ADVERTISEMENT

ಮೊದಲ ಪತ್ನಿ ಜೊತೆ ಜೀವನ ನಡೆಸಲು 2ನೇ ಪತ್ನಿ ಹತ್ಯೆ: ಮರಣೋತ್ತರ ಪರೀಕ್ಷೆಯಿಂದ ಸುಳಿವು

ಕತ್ತು ಹಿಸುಕಿ ಕೊಂದು ಕಥೆ ಕಟ್ಟಿದ್ದ ಪತಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2023, 22:46 IST
Last Updated 3 ಜೂನ್ 2023, 22:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಯಶವಂತಪುರ ಠಾಣೆ ವ್ಯಾಪ್ತಿಯಲ್ಲಿ ಪ್ರಿಯಾ (19) ಎಂಬುವವರನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದ್ದು, ಕೃತ್ಯ ಎಸಗಿದ್ದ ಆರೋಪದಡಿ ಪತಿ ಶರತ್‌ಕುಮಾರ್‌ನನ್ನು (29) ಪೊಲೀಸರು ಬಂಧಿಸಿದ್ದಾರೆ.

‘ಸ್ಥಳೀಯ ಮೋಹನ್‌ ನಗರದಲ್ಲಿ ವಾಸವಿದ್ದ ಪ್ರಿಯಾ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಸಹಜ ಸಾವೆಂದು ಪತಿ ಶರತ್‌ಕುಮಾರ್ ಕಥೆ ಕಟ್ಟಿದ್ದ. ಮೃತದೇಹದ ಮರಣೋತ್ತರ ಪರೀಕ್ಷೆ ವರದಿಯಿಂದ ಕೊಲೆ ಸುಳಿವು ಸಿಗುತ್ತಿದ್ದಂತೆ ಶರತ್‌ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ತಪ್ಪೊಪ್ಪಿಕೊಂಡ. ಸದ್ಯ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ’ ಎಂದು ಪೊಲೀಸರು ಹೇಳಿದರು.

‘ಪ್ರಿಯಾ ಸಾವಿನ ಸಂಬಂಧ ದೂರು ನೀಡಿದ್ದ ತಾಯಿ ಉಷಾ, ಶರತ್‌ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಆದರೆ, ಆರಂಭದಲ್ಲಿ ಪುರಾವೆಗಳು ಸಿಕ್ಕಿರಲಿಲ್ಲ. ತನಿಖೆ ಕೈಗೊಂಡಾಗ, ಹಲವು ಪುರಾವೆಗಳು ಪತ್ತೆಯಾದವು’ ಎಂದು ತಿಳಿಸಿದರು.

ADVERTISEMENT

ಪ್ರೀತಿಸಿ ಮದುವೆ: ‘ಸಂಜಯ್‌ಗಾಂಧಿ ನಗರದ ಪ್ರಿಯಾ, ಆರ್‌.ಎಂ.ಸಿ. ಯಾರ್ಡ್ ಬಳಿಯ ಶಾಪಿಂಗ್ ಮಾಲ್‌ವೊಂದರಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಅದೇ ಸ್ಥಳದಲ್ಲಿ ಶರತ್‌ ಕೆಲಸ ಮಾಡುತ್ತಿದ್ದ. ಇಬ್ಬರಿಗೂ ಪರಸ್ಪರ ಪರಿಚಯವಾಗಿ ಪ್ರೀತಿಸಲಾರಂಭಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ಪ್ರಿಯಾ ಮನೆಯವರಿಗೆ ಪ್ರೀತಿಯ ವಿಷಯ ಗೊತ್ತಾಗಿತ್ತು. ಪ್ರಿಯಾ ಅವರನ್ನು ಶರತ್‌ ಜೊತೆ ಮದುವೆ ಮಾಡಿಕೊಟ್ಟಿದ್ದರು. ನಂತರ, ಮೋಹನ್‌ ನಗರದಲ್ಲಿ ದಂಪತಿ ವಾಸವಿದ್ದರು. ಒಟ್ಟಿಗೆ ಕೆಲಸಕ್ಕೆ ಹೋಗಿ ಬರುತ್ತಿದ್ದರು’ ಎಂದರು.

ಮೊದಲ ಮದುವೆ ವಿಷಯ ಮುಚ್ಚಿಟ್ಟಿದ್ದ: ‘ಮೊದಲ ಮದುವೆಯಾಗಿದ್ದ ಶರತ್‌ಗೆ ಪತ್ನಿ ಹಾಗೂ ಮೂವರು ಮಕ್ಕಳಿದ್ದಾರೆ. ಮದುವೆಗೂ ಮುನ್ನ ಪ್ರಿಯಾಗೆ ವಿಷಯ ಗೊತ್ತಾಗಿರಲಿಲ್ಲ. ಇತ್ತೀಚೆಗಷ್ಟೇ ಪತಿಯ ಮೊದಲ ಮದುವೆ ವಿಷಯ ತಿಳಿದಿತ್ತು’. 

‘ಶರತ್, ಮೊದಲ ಪತ್ನಿ ಹಾಗೂ ಮಕ್ಕಳನ್ನು ಬೆಂಗಳೂರಿನ ಬಿ.ಕೆ.ನಗರದ ಬಾಡಿಗೆ ಮನೆಯಲ್ಲಿ ಇರಿಸಿದ್ದ. ಆಗಾಗ, ಅವರ ಬಳಿ ಹೋಗಿ ಬರುತ್ತಿದ್ದ. ಇದಕ್ಕೆ ಪ್ರಿಯಾ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ಹೀಗಾಗಿ, ದಂಪತಿ ನಡುವೆ ನಿತ್ಯವೂ ಜಗಳ ಶುರುವಾಗಿತ್ತು’ ಎಂದರು.

ಮೊದಲ ಪತ್ನಿ, ಮಕ್ಕಳಿಗಾಗಿ ಕೊಲೆ: ‘ಪ್ರಿಯಾ ನಿತ್ಯವೂ ಜಗಳ ಮಾಡುತ್ತಿದ್ದರಿಂದ ಶರತ್ ಸಿಟ್ಟಾಗಿದ್ದ. ಪ್ರಿಯಾಳನ್ನು ಕೊಲೆ ಮಾಡಿದರೆ, ಮೊದಲ ಪತ್ನಿ ಹಾಗೂ ಮಕ್ಕಳ ಜೊತೆ ಜೀವನ ನಡೆಸಬಹುದೆಂದು ತಿಳಿದು ಕೃತ್ಯಕ್ಕೆ ಸಂಚು ರೂಪಿಸಿದ್ದ’ ಎಂದು ಪೊಲೀಸರು ಹೇಳಿದರು.

‘ಜೂನ್ 1ರಂದು ಪ್ರಿಯಾ ಜೊತೆ ಜಗಳ ತೆಗೆದಿದ್ದ ಶರತ್, ಹಲ್ಲೆ ಮಾಡಿದ್ದ. ನಂತರ, ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದ. ಹಾಸಿಗೆ ಮೇಲೆ ಮೃತದೇಹವಿಟ್ಟು ಮನೆಯಿಂದ ಹೊರಟು ಹೋಗಿದ್ದ. ಕೆಲ ಹೊತ್ತಿನ ನಂತರ, ಮೊದಲ ಪತ್ನಿ ಸಮೇತ ಮನೆಗೆ ವಾಪಸು ಬಂದಿದ್ದ. ‘ಸುಸ್ತಾಗಿ ಮಲಗಿದ್ದ ನನ್ನ ಪತ್ನಿ ಉಸಿರಾಡುತ್ತಿಲ್ಲ’ ಎಂದು ಹೇಳಿ ಸ್ಥಳೀಯರನ್ನು ಸೇರಿಸಿದ್ದ.’

‘ವಿಷಯ ತಿಳಿದು ಪ್ರಿಯಾ ಪೋಷಕರು, ಮನೆಗೆ ಬಂದಿದ್ದರು. ಅವರ ಬಳಿಯೂ ಗೋಳಾಡಿದ್ದ ಶರತ್, ‘ಅಡುಗೆ ಮಾಡಿದ್ದ ಪ್ರಿಯಾ ಸುಸ್ತಾಗಿರುವುದಾಗಿ ಹೇಳಿ ಮಲಗಿದ್ದಳು. ನಾನು ಮಾರುಕಟ್ಟೆಗೆ ಹೋಗಿದ್ದೆ. ವಾಪಸು ಬರುವಷ್ಟರಲ್ಲಿ ಪ್ರಿಯಾ ಉಸಿರಾಡುತ್ತಿರಲಿಲ್ಲ. ಗಾಬರಿಯಾಗಿ, ಮೊದಲ ಪತ್ನಿಯನ್ನು ಕರೆತಂದೆ’ ಎಂದು ಕಥೆ ಕಟ್ಟಿದ್ದ. ಮಾತು ನಂಬದ ಪೋಷಕರು, ಆತನ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದರು. ಮನೆಯಲ್ಲಿಯೇ ಪ್ರಿಯಾ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು. ‘ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ’ ಎಂಬುದು ಮರಣೋತ್ತರ ಪರೀಕ್ಷೆ ವರದಿಯಿಂದ ಗೊತ್ತಾಗಿತ್ತು. ಇದೇ ಮಾಹಿತಿ ಕೊಲೆ ಪ್ರಕರಣ ಭೇದಿಸಲು ಸಾಧ್ಯವಾಯಿತು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.