ADVERTISEMENT

ಮುಡಾ ಪ್ರಕರಣ: ₹40 ಕೋಟಿ ಆಸ್ತಿ ಇ.ಡಿ ವಶ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 0:28 IST
Last Updated 7 ಅಕ್ಟೋಬರ್ 2025, 0:28 IST
ಮುಡಾ ಕಚೇರಿ
ಮುಡಾ ಕಚೇರಿ   

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು (ಇ.ಡಿ.) ಹಣ ಅಕ್ರಮ ವರ್ಗಾವಣೆ ಸಂಬಂಧ ಸುಮಾರು ₹40.8 ಕೋಟಿ ಮೌಲ್ಯದ 34 ಸ್ಥಿರಾಸ್ತಿಗಳನ್ನು ಮತ್ತೆ ಮುಟ್ಟುಗೋಲು ಹಾಕಿಕೊಂಡಿದೆ.

ಈ ಪ್ರಕರಣದಲ್ಲಿ ಈವರೆಗೂ ಮುಡಾಕ್ಕೆ ಸೇರಿದ ಸುಮಾರು ₹440 ಕೋಟಿಗೂ ಹೆಚ್ಚು ಮೌಲ್ಯದ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಂತಾಗಿದೆ.

ಮುಡಾದ ಮಾಜಿ ಆಯುಕ್ತ ದಿನೇಶ್ ಕುಮಾರ್‌ಗೆ ಸೇರಿದ ₹40.8 ಕೋಟಿ ಮೌಲ್ಯದ 34 ನಿವೇಶನಗಳನ್ನು ವಶಕ್ಕೆ ಪಡೆದಿದೆ. ದಿನೇಶ್ ಕುಮಾರ್ ನಿವೇಶನ ಹಂಚಿಕೆ ವೇಳೆ ಅಕ್ರಮವಾಗಿ ಪಡೆದ ಹಣವನ್ನು ಸಂಬಂಧಿಕರು ಹಾಗೂ ಸಹಚರರ ಹೆಸರಿನಲ್ಲಿ ಸ್ಥಿರಾಸ್ತಿಗಳನ್ನು ಖರೀದಿಸಲು ಬಳಸಿದ್ದಾರೆ. ಜತೆಗೆ ಮುಡಾದ 31 ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿರುವುದು ಹಾಗೂ ಮುಡಾ ಅಧಿಕಾರಿಗಳು ಮತ್ತು ರಿಯಲ್ ಎಸ್ಟೇಟ್ ಉದ್ಯಮಿಗಳ ನಡುವೆ ಸಂಬಂಧ ಇರುವುದು ಕೂಡ ತನಿಖೆ ವೇಳೆ ಪತ್ತೆಯಾಗಿದೆ ಎಂದು ಇ.ಡಿ ಮೂಲಗಳು ಹೇಳಿವೆ.

ADVERTISEMENT

ಬಡಾವಣೆಗಳಿಗೆ ಅನುಮೋದನೆ ನೀಡಲು ಮತ್ತು ಪರಿಹಾರ ರೂಪದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡುವಾಗ ಹಣ ಪಡೆದಿರುವುದಕ್ಕೆ ಸಾಕ್ಷ್ಯ ಸಂಗ್ರಹಿಸಿರುವುದಾಗಿ ಇ.ಡಿ. ಹೇಳಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಡಾದ ಮಾಜಿ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಅವರನ್ನು ಕಳೆದ ಸೆಪ್ಟೆಂಬರ್‌ನಲ್ಲಿ ಬಂಧಿಸಿದ್ದ ಇ.ಡಿ., ಸುದೀರ್ಘ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಏನಿದು ಪ್ರಕರಣ?: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಮಾಲೀಕತ್ವದಲ್ಲಿದ್ದ ಭೂಸ್ವಾಧೀನಕ್ಕೆ ಪರ್ಯಾಯವಾಗಿ ಮುಡಾದಿಂದ ನಿವೇಶನ ಹಂಚಿಕೆ ಮಾಡಲಾಗಿತ್ತು. ಇದರಲ್ಲಿ ಅಕ್ರಮ ನಡೆದಿದೆ ಎಂಬ ಆರೋಪವಿದೆ. ಈ ಪ್ರಕರಣದಲ್ಲಿ ಪಾರ್ವತಿ ಅವರ ವಿರುದ್ಧದ ಇ.ಡಿ. ವಿಚಾರಣೆ ರದ್ದುಗೊಳಿಸಿದ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಈ ಪ್ರಕರಣ ಸಂಬಂಧ ರಾಜ್ಯ ಸರ್ಕಾರ ರಚಿಸಿದ್ದ ನ್ಯಾ.ಪಿ.ಎನ್.ದೇಸಾಯಿ ಆಯೋಗವು ಸಿದ್ಧರಾಮಯ್ಯ ಮತ್ತು ಅವರ ಕುಟುಂಬವನ್ನು ದೋಷಮುಕ್ತಗೊಳಿಸಿದೆ.

ಲೋಕಾಯುಕ್ತ ಪೊಲೀಸರು ಸಹ, ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಸೇರಿ ನಾಲ್ವರ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪ ಸಾಬೀತುಪಡಿಸಲು ಸಾಧ್ಯವಾಗಿಲ್ಲ ಎಂದು ಕ್ಲೀನ್ ಚಿಟ್ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.