ADVERTISEMENT

ಪ್ರಾದೇಶಿಕ ಅಸಮಾನತೆ ತೊಲಗಿಸಲು ಆಗ್ರಹ

ಉದ್ದಿಮೆಗಳಲ್ಲಿ ಪರಭಾಷಿಕರ ಹಾವಳಿ ತಪ್ಪಿಸಿ: ಮುಖ್ಯಮಂತ್ರಿ ಚಂದ್ರು

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 16:02 IST
Last Updated 28 ಅಕ್ಟೋಬರ್ 2024, 16:02 IST
‘ಮುಖ್ಯಮಂತ್ರಿ’ ಚಂದ್ರು
‘ಮುಖ್ಯಮಂತ್ರಿ’ ಚಂದ್ರು   

ಬೆಂಗಳೂರು: ರಾಜ್ಯದ ಉದ್ದಿಮೆಗಳಲ್ಲಿ ಪರಭಾಷಿಕರ ಅವೈಜ್ಞಾನಿಕ ವಲಸೆ ತಡೆಗಟ್ಟಲು ಹಾಗೂ ಪ್ರಾದೇಶಿಕ ಅಸಮಾನತೆ ತೊಲಗಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ.

ಈ ಸಂಬಂಧ ಪತ್ರ ಬರೆದಿರುವ ಅವರು, ‘ಪ್ರತಿಯೊಂದು ರಾಜ್ಯಗಳಲ್ಲಿಯೂ ಮಾನವ ಅಭಿವೃದ್ಧಿಯ ಜೊತೆ ಜೊತೆಗೆ ಕೈಗಾರಿಕಾ ಅಭಿವೃದ್ಧಿಯು ಆಗಬೇಕೆಂಬುದು ಎಲ್ಲ ಸರ್ಕಾರಗಳ ಮೂಲ ಆಶಯ. ಈ ಮೂಲಕ ಆಯಾ ರಾಜ್ಯದ ಸ್ಥಳೀಯರಿಗೆ ಉದ್ಯೋಗಾವಕಾಶಗಳು ದೊರೆತು ಆರ್ಥಿಕ ಸುಭದ್ರತೆಯನ್ನು ಕಲ್ಪಿಸುವುದು ಸರ್ಕಾರಗಳ ಆದ್ಯ ಕರ್ತವ್ಯ’ ಎಂದು ಹೇಳಿದ್ದಾರೆ.

ಹೊರ ರಾಜ್ಯಗಳ ಲಕ್ಷಾಂತರ ಕಾರ್ಮಿಕರು ವಲಸೆ ಬಂದು ರಾಜ್ಯದ ಉದ್ದಿಮೆಗಳಲ್ಲಿ ಉದ್ಯೋಗಾವಕಾಶಗಳನ್ನು ಕಂಡುಕೊಂಡು, ಕನ್ನಡ ನಾಡಿನ ಭಾಷೆ, ಸಂಸ್ಕೃತಿ ಹಾಗೂ ಪ್ರಾದೇಶಿಕ ಸಮಾನತೆಗೆ ಕೊಡಲಿ ಪೆಟ್ಟು ನೀಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ADVERTISEMENT

ಕನ್ನಡಿಗರು ತಮ್ಮ ನೆಲದಲ್ಲಿಯೇ ಉದ್ಯೋಗಾವಕಾಶಗಳಿಂದ ವಂಚಿತರಾಗಿ ಅನಾಥರಾಗಿ ಬದುಕುವಂತಹ ವಾತಾವರಣ ಮೂಡಿದೆ. ಪ್ರತಿಯೊಂದು ಉದ್ಯಮಗಳಲ್ಲಿಯೂ ಎ , ಬಿ, ಸಿ ಮತ್ತು ಡಿ ಹುದ್ದೆಗಳಲ್ಲಿ ಕನ್ನಡಿಗರಿಗೆ ಕ್ರಮವಾಗಿ ಶೇಕಡ 60, ಶೇಕಡ 80 ಹಾಗೂ ಶೇಕಡ 100ರಷ್ಟು ಹುದ್ದೆಗಳು ಸಿಗಬೇಕೆಂಬ ಸರ್ಕಾರದ ಕಾನೂನು ಉಲ್ಲಂಘನೆ ಆಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಪ್ರಾದೇಶಿಕ ಅಸಮಾನತೆ ತೊಲಗಿಸಲು ಕೂಡಲೇ ಉನ್ನತ ಹಂತದ ಅಧಿಕಾರಿಗಳ ಜೊತೆ ಸಭೆಗಳನ್ನು ನಡೆಸಿ, ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಕನ್ನಡಿಗರಿಗೆ ಉದ್ಯೋಗಾವಕಾಶ ನೀಡಿ ಅವರ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.