ADVERTISEMENT

ಕೊಲೆಗೆ ಯತ್ನಿಸಿ ಪರಾರಿ: ಬೆರಳಚ್ಚು ಆ್ಯಪ್‌ನಿಂದ ಸಿಕ್ಕಿಬಿದ್ದ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 16:10 IST
Last Updated 7 ಡಿಸೆಂಬರ್ 2022, 16:10 IST
   

ಬೆಂಗಳೂರು: ವ್ಯಕ್ತಿಯೊಬ್ಬರ ಕೊಲೆಗೆ ಯತ್ನಿಸಿ ಜೈಲು ಸೇರಿ ಜಾಮೀನು ಮೇಲೆ ಹೊರಬಂದು ತಲೆಮರೆಸಿಕೊಂಡಿದ್ದ ಆರೋ‍ಪಿ ವಸಂತ್‌ಕುಮಾರ್ (42) ಎಂಬುವರನ್ನು ರಾಜಗೋಪಾಲನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು, ಮಂಡ್ಯದ ಕೆ.ಆರ್.ಎಸ್ ಪೊಲೀಸರ ಸುಪರ್ದಿಗೆ ಒಪ್ಪಿಸಿದ್ದಾರೆ.

‘ಮೈಸೂರಿನ ವಸಂತ್‌ಕುಮಾರ್ ವಿರುದ್ಧ ಕೆ.ಆರ್.ಎಸ್ ಠಾಣೆಯಲ್ಲಿ 2010ರಲ್ಲಿ ಪ್ರಕರಣ ದಾಖಲಾಗಿತ್ತು. ಈತನನ್ನು ಬಂಧಿಸಿದ್ದ ಪೊಲೀಸರು ಜೈಲಿಗೆ ಕಳುಹಿಸಿದ್ದರು. ಜಾಮೀನು ಪಡೆದು ಹೊರಗೆ ಬಂದಿದ್ದ ಆರೋಪಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ 2017ರಿಂದ ತಲೆಮರೆಸಿಕೊಂಡಿದ್ದ. ಐದು ವರ್ಷಗಳ ನಂತರ ಸಿಕ್ಕಿಬಿದ್ದಿದ್ದಾನೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕೆಂಗೇರಿ ವಿಳಾಸ ನೀಡಿ ಪೊಲೀಸರ ದಿಕ್ಕು ತಪ್ಪಿಸಿದ್ದ ಆರೋಪಿ, ಲಗ್ಗೆರೆ ಬಳಿಯ ಭೈರವೇಶ್ವರನಗರದಲ್ಲಿ ವಾಸವಿದ್ದ. ಆಟೊ ಚಲಾಯಿಸಿಕೊಂಡು ಜೀವನ ಸಾಗಿಸುತ್ತಿದ್ದ. ಈತನ ನೈಜ ವಿಳಾಸ ಪೊಲೀಸರಿಗೆ ಗೊತ್ತಿರಲಿಲ್ಲ’ ಎಂದು ತಿಳಿಸಿವೆ.

ADVERTISEMENT

ಆ್ಯಪ್‌ ನೀಡಿದ್ದ ಸುಳಿವು: ‘ಅಪರಾಧ ಹಿನ್ನೆಲೆಯುಳ್ಳ ಹಾಗೂ ಹಳೇ ಪ್ರಕರಣಗಳ ಆರೋಪಿಗಳನ್ನು ಪತ್ತೆ ಮಾಡುವುದಕ್ಕಾಗಿ ಪೊಲೀಸ್ ಇಲಾಖೆಯಿಂದ ‘ಎಂ–ಸಿಸಿಟಿಎನ್‌ಎಸ್‌’ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಎಲ್ಲ ಪೊಲೀಸರು ತಮ್ಮ ಮೊಬೈಲ್‌ಗಳಲ್ಲಿ ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡು, ಅನುಮಾನಾಸ್ಪದ ವ್ಯಕ್ತಿಗಳ ಪರಿಶೀಲನೆ ನಡೆಸುತ್ತಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆರೋಪಿ ವಸಂತ್‌ಕುಮಾರ್, ರಾಜಗೋಪಾಲನಗರ ಠಾಣೆಯ ಯುರೊ ಫಾರಂ ಜಂಕ್ಷನ್‌ನಲ್ಲಿ ಡಿ. 5ರಂದು ರಾತ್ರಿ ಕಾಣಿಸಿಕೊಂಡಿದ್ದ. ಗಸ್ತಿನಲ್ಲಿದ್ದ ಸಿಬ್ಬಂದಿ, ಆತನನ್ನು ತಡೆದು ಆ್ಯಪ್‌ ಮೂಲಕ ಪರಿಶೀಲಿಸಿದ್ದರು. ವಸಂತ್‌ಕುಮಾರ್ ಅವರ ಬೆರಳಚ್ಚು ಆ್ಯಪ್‌ನಲ್ಲಿರುವ ಬೆರಳಚ್ಚಿಗೆ ಹೋಲಿಕೆಯಾಗಿತ್ತು. ಕೂಡಲೇ ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದರು’ ಎಂದು ತಿಳಿಸಿವೆ.

‘ಆರೋಪಿಯನ್ನು ವಿಚಾರಣೆ ನಡೆಸಿದಾಗ, ಕೊಲೆ ಯತ್ನ ಪ್ರಕರಣದ ಮಾಹಿತಿ ಲಭ್ಯವಾಯಿತು. ನಂತರವೇ ಕೆ.ಆರ್.ಎಸ್ ಠಾಣೆಗೆ ಮಾಹಿತಿ ನೀಡಲಾಯಿತು. ಅಲ್ಲಿಯ ಪೊಲೀಸರು, ನಗರಕ್ಕೆ ಬಂದು ಆರೋಪಿಯನ್ನು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ. ಸದ್ಯ ಆತನನ್ನು ಜೈಲಿಗೆ ಬಿಟ್ಟಿದ್ದಾರೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.