ADVERTISEMENT

ಎಂ.ಎಸ್. ರಾಮಯ್ಯ ಸಂಸ್ಥೆಗೆ ಅಡಕೆ ಸಂಶೋಧನೆ ಹೊಣೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 22:57 IST
Last Updated 24 ಸೆಪ್ಟೆಂಬರ್ 2020, 22:57 IST
ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ   

ಬೆಂಗಳೂರು: ಅಡಕೆ ಕುರಿತ ಸಂಶೋಧನೆ ಮತ್ತು ಕ್ಲಿನಿಕಲ್ ಟ್ರಯಲ್ ಕೈಗೊಳ್ಳುವ ಹೊಣೆಯನ್ನು ಎಂ.ಎಸ್.ರಾಮಯ್ಯ ಸಂಸ್ಥೆಯ ಅನ್ವಯಿಕ ವಿಜ್ಞಾನ ವಿಭಾಗಕ್ಕೆ ವಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಅಡಕೆ ಕಾರ್ಯಪಡೆಯ ಅಧ್ಯಕ್ಷರೂ ಆಗಿರುವ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ವಿಕಾಸಸೌಧದಲ್ಲಿ ಗುರುವಾರ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ರಾಜ್ಯದಲ್ಲಿ ಅಡಕೆ ಬೆಳೆಯುವ ಎಲ್ಲ ಪ್ರದೇಶಗಳಿಂದ ಮಾದರಿ ಸಂಗ್ರಹಿಸಿ, ಸಂಶೋಧನಾ ಚಟುವಟಿಕೆ ಕೈಗೊಂಡು 15 ತಿಂಗಳ ಒಳಗೆ ವರದಿ ನೀಡುವಂತೆ ತಜ್ಞರಿಗೆ ಸೂಚಿಸಲಾಗಿದೆ.

ADVERTISEMENT

ತೀರ್ಥಹಳ್ಳಿಯಲ್ಲಿ ಅಡಕೆ ಸಂಶೋಧನಾ ಕೇಂದ್ರ ಆರಂಭಿಸುವುದಾಗಿ ಕಳೆದ ಚುನಾವಣೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದರು. ಈ ಉದ್ದೇಶಕ್ಕೆ ₹10 ಕೋಟಿ ಒದಗಿಸುವುದಾಗಿ ಕೇಂದ್ರ ಕೃಷಿ ಸಚಿವರಾಗಿದ್ದ ರಾಧಾ ಮೋಹನ್ ಸಿಂಗ್ ಹೇಳಿದ್ದರು. ಶಾ ಅವರನ್ನು ಭೇಟಿಯಾಗಿ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಆಮದು ಅಡಕೆ ದರವನ್ನು ಕೆ.ಜಿಗೆ₹ 250ರಿಂದ ₹350ಕ್ಕೆ ಹೆಚ್ಚಿಸುವಂತೆ ಕೇಂದ್ರ ವಾಣಿಜ್ಯ ಸಚಿವರಿಗೆ ಹಾಗೂ ಸಿಹಿ ಅಡಕೆ ಮತ್ತು ಸುವಾಸನೆ ಭರಿತ ಅಡಕೆ ಮೇಲಿನ ಜಿಎಸ್‌ಟಿ ತೆರಿಗೆ ಶೇ 18ರಿಂದ ಶೇ 13ಕ್ಕೆ ಇಳಿಸಲು ಜಿಎಸ್‌ಟಿ ಮಂಡಳಿಯ ರಾಜ್ಯದ ಪ್ರತಿನಿಧಿ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆಮನವಿ ಸಲ್ಲಿಸಲು ಕೂಡಾ ಸಭೆಯಲ್ಲಿ ನಿರ್ಧರಿಸಲಾಗಿದೆ. ಅಲ್ಲದೆ, ಅಡಕೆಸಂಬಂಧದ ಸಂಶೋಧನೆ ಪೂರ್ಣಗೊಳ್ಳುವ ವರೆಗೆ ಸುಪ್ರೀಂ ಕೋರ್ಟ್ ವಿಚಾರಣೆಗೆ ತಡೆ ಕೋರುವ ಬಗ್ಗೆಯೂ ಚರ್ಚಿಸಲಾಗಿದೆ.

ತೋಟಗಾರಿಕೆ ಇಲಾಖೆ ನಿರ್ದೇಶಕ ಹಾಗೂ ಕಾರ್ಯಪಡೆಯ ಸದಸ್ಯ ಕಾರ್ಯದರ್ಶಿ ವೆಂಕಟೇಶ್, ಸದಸ್ಯರಾದ ಶಿವಕುಮಾರ್, ಸುಬ್ರಹ್ಮಣ್ಯ, ಹರಿಪ್ರಕಾಶ ಕೋಣೆಮನೆ ಸಭೆಯಲ್ಲಿದ್ದರು.

*
ಅಡಕೆ ಕುರಿತು ಎಂ.ಎಸ್. ರಾಮಯ್ಯ ಸಂಸ್ಥೆಯವರು ಸಂಶೋಧನೆ ಕೈಗೊಳ್ಳಲಿದ್ದು, ಅದಕ್ಕೆ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
-ಆರಗ ಜ್ಞಾನೇಂದ್ರ, ಅಡಕೆ ಕಾರ್ಯಪಡೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.