ADVERTISEMENT

ನಾದಿನಿಗಾಗಿ ಸುಪಾರಿ ಕೊಟ್ಟ ಬಾವ!

ಸಾಫ್ಟ್‌ವೇರ್‌ ಎಂಜಿನಿಯರ್ ಕೊಲೆ ಪ್ರಕರಣ * ಹಂತಕರ ಬಂಧನ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 21:26 IST
Last Updated 19 ಫೆಬ್ರುವರಿ 2020, 21:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮಹದೇವಪುರ ರಿಂಗ್‌ ರಸ್ತೆಯ ಫ್ಲೈಓವರ್‌ ಬಳಿ ಫೆ. 3ರಂದು ನಡೆದಿದ್ದ ಸಾಫ್ಟ್‌ವೇರ್‌ ಎಂಜಿನಿಯರ್‌ ಲಕ್ಷ್ಮಣ್‌ ಕುಮಾರ್‌ (33) ಎಂಬುವರ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಸುಪಾರಿ ಹಂತಕರ ಸಹಿತ ಒಟ್ಟು ಒಂಬತ್ತು ಮಂದಿಯನ್ನು ಬಂಧಿಸಿದ್ದಾರೆ.

ಆರೋಪಿಗಳ ಪೈಕಿ ಒಬ್ಬರಾಗಿರುವ ಸತ್ಯ, ತನ್ನ ನಾದಿನಿ ಶ್ರೀಜಾ (ಪತ್ನಿಯ ತಂಗಿ) ಅವರ ಹಿಂದೆ ಬಿದ್ದಿದ್ದ. ಈ ಪ್ರೀತಿ ಏಕಮುಖವಾಗಿತ್ತು. ಈಕೆಯ ಪತಿ ಲಕ್ಷ್ಮಣ್‌ ಅವರನ್ನು ಕೊಲೆ ಮಾಡಿಸಿದರೆ ಅಣ್ಣತಮ್ಮಂದಿರಿಲ್ಲದ ಶ್ರೀಜಾ ತನ್ನ ಮನೆಗೆ ಬರಬಹುದೆಂದು ಭಾವಿಸಿ ಸುಪಾರಿ ಕೊಟ್ಟಿದ್ದ. ಹಂತಕರಿಗೆ₹ 15 ಲಕ್ಷ ನಗದು ಮತ್ತು ಹೈದರಾಬಾದ್‌ನಲ್ಲಿ ಮನೆ ಕೊಡಲು ಒಪ್ಪಂದ ಮಾಡಿಕೊಂಡಿದ್ದು ಪೊಲೀಸರ ತನಿಖೆಯಿಂದ ಬಯಲಾಗಿದೆ!

ಪ್ರಕರಣಕ್ಕೆ ಸಂಬಂಧಿಸಿದ ಹಳೆ ಬೈಯಪ್ಪನಹಳ್ಳಿಯ ಪ್ರಶಾಂತ್‌ ಅಲಿಯಾಸ್‌ ಪಪ್ಪಿ (20), ಕಗ್ಗದಾಸಪುರದ ಪ್ರೇಮ್‌ (31), ಹೈದರಾಬಾದಿನ ಸತ್ಯ ಅಲಿಯಾಸ್‌ ಸತ್ಯಪ್ರಸಾದ್‌ ವೆಂಕಟರಂಗ ನುನೆ (41), ಹೊಸಕೋಟೆಯ ದಿನೇಶ್‌ (26), ಶಿಡ್ಲಘಟ್ಟದ ಲೋಕೇಶ್‌ (28), ಕಗ್ಗದಾಸಪುರದವರೇ ಆದ ಕುಶಾಂತ್‌ (30), ಸಂತೋಷ್‌ (25), ಮಲ್ಲೇಶನಪಾಳ್ಯದ ರವಿ (37), ಹೊಸಕೋಟೆಯ ಸಯಿದಾ (25) ಬಂಧಿತರು. ಆರೋಪಿಗಳಿಂದ ಎರಡು ಚಾಕು, ಮೂರು ಕಾರು, ದ್ವಿಚಕ್ರ ವಾಹನ, ಮೊಬೈಲ್‌, ಲ್ಯಾಪ್‌ಟಾಪ್‌ ವಶಪಡಿಸಿಕೊಳ್ಳಲಾಗಿದೆ.

ADVERTISEMENT

ಬೆಳ್ಳಂದೂರಿನಲ್ಲಿರುವ ಸುಬೆಕ್ಸ್‌ ಕಂಪನಿಯ ಉದ್ಯೋಗಿ ಲಕ್ಷ್ಮಣ, ಪತ್ನಿ ಜೊತೆ ಹೊರಮಾವು ಮುಖ್ಯರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದರು. ಫೆ. 3ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಲಕ್ಷ್ಮಣ್‌ ಅವರನ್ನು ಹಿಂಬಾಲಿಸಿದ್ದ ಅಪರಿಚಿತರು ಚಾಕುವಿನಿಂದ ಇರಿದು ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಲಕ್ಷ್ಮಣ್‌ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಸತ್ಯನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪ್ರಕರಣ ಬಯಲಾಗಿದೆ. ಲಕ್ಷ್ಮಣ್‌ನ ಕೊಲೆಗೆ ಹೈದರಾಬಾದ್‌ನಲ್ಲಿ ನೆಲೆಸಿದ್ದ ಬೆಂಗಳೂರಿನ ದಿನೇಶ್‌ಗೆ ಸುಪಾರಿ ಕೊಟ್ಟಿದ್ದ ಸತ್ಯ, ತನ್ನ ಲ್ಯಾಪ್‌ಟಾಪ್‌ನಲ್ಲಿ ಲಕ್ಷ್ಮಣ್‌ನ ಫೇಸ್‌ಬುಕ್‌ ಖಾತೆ ತೆರೆದು, ಫೋಟೊ ಮತ್ತು ವಿಳಾಸವನ್ನೂ ನೀಡಿದ್ದ. ಬೆಂಗಳೂರಿಗೆ ಬಂದ ನೇಶ್‌, ಲಕ್ಷ್ಮಣ್‌ ಓಡಾಡುತ್ತಿದ್ದ
ದ್ವಿಚಕ್ರ ವಾಹನ ಪತ್ತೆ ಮಾಡಿ, ಸತ್ಯನಿಂದ ₹ 1.50 ಲಕ್ಷ ಮುಂಗಡ ಪಡೆದುಕೊಂಡಿದ್ದ. ಈ ವಿಷಯವನ್ನು ತನ್ನ ಪತ್ನಿ ಸಯಿದಾಳ ಜೊತೆಗೂ ದಿನೇಶ್‌ ಹಂಚಿಕೊಂಡಿದ್ದ. ಕೃತ್ಯಕ್ಕೆ ಸಯಿದಾ ಕುಮ್ಮಕ್ಕು ನೀಡಿದ್ದಳು ಎಂದು ಪೊಲೀಸರು ತಿಳಿಸಿದರು.

ಲಕ್ಷ್ಮಣ್‌ನನ್ನು ಕೊಲೆ ಮಾಡುವ ಬಗ್ಗೆ ಇತರ ಆರೋಪಿಗಳ ಜೊತೆ ದೇವನಹಳ್ಳಿಯಲ್ಲಿರುವ ವಸತಿಗೃಹವೊಂದರಲ್ಲಿ ದಿನೇಶ್ ಚರ್ಚೆ ನಡೆಸಿದ್ದ. ಪೂರ್ವಯೋಜನೆಯಂತೆ, ಜ. 30ರಂದು ಸಂಜೆ 6 ಗಂಟೆಯಿಂದ ರಾತ್ರಿ 11 ಗಂಟೆವರೆಗೆ ಲಕ್ಷ್ಮಣ್‌ ಬರುವಿಕೆಗಾಗಿ ಕೆ.ಆರ್‌. ಪುರದಲ್ಲಿರುವ ಬಿಎಂಟಿಸಿ ಡಿಪೊ ಬಳಿ ಆರೋಪಿಗಳು ಕಾದು ಕುಳಿತಿದ್ದರು. ಆದರೆ, ಅಂದು ಲಕ್ಷ್ಮಣ್ ಅಲ್ಲಿಗೆ ಬಂದಿರಲಿಲ್ಲ. ಮರುದಿನ ಬೆಳಿಗ್ಗೆ 8.30ರಿಂದ ‌ಮಧ್ಯಾಹ್ನ 12.30ರವರೆಗೆ ಹೊರಮಾವು ಮುಖ್ಯರಸ್ತೆಯಲ್ಲಿ ಲಕ್ಷ್ಮಣ್‌ಗಾಗಿ ಕಾದಿದ್ದರು. ಅಂದು ಕೂಡಾ ಲಕ್ಷ್ಮಣ್‌ ಅವರಿಗೆ ಸಿಕ್ಕಿರಲಿಲ್ಲ.

ಆದರೆ, ಫೆ. 3ರಂದು ಮತ್ತೆ ಹೊರಮಾವು ಬಸ್‌ ನಿಲ್ದಾಣದ ಬಳಿ ಕಾದು ಕುಳಿತಿದ್ದ ಹಂತಕರು, ದ್ವಿಚಕ್ರ ವಾಹನದಲ್ಲಿ ಲಕ್ಷ್ಮಣ್‌ ಹೋಗುತ್ತಿರುವುದನ್ನು ಗಮನಿಸಿ ಹಿಂಬಾಲಿಸಿದ್ದರು. ಆರೋಪಿಗಳಾದ ಪ್ರಶಾಂತ್‌ ಮತ್ತು ಪ್ರೇಮ್‌ ದ್ವಿಚಕ್ರ ವಾಹನದಲ್ಲಿ ಮತ್ತು ಉಳಿದವರು ಕಾರಿನಲ್ಲಿದ್ದರು. ಮಹದೇವಪುರ ರಿಂಗ್‌ ರಸ್ತೆಯ ಫ್ಲೈಓವರ್‌ ಬಳಿ ಅಡ್ಡಗಟ್ಟಿ ಹಲ್ಲೆ ನಡೆಸಿ ಪರಾರಿಯಾಗಿದ್ದರು.

ಹಿಂದೆಯೂ ಲಕ್ಷ್ಮಣ್‌ ಹತ್ಯೆಗೆ ಯತ್ನ!
2019ರ ಜುಲೈ 16ರಂದು ಲಕ್ಷ್ಮಣ್‌ ಅವರ ಕತ್ತು ಕೊಯ್ದು ಕೊಲೆ ಮಾಡಲು ದಿನೇಶ್‌ ಯತ್ನಿಸಿದ್ದ ಎಂಬ ಸಂಗತಿ ತನಿಖೆಯಿಂದ ಬಯಲಾಗಿದೆ.

ದಿನೇಶ್‌, ಸತ್ಯನಿಂದ ₹ 3 ಲಕ್ಷ ಮುಂಗಡ ಪಡೆದಿದ್ದ. ಈ ಉದ್ದೇಶದಿಂದ ಬೆಂಗಳೂರಿಗೆ ಬಂದು ತನ್ನ ಚಿಕ್ಕಪ್ಪ ಆಂಥೋಣಿ ಮಾರ್ಕ್‌ ಅವರ ಮನೆಯಲ್ಲಿ ಉಳಿದುಕೊಂಡಿದ್ದ. ಕೃತ್ಯ ಎಸಗಲು ಇಬ್ಬರು ಹುಡುಗರಿಗೆ ಹಣ ನೀಡಿದ್ದ. ಆದರೆ, ಹಣ ಪಡೆದುಕೊಂಡಿದ್ದ ಹುಡುಗರು ಪರಾರಿ ಆಗಿದ್ದರು.

ಇದಾದ ಬಳಿಕ ದಿನೇಶ್‌ ತನ್ನ ಸ್ನೇಹಿತ ಪ್ರದೀಪ್‌ ಎಂಬುವನೊಂದಿಗೆ ವಸತಿಗೃಹದಲ್ಲಿ ವಾಸ್ತವ್ಯ ಹೂಡಿ ಸಂಚು ರೂಪಿಸಿದ್ದ. ಈ ಬಗ್ಗೆ ಹೆಣ್ಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.