ADVERTISEMENT

ತಾಯಿಗೆ ನಿಂದಿಸಿದ್ದವನ ಕೊಲೆ: ಆರೋಪಿ ಬಂಧಿಸಿದ ಜ್ಞಾನಭಾರತಿ ಠಾಣೆ ಪೊಲೀಸರು

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 16:01 IST
Last Updated 28 ಅಕ್ಟೋಬರ್ 2025, 16:01 IST
ಕೊಲೆಯಾದ ಅವಿನಾಶ 
ಕೊಲೆಯಾದ ಅವಿನಾಶ    

ಬೆಂಗಳೂರು: ತಾಯಿಯನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದ ವ್ಯಕ್ತಿಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಿರುವ ಉಲ್ಲಾಳದ ನಿವಾಸಿಯನ್ನು ಜ್ಞಾನಭಾರತಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.  

ಅವಿನಾಶ್‌ (36) ಅವರನ್ನು ಕೊಲೆ ಮಾಡಿದ ಆರೋಪದ ಅಡಿ ಆರೋಪಿ ಕಾರ್ತಿಕ್‌ (26) ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಕಾರ್ತಿಕ್‌ ಸಂಬಂಧಿಯೂ ಆಗಿದ್ದ ಅವಿನಾಶ್ ಅವರು ಶಾಲಾ ಬಸ್‌, ಆಟೊ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಮದ್ಯ ಸೇವನೆ ಅಭ್ಯಾಸವಿತ್ತು. ಪ್ರತಿನಿತ್ಯ ಮದ್ಯ ಸೇವಿಸಿ ಮನೆಗೆ ಬಂದು ಗಲಾಟೆ ಮಾಡುತ್ತಿದ್ದರಿಂದ ಪತ್ನಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಕೆಲವು ದಿನಗಳಿಂದ‌ ಕೆಲಸಕ್ಕೆ ಹೋಗದ ಅವಿನಾಶ್ ಅವರು ಕಾರ್ತಿಕ್‌ ಮನೆಯ ಪಕ್ಕದಲ್ಲೇ ಸಣ್ಣ ಕೊಠಡಿಯಲ್ಲಿ ವಾಸವಿದ್ದರು ಎಂದು ಅವರು ಹೇಳಿದರು.

ADVERTISEMENT

ಸಂಬಂಧಿಕ ಆಗಿದ್ದರಿಂದ ಅವಿನಾಶ್‌ ಅವರಿಗೆ ನಿತ್ಯ ಊಟ, ತಿಂಡಿಯನ್ನು ಕಾರ್ತಿಕ್‌ ಮನೆಯವರೇ ನೀಡುತ್ತಿದ್ದರು. ಸೋಮವಾರ ರಾತ್ರಿ 10.30ರ ಸುಮಾರಿಗೆ ಕಾರ್ತಿಕ್ ಮನೆಯಲ್ಲಿ ಇರಲಿಲ್ಲ. ಆಗ ಪಾನಮತ್ತನಾಗಿ ಬಂದಿದ್ದ ಅವಿನಾಶ್, ಆತನ ತಾಯಿ ಹಾಗೂ ಅಜ್ಜಿಯನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದರು. ಅವಿನಾಶ್‌ನ ವರ್ತನೆಯಿಂದ ಬೇಸತ್ತ ಕಾರ್ತಿಕ್‌ ಅವರ ತಾಯಿ ಪುತ್ರನಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಕೆಲವೇ ಕ್ಷಣದಲ್ಲಿ ಸ್ಥಳಕ್ಕೆ ಬಂದಿದ್ದರು. ಆಗ ಕಾರ್ತಿಕ್ ಹಾಗೂ ಅವಿನಾಶ್ ನಡುವೆ ವಾಗ್ವಾದ ನಡೆದಿತ್ತು. ಬಳಿಕ ಅವಿನಾಶ್ ಅವರ ತಲೆಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಲಾಗಿತ್ತು ಎಂದು ಪೊಲೀಸರು ಹೇಳಿದರು.

ಬಂಧಿತ ಆರೋಪಿ ಕಾರ್ತಿಕ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.