ADVERTISEMENT

ಹತ್ಯೆಗೆ ಸುಪಾರಿ ಕೊಟ್ಟ ಪತ್ನಿ, ಮಗ

ವ್ಯಾಪಾರಿಯನ್ನು ಹತ್ಯೆ ಮಾಡಿ ಅಪಘಾತವೆಂದು ಬಿಂಬಿಸಿದ್ದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2021, 22:24 IST
Last Updated 18 ಮಾರ್ಚ್ 2021, 22:24 IST
ಬಂಧಿತ ಆರೋಪಿ ಹಾಗೂ ಜಪ್ತಿ ಮಾಡಲಾದ ಸ್ಕಾರ್ಪಿಯೊ ಕಾರಿನ ಜೊತೆ ಪೊಲೀಸರು
ಬಂಧಿತ ಆರೋಪಿ ಹಾಗೂ ಜಪ್ತಿ ಮಾಡಲಾದ ಸ್ಕಾರ್ಪಿಯೊ ಕಾರಿನ ಜೊತೆ ಪೊಲೀಸರು   

ಬೆಂಗಳೂರು: ವ್ಯಾಪಾರಿ ಸುಬ್ಬರಾಯಪ್ಪ (58) ಎಂಬುವವರನ್ನು ಹತ್ಯೆ ಮಾಡಿ ಅಪಘಾತವೆಂದು ಬಿಂಬಿಸಿದ್ದ ಪ್ರಕರಣವನ್ನು ಭೇದಿಸಿರುವ ವೈಟ್‌ಫೀಲ್ಡ್ ಸಂಚಾರ ಪೊಲೀಸರು, ಈ ಹತ್ಯೆಗೆ ಪತ್ನಿ ಹಾಗೂ ಮಗನೇ ₹ 6 ಲಕ್ಷ ಸುಪಾರಿ ನೀಡಿದ್ದ ಸಂಗತಿಯನ್ನೂ ಪತ್ತೆ ಹಚ್ಚಿದ್ದಾರೆ.

‘ಅಪಘಾತವೆಂದು ಬಿಂಬಿಸುವ ರೀತಿಯಲ್ಲಿ ಗುಂಜೂರು ನಿವಾಸಿ ಸುಬ್ಬರಾಯಪ್ಪ ಅವರನ್ನು ಕೊಲೆ ಮಾಡಿದ್ದ ಆರೋಪದಡಿ ಅನಿಲ್‌ಕುಮಾರ್ ಎಂಬಾತನನ್ನು ಬಂಧಿಸಲಾಗಿದ್ದು, ಆತ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ. ನ್ಯಾಯಾಲಯದ ನಿರ್ದೇಶನದಂತೆ ಪ್ರಕರಣವನ್ನು ವರ್ತೂರು ಠಾಣೆಗೆ ವರ್ಗಾಯಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಇದೇ ಜ. 21ರಂದು ಠಾಣೆಗೆ ಬಂದಿದ್ದ ಗುಂಜೂರು ನಿವಾಸಿ ಜಿ.ಎಸ್. ದೇವರಾಜ್, ತಮ್ಮ ತಂದೆ ಸುಬ್ಬರಾಯಪ್ಪ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವುದಾಗಿ ದೂರು ನೀಡಿದ್ದರು. ಅಪಘಾತ ಸ್ಥಳಕ್ಕೆ ಹೋಗಿ ಪರಿಶೀಲಿಸಲಾಗಿತ್ತು. ಸುಬ್ಬರಾಯಪ್ಪ ಅವರ ದ್ವಿಚಕ್ರ ವಾಹನಕ್ಕೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿರುವುದು ಹಾಗೂ ತೀವ್ರಗಾಯಗೊಂಡು ಸುಬ್ಬರಾಯಪ್ಪ ಮೃತಪಟ್ಟಿರುವುದು ಮೇಲ್ನೋಟಕ್ಕೆ ಗೊತ್ತಾಗಿತ್ತು’ ಎಂದೂ ತಿಳಿಸಿದರು.

ADVERTISEMENT

ಮೊಬೈಲ್ ಕರೆ ನೀಡಿದ ಸುಳಿವು: ‘ಅಪಘಾತಕ್ಕೂ ಮುನ್ನ ಸುಬ್ಬರಾಯಪ್ಪ ಅವರಿಗೆ ಆರೋಪಿ ಅನಿಲ್‌ಕುಮಾರ್ ಕರೆ ಮಾಡಿದ್ದ. ವ್ಯಾಪಾರ ಸಂಬಂಧ ಮಾತುಕತೆ ನಡೆಸಿದ್ದ. ಅದೇ ಸುಳಿವು ಮೇರೆಗೆ ಅನಿಲ್‌ಕುಮಾರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಬಾಯ್ಬಿಟ್ಟ’ ಎಂದೂ ಪೊಲೀಸರು ಹೇಳಿದರು.

‘ಸುಬ್ಬರಾಯಪ್ಪ ಅವರ ಪತ್ನಿ ಯಶೋಧಮ್ಮ ಹಾಗೂ ಮಗ ಧನರಾಜ್ ಅವರು ಹತ್ಯೆಗೆ ₹ 6 ಲಕ್ಷ ಸುಪಾರಿ ನೀಡಿದ್ದರು. ಬಾಡಿಗೆಗೆ ಸ್ಕಾರ್ಪಿಯೊ ವಾಹನ ಪಡೆದಿದ್ದ ಅನಿಲ್‌ಕುಮಾರ್ ಹಾಗೂ ಇತರೆ ಆರೋಪಿಗಳು, ಸುಬ್ಬರಾಯಪ್ಪ ದ್ವಿಚಕ್ರ ವಾಹನಕ್ಕೆ ಗುದ್ದಿಸಿ ಕೊಲೆ ಮಾಡಿ ಪರಾರಿಯಾಗಿದ್ದರು. ಮಾತಿನಂತೆ ಪತ್ನಿ ಹಾಗೂ ಮಗ, ಅನಿಲ್‌ಕುಮಾರ್‌ಗೆ ₹ 4.40 ಲಕ್ಷ ನೀಡಿದ್ದರು. ಅಪಘಾತದಿಂದ ಜಖಂಗೊಂಡಿದ್ದ ಕಾರನ್ನು ಮುಳಬಾಗಿಲು ತಾಲ್ಲೂಕಿನ ತಂಬಳ್ಳಿ ಬಳಿ ದುರಸ್ತಿ ಮಾಡಿಸಲಾಗಿತ್ತು. ಈ ಬಗ್ಗೆ ಆರೋಪಿ ಹೇಳಿಕೆ ನೀಡಿದ್ದ’ ಎಂದೂ ತಿಳಿಸಿದರು.

‘ಹತ್ಯೆಯಲ್ಲಿ ಸುಬ್ಬರಾಯಪ್ಪ ಅವರ ಎರಡನೇ ಮಗ ಭರತ್‌ ಸಹ ಭಾಗಿಯಾಗಿದ್ದಾನೆ. ಪ್ರಕರಣದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ವರ್ತೂರು ಪೊಲೀಸರಿಗೆ ನೀಡಲಾಗಿದೆ. ಅವರೇ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ’ ಎಂದೂ ಹೇಳಿದರು.

ಆಸ್ತಿಗಾಗಿ ಹತ್ಯೆಗೆ ಸಂಚು

‘ಸುಬ್ಬರಾಯಪ್ಪ ಅವರ ಹೆಸರಿನಲ್ಲಿ ವರ್ತೂರು ಬಳಿ ಒಂದು ಎಕರೆ ಜಮೀನು ಇದೆ. ಆಸ್ತಿಯನ್ನು ಮಕ್ಕಳಿಗೆ ಹಂಚಿಕೆ ಮಾಡಿರಲಿಲ್ಲ. ಈ ವಿಚಾರವಾಗಿ ಮನೆಯಲ್ಲಿ ಜಗಳವಾಗುತ್ತಿತ್ತು. ಸುಬ್ಬರಾಯಪ್ಪ ಅವರಿಗೆ ಗೊತ್ತಾಗದಂತೆ ಪತ್ನಿ ಯಶೋಧಮ್ಮ ಹಾಗೂ ಮಕ್ಕಳಾದ ಭರತ್, ದೇವರಾಜ್ ಗಿಫ್ಟ್ ಡೀಡ್ ಮಾಡಿಕೊಂಡಿದ್ದರು. ಅದು ಗೊತ್ತಾಗುತ್ತಿದ್ದಂತೆ ಸುಬ್ಬರಾಯಪ್ಪ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಅದರಿಂದ ಸಿಟ್ಟಾದ ಪತ್ನಿ ಹಾಗೂ ಮಕ್ಕಳು, ಹತ್ಯೆಗೆ ಸಂಚು ರೂಪಿಸಿದರು’ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.