಮ್‌, ‘ಉನ್ನತ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಪರಿಗಣಿಸಿ ಇಲಿನಾಯ್ಸ್‌ ವಿಶ್ವವಿದ್ಯಾಲಯನನಗೆ ಪ್ರತಿಷ್ಠಿತ ಗೌರವ ಡಾಕ್ಟರೇಟ್‌ ಪದವಿ ನೀಡಿದೆ’ ಎಂದರು.

ADVERTISEMENT

‘ದೇಶದ ಅತ್ಯುತ್ತಮ ನೂರು
ವಿಶ್ವವಿದ್ಯಾಲಯಗಳಲ್ಲಿ ಮತ್ತು ಕರ್ನಾಟಕದ ಅಗ್ರಶ್ರೇಣಿಯ ಐದು ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ನಮ್ಮ ವಿಶ್ವವಿದ್ಯಾಲಯ ಕೂಡಾ
ಸ್ಥಾನ ಪಡೆದಿದೆ. ಮುಂದಿನ ದಿನಗಳಲ್ಲಿ ಜಾಗತಿಕಮಟ್ಟದಲ್ಲಿ ರಾಮಯ್ಯ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಟ್‌ ಅತ್ಯುತ್ತಮ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವ ಗುರಿ ಹೊಂದಲಾಗಿದೆ’ ಎಂದರು.

‘ಪ್ರತಿಷ್ಠಿತ ಕಂಪನಿಗಳ ಜೊತೆ ಒಡಂಬಡಿಕೆಯಿಂದ ಗುಣಮಟ್ಟದ ಸಂಶೋಧನೆ, ನಾವೀನ್ಯತೆ ಮತ್ತು ಉದ್ಯಮಶೀಲತೆ, ಇಂಟರ್ನ್‌ಶಿಪ್‌ ಉದ್ಯೋಗ ಅವಕಾಶ ಮತ್ತಿತರ ಶೈಕ್ಷಣಿಕ ಚಟುವಟಿಕೆಗೆ ಸಹಾಯವಾಗಿದೆ. ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಹಲವು ವಿದ್ಯಾರ್ಥಿಗಳು ಉತ್ತಮ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ’ ಎಂದರು.

ಯುದ್ಧಪೀಡಿತ ಉಕ್ರೇನ್‌ನಿಂದ ಸ್ವದೇಶಕ್ಕೆ ಮರಳಿದ ವೈದ್ಯಕೀಯ ವಿದ್ಯಾರ್ಥಿಗಳು ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಇದೊಂದು ಸಂಕೀರ್ಣ ವಿಚಾರ. ವೈದ್ಯಕೀಯ ಶಿಕ್ಷಣಕ್ಕೆ ಸರ್ಕಾರಗಳು ಹೆಚ್ಚಿನ ನೆರವು ನೀಡಬೇಕು. ಈ ಬಗ್ಗೆ ಸರ್ಕಾರ, ಸಮುದಾಯ, ಶಿಕ್ಷಣ ಸಂಸ್ಥೆಗಳು ಮತ್ತು ಪರಿಣತರು ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.