ADVERTISEMENT

ಕಾರು ಗುದ್ದಿಸಿ ಅತ್ತೆಯ ಕೊಂದ ಅಳಿಯ

ಸೊಣ್ಣೇನಹಳ್ಳಿ ಮುಖ್ಯರಸ್ತೆಯಲ್ಲಿ ಎರಡು ಕುಟುಂಬಗಳ ನಡುವೆ ‘ಕದನ’

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 19:49 IST
Last Updated 2 ಏಪ್ರಿಲ್ 2019, 19:49 IST

ಬೆಂಗಳೂರು: ಕೌಟುಂಬಿಕ ವಿಚಾರಕ್ಕೆ ಶುರುವಾದ ಜಗಳ ತಾರಕ್ಕಕ್ಕೇ ಹೋಗಿ ಅತ್ತಾರ್ ಅರಾಫತ್ (31) ಎಂಬಾತ, ತನ್ನ ಅತ್ತೆಗೆ ಕಾರು ಗುದ್ದಿಸಿ ಕೊಲೆ ಮಾಡಿದ್ದಾನೆ. ಕೃತ್ಯಕ್ಕೆ ಕುಮ್ಮಕ್ಕು ನೀಡಿದ ಆರೋಪದಡಿ ಅರಾಫತ್ ಜತೆ ಆತನ ತಂದೆ ವಿ.ಕೆ.ಅಮಿರ್ ಜಾನ್‌ನನ್ನೂ (51) ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ.

ಸೊಣ್ಣೇನಹಳ್ಳಿ ಮುಖ್ಯರಸ್ತೆಯಲ್ಲಿ ಮಾರ್ಚ್ 30ರ ರಾತ್ರಿ ಈ ಘಟನೆ ನಡೆದಿದ್ದು, ಮಾಗಡಿ ರಸ್ತೆ ಗೋಪಾಲಪುರದ ರಿಯಾನಾ ತಾಜ್ (40) ಕೊಲೆಯಾದವರು.

ಸಂಧಾನಕ್ಕೆ ಹೋಗಿದ್ದೆವು: ‘ಮಗಳು ತಾನ್ಸಿಯಾ ತಾಜ್‌ಳನ್ನು ವರ್ಷದ ಹಿಂದೆ ಚಿಕ್ಕಬಸ್ತಿ ನಿವಾಸಿ ಅರಾಫತ್‌ಗೆ ಕೊಟ್ಟು ಮದುವೆ ಮಾಡಿದ್ದೆವು. ಆರಂಭದಿಂದಲೂ ಆತ ತನ್ನ ಪೋಷಕರ ಜತೆ ಸೇರಿಕೊಂಡು ತಾನ್ಸಿಯಾಗೆ ಕಿರುಕುಳ ನೀಡುತ್ತಲೇ ಇದ್ದ.

ADVERTISEMENT

ಮಾರ್ಚ್ 30ರ ಸಂಜೆ ಕರೆ ಮಾಡಿದ್ದ ಮಗಳು, ‘ಗಂಡ ಹಾಗೂ ಅತ್ತೆ–ಮಾವ ನನಗೆ ಹೊಡೆಯುತ್ತಿದ್ದಾರೆ. ನನ್ನನ್ನು ಮನೆಗೆ ಕರೆದುಕೊಂಡು ಹೋಗಿ’ ಎಂದಳು.

ಕೂಡಲೇ ನಾನು, ಪತ್ನಿ ಹಾಗೂ ಕೆಲ ಸಂಬಂಧಿಕರು ಅವರ ಮನೆಗೆ ತೆರಳಿದೆವು’ ಎಂದು ಅಮೀರ್ ಜಾನ್ (ಮೃತರ ಪತಿ) ದೂರಿನಲ್ಲಿ ವಿವರಿಸಿದ್ದಾರೆ.

‘ಅವರೆಲ್ಲ ಸೇರಿಕೊಂಡು ಮಗಳಿಗೆ ತುಂಬ ಹೊಡೆದಿದ್ದರು. ನಡೆದ ಘಟನೆ ಬಗ್ಗೆ ಪೊಲೀಸರಿಗೆ ವಿಷಯ ತಿಳಿಸಿ, ಮಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದೆವು. ಅಲ್ಲಿ ಚಿಕಿತ್ಸೆ ಕೊಡಿಸಿದ ನಂತರ ಆಟೊದಲ್ಲಿ ಮನೆಗೆ ಕರೆದುಕೊಂಡು ಹೋಗುತ್ತಿದ್ದೆವು.’

‘ಸೊಣ್ಣೇನಹಳ್ಳಿ ಮುಖ್ಯರಸ್ತೆಯಲ್ಲಿ ಹೋಗುತ್ತಿದ್ದಾಗ ಅರಾಫತ್, ಆತನ ತಂದೆ ವಿ.ಕೆ.ಅಮೀರ್ ಜಾನ್, ಅಣ್ಣ ಯಾಸಿರ್ ಅರಾಫತ್ ಅವರು ಕಾರಿನಲ್ಲಿ ಬಂದು ಆಟೊಗೆ ಡಿಕ್ಕಿ ಮಾಡಿದರು. ಈ ವಿಚಾರವಾಗಿ ಅಲ್ಲಿ ಮತ್ತೆ ಮಾತಿನ ಚಕಮಕಿ ನಡೆಯಿತು. ‘ನಿಮ್ಮನ್ನು ಜೀವಂತವಾಗಿ ಬಿಡುವುದಿಲ್ಲ’ ಎನ್ನುತ್ತಲೇ ಕಾರು ಹತ್ತಿದ ಅಳಿಯ, ಅಡ್ಡಾದಿಡ್ಡಿಯಾಗಿ ಚಾಲನೆ ಮಾಡಿ ಪತ್ನಿಗೆ ಡಿಕ್ಕಿ ಮಾಡಿಬಿಟ್ಟ.’

‘ತೀವ್ರ ಗಾಯಗೊಂಡ ಪತ್ನಿಯನ್ನು ಕೂಡಲೇ ನಾಗರಬಾವಿಯ ಆಸ್ಪತ್ರೆಗೆ ಕರೆದೊಯ್ದೆವು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಸ್ವಲ್ಪ ಸಮಯದಲ್ಲೇ ಆಕೆ ಕೊನೆಯುಸಿರೆಳೆದರು.

ಈ ಸಾವಿಗೆ ಕಾರಣರಾದ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು’ ಎಂದು ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ.

‘ಕೊಲೆ (ಐಪಿಸಿ 302), ಕೊಲೆಯತ್ನ (307) ಹಾಗೂ ವರದಕ್ಷಿಣೆ ಕಿರುಕುಳ (498ಎ) ಆರೋಪಗಳಡಿ ತಂದೆ ಮಗನನ್ನು ವಶಕ್ಕೆ ಪಡೆಯಲಾಗಿದೆ.

ದೂರುದಾರರ ಸಂಬಂಧಿಕರು ನಡೆಸಿದ ಹಲ್ಲೆಯಿಂದ ಯಾಸಿರ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಚೇತರಿಸಿಕೊಂಡ ಬಳಿಕ ಆತನನ್ನೂ ಬಂಧಿಸಲಾಗುವುದು’ ಎಂದು ಜ್ಞಾನಭಾರತಿ ಪೊಲೀಸರು ಮಾಹಿತಿ ನೀಡಿದರು.

ಮಣ್ಣೆರಚಿದರು: ಆರೋಪಿ ಪ್ರತಿದೂರು

‘ಸೊಣ್ಣೇನಹಳ್ಳಿಯಲ್ಲಿ ಪತ್ನಿಯ ಕಡೆಯವರು ನನ್ನ ಕಾರು ಅಡ್ಡಗಟ್ಟಿ, ಕಲ್ಲುಗಳಿಂದ ಗಾಜುಗಳನ್ನು ಒಡೆದರು.

ಕಣ್ಣಿಗೆ ಮಣ್ಣನ್ನೂ ಎರಚಿದರು. ಅವರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿದೆ.

ಕಣ್ಣಿಗೆ ಮಣ್ಣು ಬಿದ್ದಿದ್ದರಿಂದ ಎದುರಿಗಿದ್ದವರು ಕಾಣಿಸಲಿಲ್ಲ.

ಅವರ ತಪ್ಪಿನಿಂದಲೇ ಈ ಸಾವು ಸಂಭವಿಸಿದೆ’ ಎಂದು ಅತ್ತಾರ್ ಅರಾಫತ್ ಸಹ ಪ್ರತಿದೂರು ಕೊಟ್ಟಿದ್ದಾರೆ.

‘ಸುಮಾರು 15 ಜನರ ಗುಂಪು ನಮ್ಮ ಮೇಲೆ ದಾಳಿ ನಡೆಸಿತು. ಹಲ್ಲೆಯಿಂದಾಗಿ ಅಣ್ಣ ಯಾಸಿರ್ ಪ್ರಜ್ಞೆ ತಪ್ಪಿ ಬಿದ್ದ.

ಅತ್ತೆಗೆ ಡಿಕ್ಕಿ ಹೊಡೆದ ನಂತರ ಸ್ವಲ್ಪ ದೂರ ಹೋಗಿ ನಮ್ಮ ಕಾರೂ ಚರಂಡಿಗೆ ಉರುಳಿತು. ಯಾರೋ ನಮ್ಮನ್ನು ವಿಜಯಾ ಆಸ್ಪತ್ರೆಗೆ ದಾಖಲಿಸಿದ್ದರು.

ಹೀಗಾಗಿ, ಎದುರಾಳಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಅವರೂ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.