ADVERTISEMENT

ಆಶ್ರಯ ಕೊಟ್ಟಿದ್ದ ಸ್ನೇಹಿತನನ್ನೇ ಕೊಂದ

ಮಹಿಳೆಯ ನಗ್ನ ವಿಡಿಯೊ ಹರಿಬಿಟ್ಟು ಜೈಲುಪಾಲಾಗಿದ್ದ ಆರೋಪಿ * ಜಾಮೀನು ಮೇಲೆ ಹೊರಬಂದು ಕೃತ್ಯ ಎಸಗಿ ಪರಾರಿ

​ಪ್ರಜಾವಾಣಿ ವಾರ್ತೆ
Published 13 ಮೇ 2019, 19:46 IST
Last Updated 13 ಮೇ 2019, 19:46 IST
ಉಮೇಶ್
ಉಮೇಶ್   

ಬೆಂಗಳೂರು: ನಗರದ ಹೆಗ್ಗನಹಳ್ಳಿಯಲ್ಲಿ ‘ಕಬಾಬ್ ಹಾಗೂ ಎಗ್‌ ರೈಸ್’ ಅಂಗಡಿ ನಡೆಸುತ್ತಿದ್ದ ಉಮೇಶ್ (36) ಎಂಬುವರನ್ನು, ಅವರ ಅಂಗಡಿ ಎದುರೇ ದುಷ್ಕರ್ಮಿಗಳಿಬ್ಬರು ಮಚ್ಚಿನಿಂದ ಕೊಚ್ಚಿ ಭಾನುವಾರ ರಾತ್ರಿ ಕೊಲೆ ಮಾಡಿದ್ದಾರೆ.

ಮದ್ದೂರು ತಾಲ್ಲೂಕಿನ ಉಮೇಶ್, ಪತ್ನಿ ಜೊತೆ ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. ಹೆಗ್ಗನಹಳ್ಳಿಯ ಶ್ರೀಗಂಧನಗರದ ಬಾಡಿಗೆ ಮನೆಯಲ್ಲಿ ವಾಸವಿದ್ದರು.

‘ಎಂದಿನಂತೆ ಭಾನುವಾರ ಅಂಗಡಿಗೆ ಬಂದು ಕೆಲಸ ಮಾಡುತ್ತಿದ್ದರು. ಬೈಕ್‌ನಲ್ಲಿ ಅಂಗಡಿ ಬಳಿ ರಾತ್ರಿ ಬಂದಿದ್ದ ದುಷ್ಕರ್ಮಿಗಳಿಬ್ಬರು, ಅಂಗಡಿಯೊಳಗೆ ನುಗ್ಗಿ ಉಮೇಶ್‌ ಮೇಲೆ ಮಚ್ಚು ಬೀಸಿದ್ದರು. ತಪ್ಪಿಸಿಕೊಂಡು ಓಡಲಾರಂಭಿಸಿದಾಗ ಬೆನ್ನಟ್ಟಿ ಮಚ್ಚಿನಿಂದ ಹೊಡೆದಿದ್ದರು. ಅಂಗಡಿ ಎದುರೇ ನರಳುತ್ತ ಬಿದ್ದಿದ್ದ ಉಮೇಶ್, ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿಕೆ ನೀಡಿದ್ದಾರೆ’ ಎಂದು ರಾಜಗೋಪಾಲನಗರ ಪೊಲೀಸರು ಹೇಳಿದರು.

ADVERTISEMENT

ಸ್ನೇಹಿತನಿಂದ ಕೃತ್ಯ: ‘ಸ್ನೇಹಿತ ಕಿಶೋರ್ ಎಂಬಾತನೇ ಸಹಚರನ ಜೊತೆ ಸೇರಿ ಉಮೇಶ್ ಅವರನ್ನು ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗಿದ್ದು, ಸದ್ಯ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ವಿವರಿಸಿದರು.

‘ಹಾಸನದ ಕಿಶೋರ್, ಎರಡು ವರ್ಷಗಳ ಹಿಂದೆ ಮನೆ ಬಿಟ್ಟು ಬೆಂಗಳೂರಿಗೆ ಬಂದಿದ್ದ. ಉಮೇಶ್ ಅವರೇ ಆತನಿಗೆ ತಮ್ಮ ಮನೆಯಲ್ಲಿ ಆರು ತಿಂಗಳು ಆಶ್ರಯ ನೀಡಿದ್ದರು. ಅಲ್ಲಿದ್ದುಕೊಂಡೇ ಆರೋಪಿ, ಖಾಸಗಿ ಶಾಲೆಯ ವಾಹನದ ಚಾಲಕನಾಗಿ ಕೆಲಸಕ್ಕೆ ಸೇರಿಕೊಂಡಿದ್ದ’ ಎಂದು ಹೇಳಿದರು.

ಸ್ನೇಹಿತನ ಪತ್ನಿಯ ನಗ್ನ ವಿಡಿಯೊ ಸೆರೆ; ‘ಉಮೇಶ್ ಅವರ ಪತ್ನಿ ಮೇಲೆಯೇ ಕಣ್ಣು ಹಾಕಿದ್ದ ಆರೋಪಿ, ಲೈಂಗಿಕ ದೌರ್ಜನ್ಯ ಎಸಗಲು ಆರಂಭಿಸಿದ್ದ. ತನ್ನೊಂದಿಗೆ ಲೈಂಗಿಕವಾಗಿ ಸಹಕರಿಸುವಂತೆ ಪೀಡಿಸಲಾರಂಭಿಸಿದ್ದ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಉಮೇಶ್, ಬೆಳಿಗ್ಗೆ ಮನೆಯಿಂದ ಹೊರಗೆ ಹೋದರೆ ರಾತ್ರಿಯೇ ವಾಪಸು ಬರುತ್ತಿದ್ದರು. ಆ ಸಮಯದಲ್ಲಿ ಪತ್ನಿಯು ಸ್ನಾನ ಮಾಡುವ ಹಾಗೂ ಬಟ್ಟೆ ಬದಲಾಯಿಸುವ ಫೋಟೊ ಹಾಗೂ ವಿಡಿಯೊಗಳನ್ನು ಆರೋಪಿ ಮೊಬೈಲ್‌ನಲ್ಲಿ ಸೆರೆಹಿಡಿದಿಟ್ಟುಕೊಂಡಿದ್ದ. ಅವುಗಳನ್ನು ಕೆಲ ಸಂಬಂಧಿಕರಿಗೂ ಕಳುಹಿಸಿಕೊಟ್ಟಿದ್ದ’ ಎಂದರು.

‘ಸ್ನೇಹಿತನ ಪತ್ನಿಗೂ ಫೋಟೊ ಹಾಗೂ ವಿಡಿಯೊ ತೋರಿಸಿದ್ದ ಆರೋಪಿ, ‘ನಾನು ಹೇಳಿದಂತೆ ಕೇಳದಿದ್ದರೆ, ನಗ್ನ ಫೋಟೊ ಹಾಗೂ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತೇನೆ’ ಎಂದು ಬೆದರಿಸಿದ್ದ’ ಎಂದು ಹೇಳಿದರು.

‘ಕಿಶೋರ್‌ನ ಕಿರುಕುಳದಿಂದ ಬೇಸತ್ತ ಉಮೇಶ್ ಅವರ ಪತ್ನಿ, ಜನವರಿ 15ರಂದು ಠಾಣೆಗೆ ದೂರು ನೀಡಿದ್ದರು. ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಇತ್ತೀಚೆಗೆ ಜಾಮೀನು ಮೇಲೆ ಹೊರಬಂದಿದ್ದ ಕಿಶೋರ್, ಉಮೇಶ್‌ ಅವರ ಮನೆಗೆ ಹೋಗಿ ಕೊಲೆ ಬೆದರಿಕೆ ಹಾಕಿದ್ದ‘ ಎಂದು ಪೊಲೀಸರು ವಿವರಿಸಿದರು.

ಉಮೇಶ್‌ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.