ADVERTISEMENT

ಬೆಂಗಳೂರು: ಪಾರ್ಕಿಂಗ್‌ಗೆ ಬಹುಹಂತದ ಕಟ್ಟಡ

ಯಶವಂತಪುರ ಮತ್ತು ಇಂದಿರಾನಗರದ ಮೆಟ್ರೊ ರೈಲ್ವೆ ನಿಲ್ದಾಣದಲ್ಲಿ ನಿರ್ಮಾಣ

ಗುರು ಪಿ.ಎಸ್‌
Published 20 ಜೂನ್ 2020, 19:05 IST
Last Updated 20 ಜೂನ್ 2020, 19:05 IST
ರೈಲ್ವೆ ನಿಲ್ದಾಣದ ಬಳಿ ಉದ್ದೇಶಿತ ಬಹುಹಂತದ ದ್ವಿಚಕ್ರ ವಾಹನ ನಿಲುಗಡೆ ಕಟ್ಟಡ ತಲೆ ಎತ್ತಲಿರುವ ಸ್ಥಳ  -–ಪ್ರಜಾವಾಣಿ ಚಿತ್ರ
ರೈಲ್ವೆ ನಿಲ್ದಾಣದ ಬಳಿ ಉದ್ದೇಶಿತ ಬಹುಹಂತದ ದ್ವಿಚಕ್ರ ವಾಹನ ನಿಲುಗಡೆ ಕಟ್ಟಡ ತಲೆ ಎತ್ತಲಿರುವ ಸ್ಥಳ  -–ಪ್ರಜಾವಾಣಿ ಚಿತ್ರ   

ಬೆಂಗಳೂರು:ವಾಹನಗಳ ದಟ್ಟಣೆ ನಿಯಂತ್ರಿಸಲು, ಕಡಿಮೆ ಜಾಗವನ್ನು ಗರಿಷ್ಠ ಮಟ್ಟದಲ್ಲಿ ಬಳಕೆ ಮಾಡಿಕೊಳ್ಳಲು ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಬಹುಹಂತದ ವಾಹನ ನಿಲುಗಡೆ ವ್ಯವಸ್ಥೆ ರೂಪಿಸಲು ಬೆಂಗಳೂರು ಮೆಟ್ರೊ ಅಭಿವೃದ್ಧಿ ನಿಗಮ (ಬಿಎಂಆರ್‌ಸಿಎಲ್‌) ಮುಂದಾಗಿದೆ.

ಯಶವಂತಪುರದಲ್ಲಿ ನೈರುತ್ಯ ರೈಲ್ವೆಯ ಜಾಗದಲ್ಲಿ ಬಿಎಂಆರ್‌ಸಿಎಲ್‌ ಈ ಕಟ್ಟಡ ನಿರ್ಮಿಸಲಿದೆ. ಇದು ಯೋಜನಾ ಹಂತದಲ್ಲಿದ್ದು, ಒಂದೆರಡು ವರ್ಷದಲ್ಲಿ ಕಾರ್ಯರೂಪಕ್ಕೆ ಬರುವ ಸಾಧ್ಯತೆ ಇದೆ.

‘ಯಶವಂತಪುರ ಹಾಗೂ ಇಂದಿರಾ ನಗರದ ಮೆಟ್ರೊ ನಿಲ್ದಾಣದ ಬಳಿ ಈ ಕಟ್ಟಡಗಳನ್ನು ನಿರ್ಮಿಸಲಾಗುವುದು. ದ್ವಿಚಕ್ರ ವಾಹನಗಳ ನಿಲುಗಡೆಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು’ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ನಿಗಮದ ಈ ನಿರ್ಧಾರದಿಂದ ಮೆಟ್ರೊಗೆ ಪ್ರಯಾಣಿಕರ ಸಂಖ್ಯೆ ಹೆಚ್ಚುವುದಲ್ಲದೆ, ವಾಹನ ಸವಾರರಿಗೂ ಅನುಕೂಲವಾಗಲಿದೆ.

‘ಮೆಟ್ರೊ ರೈಲು ಬಳಸುವ ಆಸಕ್ತಿಯಿದ್ದರೂ, ವಾಹನ ನಿಲುಗಡೆಗೆ ಸೂಕ್ತ ಜಾಗವಿಲ್ಲದ ಕಾರಣ ಬೈಕ್‌ನಲ್ಲಿಯೇ ಓಡಾಡಬೇಕಾಗಿತ್ತು. ಬಹಳಷ್ಟು ಮೆಟ್ರೊ ನಿಲ್ದಾಣಗಳ ಬಳಿ ಪಾರ್ಕಿಂಗ್‌ ಸೌಲಭ್ಯವಿಲ್ಲ. ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಿದರೆ ಅನುಕೂಲವಾಗುತ್ತದೆ’ ಎಂದು ಬೈಕ್‌ ಸವಾರ ರಮೇಶ್‌ ಗೌಳಿ ಹೇಳಿದರು.

‘ಈಗ ದಿನಕ್ಕೆ 25ರಿಂದ 30 ವಾಹನಗಳನ್ನು ಮಾತ್ರ ನಿಲು ಗಡೆ ಮಾಡಲಾಗುತ್ತಿದೆ. ಲಾಕ್‌ ಡೌನ್‌ಗಿಂತ ಮೊದಲು ದಿನಕ್ಕೆ ಸಾವಿರಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಬರುತ್ತಿದ್ದವು. ವಾಹನ ನಿಲುಗಡೆ ಮಾಡಲು ಸ್ಥಳವಿಲ್ಲದೆ ತೊಂದರೆಯಾಗುತ್ತಿತ್ತು. ದಟ್ಟಣೆಯೂ ಉಂಟಾಗುತ್ತಿತ್ತು. ಬಹು ಹಂತದ ನಿಲುಗಡೆ ವ್ಯವಸ್ಥೆ ಬಂದರೆ ಅನುಕೂಲವಾಗುತ್ತದೆ’ ಎಂದು ಯಶವಂತಪುರ ಮೆಟ್ರೊ ನಿಲ್ದಾಣದ ವಾಹನ ನಿಲುಗಡೆ ಶುಲ್ಕ ಸಂಗ್ರಹ ಗುತ್ತಿಗೆ ಪಡೆದಿರುವ ಮಹಮ್ಮದ್‌ ಸಲ್ಮಾನ್‌ ಅವರು ಹೇಳಿದರು.

ಈಗ ಎಲ್ಲೆಲ್ಲಿವೆ?

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಖಾಸಗಿ ಸಂಸ್ಥೆಗಳ ಪಾಲುದಾರಿಕೆ ಯಲ್ಲಿ ಗರುಡಾ ಮಾಲ್‌, ಕೆ.ಜಿ. ರಸ್ತೆಯ ಮಹಾ ರಾಜ ಕಾಂಪ್ಲೆಕ್ಸ್‌ ಹಾಗೂ ಜೆ.ಸಿ. ರಸ್ತೆಯಲ್ಲಿ ಈ ರೀತಿಯ ಬಹುಹಂತದ ವಾಹನ ನಿಲುಗಡೆ ಕಟ್ಟಡಗಳನ್ನು ನಿರ್ಮಾಣ ಮಾಡಿದೆ.

ನಿಲ್ದಾಣಕ್ಕೆ ಹೊಂದಿಕೊಂಡೇ ಕಟ್ಟಡ

‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಮೆಟ್ರೊ ನಿಲ್ದಾಣಕ್ಕೆ ಹೊಂದಿಕೊಂಡೇ ಇಂತಹ ಬಹುಹಂತದ ವಾಹನ ನಿಲುಗಡೆ ಕಟ್ಟಡ ಅಥವಾ ಕೇಂದ್ರವನ್ನು ನಿಗಮವು ನಿರ್ಮಾಣ ಮಾಡಲಿದೆ.

ಕೆ.ಆರ್.ಪುರ ಹಾಗೂ ಕೆಂಗೇರಿ ಮೆಟ್ರೊ ನಿಲ್ದಾಣದಲ್ಲಿ ಈ ರೀತಿಯ ಬಹುಹಂತದ ವಾಹನ ನಿಲುಗಡೆ ಕೇಂದ್ರ ನಿರ್ಮಾಣವಾಗುತ್ತಿದೆ. ಚಳ್ಳಘಟ್ಟ ನಿಲ್ದಾಣದ ಬಳಿಯೂ ಇಂತಹ ಕಟ್ಟಡ ತಲೆ ಎತ್ತಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.