ಬೆಂಗಳೂರು: ಕೌಟುಂಬಿಕ ವಿಚಾರಕ್ಕೆ ಪುತ್ರಿಯ ಎದುರು ಎರಡನೇ ಪತ್ನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ ಪತಿ ಲೋಹಿತಾಶ್ವ (43) ಎಂಬಾತ ಪೊಲೀಸರಿಗೆ ಸೋಮವಾರ ತಡರಾತ್ರಿ ಶರಣಾಗಿದ್ದಾನೆ.
‘ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ಚಾಕು ಜಪ್ತಿ ಮಾಡಲಾಗಿದೆ’ ಎಂದು ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ತಿಳಿಸಿದ್ದಾರೆ.
‘ಎರಡನೇ ಪತ್ನಿಯ ಮೇಲೆ ಅನುಮಾನಗೊಂಡು 11 ಬಾರಿ ಇರಿದು ಕೊಲೆ ಮಾಡಿದ್ದೆ ಎಂಬುದಾಗಿ ಆರೋಪಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದರು.
ಸೋಮವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ರೇಖಾ ಅವರು 13 ವರ್ಷದ ಪುತ್ರಿಯ ಜತೆಗೆ ಸುಂಕದಕಟ್ಟೆ ಬಸ್ ನಿಲ್ದಾಣದಲ್ಲಿ ನಿಂತಿದ್ದರು. ಆಗ ಸ್ಥಳಕ್ಕೆ ಬಂದಿದ್ದ ಆರೋಪಿ, ಜಗಳ ತೆಗೆದು ಕೊಲೆ ಮಾಡಿ ಪರಾರಿ ಆಗಿದ್ದ’ ಎಂದು ಪೊಲೀಸರು ಹೇಳಿದರು.
‘ಹಾಸನ ಜಿಲ್ಲೆ, ಚನ್ನರಾಯಪಟ್ಟಣದ ರೇಖಾ ಅವರು ಕೌಟುಂಬಿಕ ಕಾರಣಕ್ಕೆ ಮೊದಲ ಪತಿಯಿಂದ ವಿಚ್ಛೇದನ ಪಡೆದುಕೊಂಡಿದ್ದರು. ಇಬ್ಬರು ಹೆಣ್ಣು ಮಕ್ಕಳ ಜತೆಗೆ ಚನ್ನೇನಹಳ್ಳಿಯಲ್ಲಿ ನೆಲಸಿದ್ದರು. ಟೆಲಿಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದರು. ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಲೋಹಿತಾಶ್ವನಿಗೂ ಮದುವೆಯಾಗಿತ್ತು. ಆತ ಸಹ ಕೌಟುಂಬಿಕ ಕಾರಣಕ್ಕೆ ಪತ್ನಿ, ಮಕ್ಕಳಿಂದ ದೂರವಾಗಿ ಪ್ರತ್ಯೇಕವಾಗಿ ನೆಲಸಿದ್ದ. ಈ ನಡುವೆ ಸ್ನೇಹಿತರ ಮೂಲಕ ಪರಿಚಯವಾದ ರೇಖಾ ಜತೆಗೆ ಆರೋಪಿ ಸ್ನೇಹ ಬೆಳೆಸಿದ್ದ. ಒಂದೂವರೆ ವರ್ಷದಿಂದ ಇಬ್ಬರೂ ಆತ್ಮೀಯರಾಗಿದ್ದರು. ಮೂರು ತಿಂಗಳ ಹಿಂದೆ ರೇಖಾ ಹಾಗೂ ಲೋಹಿತಾಶ್ವ ಅವರು ಮದುವೆಯಾಗಿದ್ದರು. ಕೆಬ್ಬೆಹಳ್ಳದ ಬಾಡಿಗೆ ಮನೆಯಲ್ಲಿ ರೇಖಾ, ಅವರ ಪುತ್ರಿಯ ಜತೆಗೆ ಲೋಹಿತಾಶ್ವ ವಾಸವಾಗಿದ್ದ. ರೇಖಾ ಅವರು ಕಿರಿಯ ಪುತ್ರಿಯನ್ನು ತನ್ನ ಪೋಷಕರ ಮನೆಯಲ್ಲಿ ಇರಿಸಿದ್ದರು’ ಎಂದು ಪೊಲೀಸರು ಹೇಳಿದರು.
‘ಮದುವೆಯಾದ ಬಳಿಕ ರೇಖಾ ಅವರು ಪತಿ ಕಂಪನಿಯಲ್ಲೇ ಕೆಲಸಕ್ಕೆ ಸೇರಿಕೊಂಡಿದ್ದರು. ಕೌಟುಂಬಿಕ ಕಾರಣಕ್ಕೆ ಇಬ್ಬರೂ ಪ್ರತಿನಿತ್ಯ ಗಲಾಟೆ ಮಾಡಿಕೊಳ್ಳುತ್ತಿದ್ದರು. ಸೋಮವಾರ ಮುಂಜಾನೆಯೂ ದಂಪತಿ ನಡುವೆ ಗಲಾಟೆ ಆಗಿತ್ತು. ಬಳಿಕ ಬಸ್ ನಿಲ್ದಾಣದಲ್ಲಿ ನಿಂತಿದ್ದ ಪತ್ನಿಯನ್ನು ಆರೋಪಿ ಕೊಲೆ ಮಾಡಿ ಪರಾರಿಯಾಗಿದ್ದ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.