ADVERTISEMENT

ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೊಲೆ ಅಪರಾಧಿಗೆ ಹೈಕೋರ್ಟ್‌ ಜಾಮೀನು

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 15:54 IST
Last Updated 21 ನವೆಂಬರ್ 2025, 15:54 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ನಗರದ ಮೈಕೊ ಲೇಔಟ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿಯ ಶಿಕ್ಷೆಯನ್ನು ಅಮಾನತಿನಲ್ಲಿ ಇರಿಸಿರುವ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

‘ನಗರದ 58ನೇ ಸೆಷನ್ಸ್‌ ನ್ಯಾಯಾಲಯ ನನಗೆ ವಿಧಿಸಿರುವ ಶಿಕ್ಷೆಗೆ ತಡೆ ನೀಡಬೇಕು ಮತ್ತು ಜಾಮೀನು ನೀಡಬೇಕು’ ಎಂದು ಕೋರಿ ಅಪರಾಧಿ ಗಿರೀಶ್‌ (28) ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿಯನ್ನು ನ್ಯಾಯಮೂರ್ತಿ ಕೆ.ಎಸ್.ಮುದಗಲ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹೈಕೋರ್ಟ್‌ನ ಹಿರಿಯ ವಕೀಲ ಸಿ.ಎಚ್.ಹನುಮಂತರಾಯ ಅವರು, ‘ಕೃತ್ಯವನ್ನು ಮೂವರು ಅಪರಿಚಿತರು ಬೈಕಿನಲ್ಲಿ ಬಂದು ಎಸಗಿದ್ದರು ಎಂದು ಉಲ್ಲೇಖಿಸಲಾಗಿದೆ. ಆದರೆ, ವೈದ್ಯರು ನುಡಿದ ಸಾಕ್ಷಿಯಲ್ಲಾಗಲೀ ಅಥವಾ ಇತರೆ ಸಾಕ್ಷ್ಯಗಳಲ್ಲಾಗಲೀ ನಿರ್ದಿಷ್ಟವಾಗಿ ಅರ್ಜಿದಾರರ ಹೆಸರಿಲ್ಲ’ ಎಂಬ ಅಂಶಗಳ ಮೇಲಿನ ಸವಿವರ ವಾದಾಂಶವನ್ನು ಮಾನ್ಯ ಮಾಡಿದ ನ್ಯಾಯಪೀಠ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿತು.

ADVERTISEMENT

ಪ್ರಕರಣವೇನು?: ‘2018ರ ಜೂನ್‌26ರ ಮಧ್ಯ ರಾತ್ರಿ 3 ಗಂಟೆ ಸಮಯದಲ್ಲಿ ಸಿದ್ದಾರ್ಥ ಕೌಶಲ್‌ ಮತ್ತು ಸ್ನೇಹಿತರು ತಮ್ಮ ರೆಸ್ಟೋರೆಂಟ್‌ನಿಂದ ಕೆಲಸ ಮುಗಿಸಿಕೊಂಡು ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಹೋಗುತ್ತಿದ್ದರು. ಮಾರ್ಗಮಧ್ಯೆ ಬಿಟಿಎಂ ಲೇಔಟ್‌ 2ನೇ ಹಂತದಲ್ಲಿರುವ 16ನೇ ಮುಖ್ಯ ರಸ್ತೆಯ 1ನೇ ಕ್ರಾಸ್‌ ಬಳಿ ಮೂತ್ರ ವಿಸರ್ಜನೆಗೆಂದು ಕಾರಿನಿಂದ ಇಳಿದಿದ್ದರು. ಈ ವೇಳೆ ಬೈಕ್‌ನಲ್ಲಿ ಬರುತ್ತಿದ್ದ ಮೂವರು ಯುವಕರು ಸಿದ್ದಾರ್ಥ ಕೌಶಲ್‌ ತೋಳಿಗೆ ತಾಗಿಸಿಕೊಂಡು ಹೋಗಿದ್ದರು. ಇದಕ್ಕೆ ಪ್ರತಿಯಾಗಿ ಸಿದ್ದಾರ್ಥ ಬೈಕ್‌ ಸವಾರರಿಗೆ ಸರಿಯಾಗಿ ಓಡಿಸಿಕೊಂಡು ಹೋಗಿ ಎಂದು ಕೂಗಿ ಬುದ್ಧಿ ಹೇಳಿದ್ದರು. ಇದರಿಂದ ಸಿಟ್ಟಿಗೆದ್ದ ಯುವಕರು ಮರದ ದೊಣ್ಣೆಯಿಂದ ಕೌಶಲ್‌ ತಲೆಗೆ ಹೊಡೆದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ನಂತರ ಮೃತಪಟ್ಟಿದ್ದರು’ ಎಂದು ದೋಷಾರೋಪ ಪಟ್ಟಿಯಲ್ಲಿ ವಿವರಿಸಲಾಗಿತ್ತು.

ವಿಚಾರಣೆ ನಡೆಸಿದ್ದ ನ್ಯಾಯಾಲಯದ 58ನೇ ನ್ಯಾಯಾಲಯದ ನ್ಯಾಯಾಧೀಶ ಬಾಲಚಂದ್ರ ಎನ್‌.ಭಟ್‌ ಅವರು, ಅರ್ಜಿದಾರರಿಗೆ ಭಾರತೀಯ ದಂಡ ಸಂಹಿತೆ–1860ರ ಕಲಂ 302 ಮತ್ತು 34ರ ಅನುಸಾರ ಕೊಲೆ ಆರೋಪಕ್ಕೆ ಜೀವಿತಾವಧಿ ಶಿಕ್ಷೆ ಮತ್ತು ₹10 ಸಾವಿರ ದಂಡ ವಿಧಿಸಿ 2025ರ ಅಕ್ಟೋಬರ್ 24ರಂದು ತೀರ್ಪು ನೀಡಿದ್ದರು. ಅರ್ಜಿದಾರ ಏಳೂವರೆ ವರ್ಷಗಳಿಂದ ನ್ಯಾಯಾಂಗ ಬಂಧನದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.