ADVERTISEMENT

ಬಾಡಿಗೆ ವಿಚಾರ; ನಿವೃತ್ತ ಉಪ ತಹಸೀಲ್ದಾರ್ ಹತ್ಯೆ

*ಮೃತದೇಹ ಸಾಗಿಸಿ ಸುಟ್ಟಿದ್ದ ಆರೋಪಿಗಳು * ಮಹಿಳೆ ಸೇರಿ ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2021, 18:31 IST
Last Updated 5 ಫೆಬ್ರುವರಿ 2021, 18:31 IST
ರಾಜೇಶ್ವರಿ
ರಾಜೇಶ್ವರಿ   

ಬೆಂಗಳೂರು: ಬಾಡಿಗೆ ವಿಚಾರವಾಗಿ ನಿವೃತ್ತ ಉಪ ತಹಸೀಲ್ದಾರ್ ರಾಜೇಶ್ವರಿ (61) ಎಂಬುವರನ್ನು ಹತ್ಯೆ ಮಾಡಲಾಗಿದ್ದು, ಈ ಸಂಬಂಧ ಮಹಿಳೆ ಸೇರಿ ಮೂವರನ್ನು ವಿ.ವಿ.ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಕೋರಮಂಗಲ ನಿವಾಸಿಯಾಗಿದ್ದ ರಾಜೇಶ್ವರಿ ಅವರನ್ನು ಫೆ. 3ರಂದು ಕೊಲೆ ಮಾಡಲಾಗಿತ್ತು. ಆರೋಪಿಗಳಾದ ಪಾರ್ವತಿಪುರದ ಅಶ್ರಫ್ ಉನ್ನಿಸಾ, ಜೇರನ್ ಪಾಷಾ ಹಾಗೂ ಅಲಂಪಾಷಾ ಎಂಬುವರನ್ನು ಬಂಧಿಸಲಾಗಿದೆ. ಮೂವರನ್ನು ಕಸ್ಟಡಿಗೆ ‍ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಹೇಳಿದರು.

ಬಾಡಿಗೆಗಿದ್ದ ಆರೋಪಿಗಳು: ‘ವರ್ಷದ ಹಿಂದಷ್ಟೇ ನಿವೃತ್ತರಾಗಿದ್ದ ರಾಜೇಶ್ವರಿ, ಕುಟುಂಬದವರ ಜೊತೆ ಕೋರಮಂಗಲದಲ್ಲಿ ನೆಲೆಸಿದ್ದರು. ಜೊತೆಗೆ, ಅವರಿಗೆ ಪಾರ್ವತಿಪುರದಲ್ಲೂ ಮೂರು ಅಂತಸ್ತಿನ ಕಟ್ಟಡ ಇತ್ತು. ಅದೇ ಕಟ್ಟಡದ ಮೂರನೇ ಮಹಡಿಯಲ್ಲಿ ಆರೋಪಿಗಳ ಕುಟುಂಬ ಬಾಡಿಗೆಗೆ ಇತ್ತು’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಆರೋಪಿಗಳು 9 ತಿಂಗಳಿಂದ ಮನೆ ಬಾಡಿಗೆ ಕೊಟ್ಟಿರಲಿಲ್ಲ. ಅಸಮಾಧಾನಗೊಂಡಿದ್ದ ರಾಜೇಶ್ವರಿ, ‘ಮನೆ ಬಾಡಿಗೆ ನೀಡಿ’ ಎಂದು ಹಲವು ಬಾರಿ ಒತ್ತಾಯಿಸಿದ್ದರು. ಅಷ್ಟಾದರೂ ಆರೋಪಿಗಳು ಬಾಡಿಗೆ ಪಾವತಿ ಮಾಡಿರಲಿಲ್ಲ.’

‘ಫೆ. 3ರಂದು ಮಧ್ಯಾಹ್ನ ಪಾರ್ವತಿಪುರದಲ್ಲಿರುವ ಮನೆ ಬಳಿ ಹೋಗಿದ್ದ ರಾಜೇಶ್ವರಿ, ಬಾಡಿಗೆ ನೀಡುವಂತೆ ಆರೋಪಿಗಳನ್ನು ಒತ್ತಾಯಿಸಿದ್ದರು. ಅದೇ ವೇಳೆ ರಾಜೇಶ್ವರಿ ಜೊತೆ ಜಗಳ ತೆಗೆದಿದ್ದ ಅಲಂಪಾಷಾ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದ. ರಾಜೇಶ್ವರಿ ಅವರನ್ನು ಮನೆಯೊಳಗೆ ಎಳೆದುಕೊಂಡು ಹೋಗಿ ಚಾಕುವಿನಿಂದ ಕತ್ತು ಕೊಯ್ದು ಹತ್ಯೆ ಮಾಡಿದ್ದ’ ಎಂದೂ ಪೊಲೀಸರು ಹೇಳಿದರು.

ಗೋಣಿ ಚೀಲದಲ್ಲಿ ಮೃತದೇಹ ಸಾಗಿಸಿ ಸುಟ್ಟರು: ‘ಹತ್ಯೆ ಸಂಗತಿಯನ್ನು ಸಂಬಂಧಿಕರಿಗೆ ತಿಳಿಸಿ ಸ್ಥಳಕ್ಕೆ ಕರೆಸಿಕೊಂಡಿದ್ದ ಆರೋಪಿ ಅಲಂಪಾಷಾ, ಮೃತದೇಹ ಸಾಗಿಸಲು ಮುಂದಾಗಿದ್ದ. ಗೋಣಿ ಚೀಲದಲ್ಲಿ ಮೃತದೇಹ ತುಂಬಿಕೊಂಡು ಆಟೊದಲ್ಲಿ ಬಿಡದಿ ಬಳಿ ತೆಗೆದುಕೊಂಡು ಹೋಗಿದ್ದ. ಅಲ್ಲಿ ನಿರ್ಜನ ಪ್ರದೇಶದಲ್ಲಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಮೃತದೇಹ ಸುಟ್ಟು ಹಾಕಿದ್ದ’ ಎಂದೂ ಪೊಲೀಸರು ವಿವರಿಸಿದರು.

‘ಬಾಡಿಗೆ ಕೇಳಲು ಹೋದ ತಾಯಿ ವಾಪಸು ಬರದಿದ್ದರಿಂದ ಗಾಬರಿಗೊಂಡ ಮಕ್ಕಳು, ಹಲವೆಡೆ ಹುಡುಕಾಟ ನಡೆಸಿದ್ದರು. ಯಾವುದೇ ಸುಳಿವು ಸಿಕ್ಕಿರಲಿಲ್ಲ. ನಂತರ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡಾಗ, ಬಾಡಿಗೆದಾರರ ಮೇಲೆಯೇ ಬಲವಾದ ಅನುಮಾನ ಬಂದಿತ್ತು. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡರು’ ಎಂದೂ ಪೊಲೀಸರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.