ಬೆಂಗಳೂರು: ವಿಲ್ಸ್‌ನ್‌ಗಾರ್ಡನ್ ಠಾಣಾ ವ್ಯಾಪ್ತಿಯಲ್ಲಿ 2004ರಲ್ಲಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿಯನ್ನು 20 ವರ್ಷಗಳ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ನಿರ್ದೇಶಕ ಗಜೇಂದ್ರ ಅಲಿಯಾಸ್ ಗಜಾ (46) ವರ್ಷ ಬಂಧಿತ ಆರೋಪಿ.
2004ರಲ್ಲಿ ನಡೆದಿದ್ದ ಗಲಾಟೆಯಲ್ಲಿ ಕೊತ್ತ ರವಿ ಎಂಬುವವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ, ಪ್ರಕರಣವನ್ನು ಸಿಸಿಬಿ ವರ್ಗಾವಣೆ ಮಾಡಲಾಗಿತ್ತು. ಸಿಸಿಬಿ ಪೊಲೀಸರು ತನಿಖೆ ನಡೆಸಿ, ಪ್ರಕರಣದ ಕೆಲವು ಆರೋಪಿಗಳನ್ನು ಬಂಧಿಸಿದ್ದರು. ಆದರೆ, ಗಜೇಂದ್ರ ತಲೆಮರೆಸಿಕೊಂಡಿದ್ದರು.
ಕೃತ್ಯ ಎಸಗಿದ ಬಳಿಕ ಗಜೇಂದ್ರ ಅವರು ತಮಿಳುನಾಡಿನ ವೆಲ್ಲೂರಿಗೆ ತೆರಳಿ ತಲೆಮರೆಸಿಕೊಂಡಿದ್ದರು. ಸುಮಾರು ಮೂರುವರೆ ವರ್ಷಗಳ ವೆಲ್ಲೂರಿನಲ್ಲಿದ್ದ ಆರೋಪಿ, ನಗರಕ್ಕೆ ಬಂದು ಸದ್ದಗುಂಟೆಪಾಳ್ಯದಲ್ಲಿ ಬಾಡಿಗೆ ಮನೆ ಪಡೆದು ನೆಲೆಸಿದ್ದರು.
ಮನೆ ಮಾಲೀಕರಿಗೆ ಸಿನಿಮಾ ನಿರ್ದೇಶನ ಮಾಡುತ್ತಿರುವುದಾಗಿ ಮಾಹಿತಿ ನೀಡಿದ್ದರು. ಪೊಲೀಸರು ಪ್ರಕರಣವನ್ನು ಮರೆತಿರಬಹುದು ಎಂದು ಭಾವಿಸಿದ್ದ ಆರೋಪಿ ನಗರದಲ್ಲಿ ಓಡಾಟ ನಡೆಸುತ್ತಿದ್ದರು. ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.
ರೌಡಿಶೀಟರ್ ಕೊತ್ತ ರವಿ:
ರೌಡಿಶೀಟರ್ ಕೊತ್ತ ರವಿ ಕೊಲೆ ಪ್ರಕರಣದಲ್ಲಿ ಗಜೇಂದ್ರ 18ನೇ ಆರೋಪಿ. ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ರವಿಯನ್ನು ಕೊಲೆ ಮಾಡಲಾಗಿತ್ತು.
‘ಆರೋಪಿಗೆ ಸಾಕಷ್ಟು ಬಾರಿ ಹುಡುಕಾಟ ನಡೆಸಲಾಗಿತ್ತು. ಮನೆಗೂ ತೆರಳಿ ನೋಟಿಸ್ ನೀಡಲಾಗಿತ್ತು. ಗಜೇಂದ್ರ ಅವರು ಪುಟಾಣಿ ಪವರ್ ಸೇರಿದಂತೆ ಕನ್ನಡದಲ್ಲಿ ಕೆಲವು ಚಿತ್ರಗಳ ನಿರ್ದೇಶನ ಮಾಡಿದ್ದರು. ತಮಿಳು ಭಾಷೆಯ ಚಿತ್ರಗಳಲ್ಲೂ ಇವರು ಕೆಲಸ ಮಾಡಿದ್ದರು’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.