ADVERTISEMENT

ರೂಪದರ್ಶಿ ಕೊಂದವನಿಗೆ ಸಿಕ್ಕಿದ್ದು ₹500 ಮಾತ್ರ!

ವಿಮಾನ ನಿಲ್ದಾಣ ಬಳಿ ನಡೆದಿದ್ದ ಕೊಲೆ ಪ್ರಕರಣ: ‘ಓಲಾ’ ಕ್ಯಾಬ್ ಚಾಲಕ ಬಂಧನ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2019, 20:08 IST
Last Updated 23 ಆಗಸ್ಟ್ 2019, 20:08 IST
ಪೂಜಾ ಸಿಂಗ್
ಪೂಜಾ ಸಿಂಗ್   

ಬೆಂಗಳೂರು: ಹಣ ದೋಚಲು ಕೋಲ್ಕತ್ತಾದ ರೂಪದರ್ಶಿ ಪೂಜಾಸಿಂಗ್‌ ಡೇ ಅವರನ್ನು ಕೊಲೆ ಮಾಡಿದ ಆರೋಪದ ಮೇಲೆ ಓಲಾ ಕ್ಯಾಬ್‌ ಚಾಲಕ ನಾಗೇಶ್‌ (22) ಎಂಬಾತನನ್ನು ಇಲ್ಲಿನ ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಕಳೆದ ಮೂರು ವಾರಗಳಿಂದ ಪೊಲೀಸರಿಗೆ ಈ ಪ್ರಕರಣ ಸವಾಲಾಗಿತ್ತು.

ಜುಲೈ 31ರ ಬೆಳಗಿನ ಜಾವ ಸಿಂಗ್‌ ಅವರನ್ನು ವಿಮಾನ ನಿಲ್ದಾಣಕ್ಕೆ ಕ್ಯಾಬ್‌ನಲ್ಲಿ ಕರೆದೊಯ್ಯುತ್ತಿದ್ದ ಚಾಲಕ, ಮಹಿಳೆ ಬ್ಯಾಗ್‌ನಲ್ಲಿ ಭಾರಿ ಹಣ ಇರಬಹುದೆಂದು ಭಾವಿಸಿ ಕೊಲೆ ಮಾಡಿದ್ದಾನೆ. ಆದರೆ, ಅವನಿಗೆ ಕೇವಲ ₹500 ನಗದು ಮತ್ತು ಎರಡು ಮೊಬೈಲ್‌ (ಐಫೋನ್‌, ವಿವೊ) ಸಿಕ್ಕಿದ್ದವು ಎಂದುಡಿಸಿಪಿ ಭೀಮಾಶಂಕರ್ ಗುಳೇದ್ ತಿಳಿಸಿದರು.

ADVERTISEMENT

‘ವಿಮಾನ ನಿಲ್ದಾಣದ ಕಾಂಪೌಂಡ್‌ ಸಮೀಪದಲ್ಲೇ ಬಾಗಲೂರು ಠಾಣೆ ವ್ಯಾಪ್ತಿಯ ಕಾಡಯರಪ್ಪನಹಳ್ಳಿಯಲ್ಲಿ ಅಪರಿಚಿತ ಮಹಿಳೆಯ ಶವ ಸಿಕ್ಕಿತ್ತು. ದೇಹದ ಮೇಲಿನ ಗಾಯದ ಗುರುತುಗಳನ್ನು ಗಮನಿಸಿದಾಗ, ಕೊಲೆ ಇರಬಹುದು ಎಂಬ ಅನುಮಾನ ಬಂದಿತ್ತು. ಸ್ಥಳೀಯ ನಿವಾಸಿ ಮುನಿರಾಜು ಎಂಬುವವರು ನೀಡಿದ ದೂರು ಆಧರಿಸಿ ತನಿಖೆ ಕೈಗೊಂಡ ವಿಶೇಷ ತಂಡಗಳು, ಮಹಿಳೆ ಗುರುತು ಪತ್ತೆ ಹಚ್ಚಿತು. ಇದರ ಹಿಂದೆಯೇ ಆರೋಪಿಯನ್ನೂ ಬಂಧಿಸಲಾಯಿತು’ ಎಂದು ಅವರು ವಿವರಿಸಿದರು.

ಕಾರ್ಯಕ್ರಮ ಸಂಘಟನೆಗೆ ಬಂದಿದ್ದರು: ‘ಕೋಲ್ಕತ್ತ ನ್ಯೂ ಟೌನ್ ನಿವಾಸಿ ಆಗಿದ್ದ ಪೂಜಾ ಸಿಂಗ್, ರೂಪದರ್ಶಿ ಹಾಗೂ ಕಾರ್ಯಕ್ರಮ ಸಂಘಟಕಿ ಆಗಿದ್ದರು. ಕೆಲಸ ನಿಮಿತ್ತ ಜುಲೈ 30ರಂದು ನಸುಕಿನಲ್ಲಿ ವಿಮಾನದ ಮೂಲಕ ಬೆಂಗಳೂರಿಗೆ ಬಂದಿದ್ದರು. ನಿಲ್ದಾಣದ ಕೌಂಟರ್‌ನಲ್ಲೇ ಓಲಾ ಕ್ಯಾಬ್ ಕಾಯ್ದಿರಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ಹಲವು ವರ್ಷಗಳಿಂದ ‘ಓಲಾ’ ಕಂಪನಿ ಚಾಲಕನಾಗಿರುವಹೆಗ್ಗನಹಳ್ಳಿ ಕ್ರಾಸ್‌ನ ಸಂಜೀವಿನಿ ನಗರದ ನಿವಾಸಿ ನಾಗೇಶ್, ತನ್ನ ಕಾರಿನಲ್ಲೇ ಪೂಜಾ ಅವರನ್ನು ಹೋಟೆಲ್‌ಗೆ ಕರೆದೊಯ್ದಿದ್ದ. ನಗರದಲ್ಲಿ ಕೆಲವರನ್ನು ಭೇಟಿ ಆಗುವುದಕ್ಕಾಗಿ ಅವರು ಆರೋಪಿಯ ಕಾರಿನಲ್ಲೇ ಇಡೀ ದಿನ ಸುತ್ತಾಡಿದ್ದರು. ತಡರಾತ್ರಿ ವಾಪಸ್ ಹೋಟೆಲ್‌ಗೆ ಬಂದಾಗ, ‘ಜುಲೈ 31ರಂದು ನಸುಕಿನಲ್ಲೇ ಊರಿಗೆ ಹೋಗಲು ವಿಮಾನವಿದೆ. ನೀನೇ ನಿಲ್ದಾಣದವರೆಗೂ ಬಿಡಬೇಕು. ಈಗ ಹೋಟೆಲ್‌ ಬಳಿಯೇ ಕಾರು ನಿಲ್ಲಿಸಿಕೊಂಡು ಮಲಗು’ ಎಂದು ಹೇಳಿ ಪೂಜಾ ಕೊಠಡಿಗೆ ಹೋಗಿದ್ದರು.’

‘ನಸುಕಿನ 3ರ ಸುಮಾರಿಗೆ ಪೂಜಾ, ಆರೋಪಿಯ ಕಾರಿನಲ್ಲೇ ನಿಲ್ದಾಣಕ್ಕೆ ಹೊರಟಿದ್ದರು. ಅವರ ಮೂರ್ನಾಲ್ಕು ಲಗೇಜುಗಳನ್ನು ಆರೋಪಿ ಡಿಕ್ಕಿಯಲ್ಲಿ ಇಟ್ಟಿದ್ದ. ಲಗೇಜಿನಲ್ಲಿ ಹಣವಿರಬಹುದು ಎಂದು ಭಾವಿಸಿ, ಮಹಿಳೆಯನ್ನು ಕೊಲೆ ಮಾಡಿದ್ದಾನೆ’ ಎಂದರು.

ಕಾರಿನ ಜೊತೆ ಆರೋಪಿ ನಾಗೇಶ್

ರಾಡಿನಿಂದ ತಲೆಗೆ ಹೊಡೆದಿದ್ದ: ‘ಮಾರ್ಗಮಧ್ಯೆ ಕಾರು ನಿಲ್ಲಿಸಿದ್ದ ಆರೋಪಿ, ‘ನಿನ್ನ ಬಳಿ ಇರುವ ಹಣ, ಮೊಬೈಲ್ ಹಾಗೂ ಚಿನ್ನಾಭರಣವನ್ನು ಕೊಡು’ ಎಂದು ರಾಡ್‌ ತೋರಿಸಿ ಕೊಲೆ ಬೆದರಿಕೆ ಹಾಕಿದ್ದ. ಸಹಾಯಕ್ಕಾಗಿ ಮಹಿಳೆ ಕೂಗಿಕೊಂಡಾಗ ತಲೆಗೆ ರಾಡ್‌ನಿಂದ ಹೊಡೆದಿದ್ದ’ ಎಂದು ಹೇಳಿದರು.

‘ಕೆಳಗೆ ಬಿದ್ದ ಮಹಿಳೆ, ರಕ್ಷಣೆಗೆ ಕೂಗಿದರು. ಕೂಡಲೇ ಆರೋಪಿ, ಆಕೆಯ ತಲೆಗೆ ಪುನಃ ಹೊಡೆದಿದ್ದ. ಚಾಕುವಿನಿಂದ ಕತ್ತು ಕೊಯ್ದು, ದೇಹದ 15 ಕಡೆ ಇರಿದಿದ್ದ. ತಲೆಯ ಮೇಲೆ ಸಿಮೆಂಟ್ ಇಟ್ಟಿಗೆಯನ್ನೂ ಎತ್ತಿ ಹಾಕಿದ್ದ. ತೀವ್ರ ರಕ್ತಸ್ರಾವದಿಂದ ಪೂಜಾ ಸ್ಥಳದಲ್ಲೇ ಮೃತಪಟ್ಟರು. ಶವವನ್ನು ಕಾಂಪೌಂಡ್ ಬಳಿ ಎಸೆದು, ಆರೋಪಿ ಪರಾರಿಯಾಗಿದ್ದ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಟ್ಯಾಟೂ’ ನೋಡಿ ಶವ ಗುರುತಿಸಿದ ಪತಿ

‘ಕೊಲೆಯಾದ ಮಹಿಳೆ ಯಾರು ಎಂಬುದು ಆರಂಭದಲ್ಲಿ ಗೊತ್ತಾಗಿರಲಿಲ್ಲ. ಪ್ರಕರಣ ಪತ್ತೆ ಮಾಡಲು ಎರಡು ವಿಶೇಷ ತಂಡಗಳನ್ನು ರಚಿಸಿ, ಕೆಲಸವನ್ನು ಹಂಚಿಕೆ ಮಾಡಲಾಗಿತ್ತು’ ಎಂದು ಭೀಮಾಶಂಕರ್ ಗುಳೇದ್ ಹೇಳಿದರು.

‘ಮಹಿಳೆಯು ‘ಜಿಯೋಲಸ್ 21’ ಬ್ರ್ಯಾಂಡ್‌ನ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದರು. ಅವರ ಕೈಯಲ್ಲಿ ಟೈಟಾನ್ ಕಂಪನಿ ವಾಚ್ ಸಹ ಇತ್ತು. ಅವುಗಳ ಮೇಲಿನ ಬಾರ್ ಕೋಡ್ ಆಧರಿಸಿ ತನಿಖೆ ನಡೆಸಿದ್ದ ವಿಶೇಷ ತಂಡ, ಶಾಪಿಂಗ್ ಮಾಲ್, ಆನ್‌ಲೈನ್ ಶಾಪಿಂಗ್ ಜಾಲತಾಣಗಳಾದ ಮಿಂತ್ರ, ಅಮೇಜಾನ್, ಫ್ಲಿಪ್‌ಕಾರ್ಟ್‌ ಹಾಗೂ ಕೂವ್ಸ್‌ನಲ್ಲಿ ವಿಚಾರಿಸಿದರೂ ಗುರುತು ಪತ್ತೆಯಾಗಿರಲಿಲ್ಲ.’

‘ಮಹಿಳೆಯ ಮುಖ ಚಹರೆ ಹಾಗೂ ಅವರ ಬಳಿಯ ಉಂಗುರ ಗಮನಿಸಿದ್ದ ಇನ್ನೊಂದು ತಂಡ, ಉತ್ತರ ಭಾರತ ಅಥವಾ ಪಶ್ಚಿಮ ಬಂಗಾಳದವರಿರಬಹುದು ಎಂದು ಅಂದಾಜಿಸಿತ್ತು. ದೆಹಲಿಗೆ ಹಾಗೂ ಕೊಲ್ಕತ್ತಾಕ್ಕೆ ಹೋಗಿದ್ದ ಈ ತಂಡದ ಅಧಿಕಾರಿಗಳು, ಅಲ್ಲಿನ ಠಾಣೆಗಳಲ್ಲಿ ನಾಪತ್ತೆಯಾದವರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು.’

‘ಕೊಲ್ಕತ್ತಾ ನ್ಯೂ ಟೌನ್ ಠಾಣೆಯಲ್ಲಿ ರೂಪದರ್ಶಿ ಪೂಜಾ ಸಿಂಗ್ ಕಾಣೆಯಾದ ಬಗ್ಗೆ ದೂರು ದಾಖಲಾಗಿತ್ತು. ಆ ಫೋಟೊ ಗಮನಿಸಿದಾಗ, ಪೂಜಾ ಅವರೇ ಕೊಲೆಯಾದವರು ಎಂಬುದು ಗೊತ್ತಾಗಿತ್ತು. ಅವರ ಪತಿ ಸೌದೀಪ್ ಡೇ ಅವರನ್ನು ಬೆಂಗಳೂರಿಗೆ ಕರೆಸಿಕೊಂಡು ಶವ ತೋರಿಸಲಾಯಿತು’ ಎಂದು ಗುಳೇದ್ ವಿವರಿಸಿದರು.

‘ಪೂಜಾ ಅವರು ಕುತ್ತಿಗೆ ಭಾಗದಲ್ಲಿ ಪತಿಯ ಹೆಸರಿನ ಆರಂಭದ ‘S’ ಅಕ್ಷರದ ಟ್ಯಾಟೂ ಹಾಕಿಸಿಕೊಂಡಿದ್ದರು. ಅದನ್ನು ನೋಡಿದ ಸೌದೀಪ್, ಶವ ಗುರುತಿಸಿದರು. ಪೂಜಾ ಧರಿಸಿದ್ದ ವಾಚ್, ಉಂಗುರ, ಬಟ್ಟೆಗಳೂ ಅವರದ್ದೇ ಎಂದು ಹೇಳಿದರು’ ಎಂದು ಅವರು ಮಾಹಿತಿ ನೀಡಿದರು.

‘ಇ–ಮೇಲ್’ ನೀಡಿದ ಸುಳಿವು

‘ಮಹಿಳೆ ಹೆಸರು, ವಿಳಾಸ ತಿಳಿಯುತ್ತಿದ್ದಂತೆ ಆರೋಪಿಯ ಪತ್ತೆಗೆ ವಿಶೇಷ ತಂಡ ಮುಂದಾಯಿತು. ಪೂಜಾ ಅವರ ಇ– ಮೇಲ್ ಪರಿಶೀಲಿಸಿದಾಗ, ಜುಲೈ 30ರಂದು ಓಲಾ ಕ್ಯಾಬ್ ಕಾಯ್ದಿರಿಸಿದ್ದ ಬಗ್ಗೆ ಬಂದಿದ್ದ ಸಂದೇಶ ಸಿಕ್ಕಿತು’ ಎಂದು ಪೊಲೀಸರು ಹೇಳಿದರು.

‘ಓಲಾ ಕಂಪನಿಯವರನ್ನು ವಿಚಾರಿಸಿದಾಗ, ಚಾಲಕ ನಾಗೇಶ್‌ ಕಾರಿನಲ್ಲೇ ಮಹಿಳೆ ಸುತ್ತಾಡಿದ್ದು ಗೊತ್ತಾಯಿತು. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.