ADVERTISEMENT

ಸಹೋದರನ ಕುಟುಂಬ ಜಗಳ: ಸಂಧಾನಕ್ಕೆ ಕರೆದು ಕೊಲೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2022, 18:45 IST
Last Updated 29 ನವೆಂಬರ್ 2022, 18:45 IST
   

ಬೆಂಗಳೂರು: ಜಗಜೀವನ್‌ರಾಮ್ ನಗರ ಠಾಣೆ ವ್ಯಾಪ್ತಿಯಲ್ಲಿ ಇಮಾಯೂನ್ ಎಂಬುವರನ್ನು ಕೊಲೆ ಮಾಡಲಾಗಿದ್ದು, ಕೃತ್ಯ ಎಸಗಿದ್ದ ಆರೋಪದಡಿ ಸಂಬಂಧಿ ಸೈಯದ್ ಫೈಸಲ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಸ್ಥಳೀಯ ನಿವಾಸಿ ಇಮಾಯೂನ್ ಅವರನ್ನು ಸಂಧಾನಕ್ಕೆ ಕರೆದು ಕೊಲೆ ಮಾಡಿರುವ ಬಗ್ಗೆ ಪತ್ನಿ ಸಾಹಿರಾ ಬಾನು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಸಾಹಿರಾ ಹಾಗೂ ಇಮಾಯೂನ್, 14 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಜಗಜೀವನ್‌ರಾಮ್ ನಗರದಲ್ಲಿ ವಾಸವಿದ್ದರು. ಇಮಾಯೂನ್ ಅವರ ಸಹೋದರ ಜಾವೀದ್‌ ಕುಟುಂಬವೂ ಸಮೀಪದಲ್ಲೇ ವಾಸವಿತ್ತು. ಜಾವೀದ್ ಹಾಗೂ ಅವರ ಪತ್ನಿ ಮುಸ್ಕಾನ್ ನಡುವೆ ಜಗಳ ಶುರುವಾಗಿತ್ತು. ಮುಸ್ಕಾನ್ ಗಂಡನ ಮನೆ ಬಿಟ್ಟು, ತವರು ಮನೆಗೆ ಹೋಗಿದ್ದರು.’

ADVERTISEMENT

‘ಸಹೋದರನ ಕುಟುಂಬದ ಜಗಳ ಸರಿಪಡಿಸಲು ಹಿರಿಯರ ಸಮ್ಮುಖದಲ್ಲಿ ಸಂಧಾನ ಏರ್ಪಡಿಸಲಾಗಿತ್ತು. ಸಂಧಾನಕ್ಕೆ ಹೋಗಿದ್ದ ಇಮಾಯೂನ್ ಮೇಲೆ ಹಲ್ಲೆ ಮಾಡಿದ್ದ ಆರೋಪಿ ಫೈಸಲ್, ಎದೆಗೆ ಗುದ್ದಿದ್ದ. ಸ್ಥಳದಲ್ಲೇ ಕುಸಿದು ಬಿದ್ದಿದ್ದ ಇಮಾಯೂನ್‌, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಸಂಧಾನದ ವೇಳೆ ಜಾವೀದ್ ಮೇಲೆಯೂ ಹಲ್ಲೆ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.