ಬೆಂಗಳೂರು: ಜೈಲಿನಿಂದ ಬಿಡುಗಡೆಯಾದ ವ್ಯಕ್ತಿಯನ್ನು ಮಾತುಕತೆಗೆ ಕರೆಸಿ, ಕೊಲೆ ಮಾಡಿದ್ದ ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ, ಜೆ.ಜೆ. ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜೆ. ಜೆ. ನಗರದ ಜನತಾ ಕಾಲೋನಿಯಲ್ಲಿ ಶನಿವಾರ ರಾತ್ರಿ ವಿಜಯ್ (26) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಆರೋಪಿಗಳು ಕೊಲೆ ಮಾಡಿದ್ದರು. ಬಂಧಿಸಲು ತೆರಳಿದ ಪೊಲೀಸ್ ಸಿಬ್ಬಂದಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ ದೀಪು (28) ಹಾಗೂ ಅರುಣ್ (27) ಅವರ ಕಾಲಿಗೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲ ತಿಂಗಳ ಹಿಂದೆ ನಡೆದ ಗಲಾಟೆ ವೇಳೆ ಅರುಣ್‌ಗೆ ವಿಜಯ್ ಚಾಕುವಿನಿಂದ ಇರಿದಿದ್ದ. ಕೊಲೆ ಯತ್ನದ ಆರೋಪದಡಿ ವಿಜಯ್‌ನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ವಿಜಯ್ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಅರುಣ್ ಕಾಯುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಶನಿವಾರವಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ವಿಜಯ್‌ನನ್ನು ರಾಜಿ ಸಂಧಾನಕ್ಕೆಂದು ಜನತಾ ಕಾಲೋನಿ ಬಳಿ ಅರುಣ್ ಕರೆಸಿದ್ದ. ರಾತ್ರಿ ಮಾತುಕತೆಗೆಂದು ಬಂದ ವಿಜಯ್‌ನನ್ನು ಅರುಣ್ ಮತ್ತು ದೀಪು ಅಟ್ಟಾಡಿಸಿಕೊಂಡು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ, ಪರಾರಿಯಾಗಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಜೆ. ಜೆ. ನಗರ ಠಾಣೆ ಪೊಲೀಸರು, ರಾಜರಾಜೇಶ್ವರಿ ನಗರ ಸಮೀಪದ ಅರಣ್ಯ ಪ್ರದೇಶದಲ್ಲಿ ಬಚ್ಚಿಟ್ಟುಕೊಂಡಿದ್ದ ಆರೋಪಿಗಳನ್ನು ಬಂಧಿಸಲು ತೆರಳಿದ್ದರು. ಈ ವೇಳೆ ಆರೋಪಿಗಳಿಬ್ಬರೂ ಪೊಲೀಸರ ಮೇಲೆಯೇ ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದರು. ಗಾಳಿಯಲ್ಲಿ ಗುಂಡು ಹಾರಿಸಿದ್ದ ಇನ್‌ಸ್ಪೆಕ್ಟರ್ ಕೆಂಪೇಗೌಡ, ಶರಣಾಗುವಂತೆ ಸೂಚಿಸಿದ್ದರು. ಆದರೂ ಆರೋಪಿಗಳು ಮಾರಕಾಸ್ತ್ರಗಳಿಂದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು.
ಬಳಿಕ ಇಬ್ಬರ ಕಾಲಿಗೂ ಇನ್ಸ್‌ಪೆಕ್ಟರ್ ಕೆಂಪೇಗೌಡ ಗುಂಡು ಹಾರಿಸುವ ಮೂಲಕ ಬಂಧಿಸಿದರು. ಘಟನೆಯಲ್ಲಿ ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿ ಹಾಗೂ ಗುಂಡೇಟು ತಗುಲಿರುವ ಆರೋಪಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.