ADVERTISEMENT

ಐದು ನಗರ ಪಾಲಿಕೆಗಳಿಗೆ ತಲಾ ₹25 ಕೋಟಿ ಬಿಡುಗಡೆ

ಉಳಿಕೆ ಅನುದಾನ ಹಂಚುವ ಸಮಯದಲ್ಲಿ ಹೊಂದಾಣಿಕೆಯ ಷರತ್ತು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 23:30 IST
Last Updated 16 ಸೆಪ್ಟೆಂಬರ್ 2025, 23:30 IST
ಐದು ನಗರ ಪಾಲಿಕೆ
ಐದು ನಗರ ಪಾಲಿಕೆ   

ಬೆಂಗಳೂರು: ಐದು ನಗರ ಪಾಲಿಕೆಗಳಿಗೆ ತಲಾ ₹25 ಕೋಟಿ ಅನುದಾನವನ್ನು ಹಿಂದಿನ ಬಿಬಿಎಂಪಿ ಖಾತೆಯಿಂದ ಬಿಡುಗಡೆ ಮಾಡಲು ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.

ಜೆ.ಸಿ. ರಸ್ತೆಯ ಯೂನಿಯನ್‌ ಬ್ಯಾಂಕ್‌ನಲ್ಲಿರುವ ಬಿಬಿಎಂಪಿ ಖಾತೆಯಲ್ಲಿ 2025–26ನೇ ಸಾಲಿನಲ್ಲಿ ಸಂಗ್ರಹವಾಗಿರುವ ಆಸ್ತಿ ತೆರಿಗೆಯ ಮೊತ್ತ ₹300 ಕೋಟಿಯಲ್ಲಿ ಐದು ನಗರ ಪಾಲಿಕೆಗಳಿಗೆ ₹125 ಕೋಟಿಯನ್ನು ಷರತ್ತಿಗೆ ಒಳಪಡಿಸಿ ಬಿಡುಗಡೆ ಮಾಡಲಾಗಿದೆ.

ಬೆಂಗಳೂರು ಕೇಂದ್ರ ನಗರ ಪಾಲಿಕೆ, ಬೆಂಗಳೂರು ಪೂರ್ವ ನಗರ ಪಾಲಿಕೆ, ಬೆಂಗಳೂರು ಪಶ್ಚಿಮ ನಗರ ಪಾಲಿಕೆ, ಬೆಂಗಳೂರು ಉತ್ತರ ನಗರ ಪಾಲಿಕೆ, ಬೆಂಗಳೂರು ದಕ್ಷಿಣ ನಗರ ಪಾಲಿಕೆಗಳಿಗೆ ಮುಂದಿನ ದಿನಗಳಲ್ಲಿ ಉಳಿಕೆ ಅನುದಾನವನ್ನು ಹಂಚುವ ಸಮಯದಲ್ಲಿ ಈಗ ಬಿಡುಗಡೆ ಮಾಡಿರುವ ಅನುದಾನವನ್ನು ಹೊಂದಾಣಿಕೆ ಮಾಡಿಕೊಳ್ಳಬೇಕು. ನಗರ ಪಾಲಿಕೆಗಳ ಆಡಳಿತಾಧಿಕಾರಿಯವರ ಅನುಮೋದನೆ ಪಡೆದು, ನಿಯಮಾನುಸಾರ ಅನುದಾನ ವೆಚ್ಚ ಮಾಡಬೇಕು ಎಂಬ ಷರತ್ತು ವಿಧಿಸಲಾಗಿದೆ.

ADVERTISEMENT

‘ಆರಂಭಿಕ ಹಂತಗಳಲ್ಲಿ ಪಾಲಿಕೆಗಳ ದೈನಂದಿನ ಆಡಳಿತಾತ್ಮಕ, ಇತರೆ ವೆಚ್ಚಗಳಿಗಾಗಿ ಅನುದಾನದ ಅಗತ್ಯವಿದೆ. ಪಾಲಿಕೆಗಳ ಬ್ಯಾಂಕ್‌ ಖಾತೆಗೆ ನೇರವಾಗಿ ತೆರಿಗೆ ಹಣ ಪಾವತಿಯಾಗುವ ವ್ಯವಸ್ಥೆ ಜಾರಿಯಾಗುವವರೆಗೂ ಬಿಬಿಎಂಪಿ ವತಿಯಿಂದ ಸಂಗ್ರಹವಾದ ಹಣ ಪ್ರಸ್ತುತ ಸರ್ಕಾರದ ಸುಪರ್ದಿಯಲ್ಲಿದೆ. ಈ ಹಣದಿಂದ ಐದು ನಗರ ಪಾಲಿಕೆಗಳಿಗೆ ತಲಾ ₹25 ಕೋಟಿ ಬಿಡುಗಡೆ ಮಾಡಬಹುದು’ ಎಂದು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ಮುಖ್ಯ ಆಯುಕ್ತರ ಈ ಪ್ರಸ್ತಾವವನ್ನು ಪರಿಶೀಲಿಸಿ, ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆಯಂತೆ (ಜಿಬಿಜಿಎ) ಹಣ ಬಿಡುಗಡೆ ಮಾಡಲಾಗಿದೆ.

ಹೊಣೆಗಾರಿಕೆ: ಜಿಬಿಜಿಎ ಕಾಯ್ದೆಯಂತೆ ಬಿಬಿಎಂಪಿಯ ಎಲ್ಲ ಆಸ್ತಿಗಳು ಮತ್ತು ಹೊಣೆಗಾರಿಕೆಗಳನ್ನು ಐದು ನಗರ ಪಾಲಿಕೆಗಳಿಗೆ ವಹಿಸುವವರೆಗೆ ಸರ್ಕಾರದ ಸುಪರ್ದಿಯಲ್ಲಿರಬೇಕು. ಆಸ್ತಿಗಳು ಮತ್ತು ಹೊಣೆಗಾರಿಕೆಗಳ ಹಂಚಿಕೆಯಲ್ಲಿ ಸರ್ಕಾರದ ನಿರ್ಣಯವೇ ಅಂತಿಮವಾಗಿರುತ್ತದೆ. ಪುನರ್‌ ರಚಿಸಿದ ನಗರ ಪಾಲಿಕೆಗಳಿಗೆ ವರ್ಗಾಯಿಸಲು ಸರ್ಕಾರ ಉಪಬಂಧಗಳನ್ನು ಮಾಡಬೇಕು. ಕಾಯ್ದೆಯ ಈ ಎಲ್ಲ ಅಂಶಗಳನ್ನೂ ಪರಿಗಣಿಸಿ, ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.