ADVERTISEMENT

ಬಿಜಿಎಸ್ ಮೇಲ್ಸೇತುವೆ: ವಾಹನ ಸಂಚಾರ ವ್ಯತ್ಯಯ

ಬಿಬಿಎಂಪಿ ವತಿಯಿಂದ ದುರಸ್ತಿ ಕಾಮಗಾರಿ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2018, 8:58 IST
Last Updated 31 ಡಿಸೆಂಬರ್ 2018, 8:58 IST

ಬೆಂಗಳೂರು: ಮೈಸೂರು ರಸ್ತೆಯ ಬಾಲಗಂಗಾಧರನಾಥ ಸ್ವಾಮೀಜಿ (ಬಿಜಿಎಸ್‌) ಮೇಲ್ಸೇತುವೆ ದುರಸ್ತಿ ಕಾಮಗಾರಿ ಶುಕ್ರವಾರದಿಂದ ಆರಂಭವಾಗಲಿದೆ. ಕಾಮಗಾರಿ ವೇಳೆ ಮೇಲ್ಸೇತುವೆಯ ಒಂದು ಪಾರ್ಶ್ವದ ರಸ್ತೆಯಲ್ಲಿ ವಾಹನಗಳ ಸಂಚಾರ ನಿಷೇಧಿಸಲಾಗುತ್ತಿದೆ.

ನಿತ್ಯವೂ ಸಾವಿರಾರು ಸಂಖ್ಯೆಯ ವಾಹನಗಳು ಸಂಚರಿಸುವ ಮೇಲ್ಸೇತುವೆಯ ಕೆಲವೆಡೆ ಡಾಂಬರ್ ಪದರ ಕಿತ್ತು ಹೋಗಿದೆ. ಇದರ ದುರಸ್ತಿ ಕಾಮಗಾರಿಯ ಗುತ್ತಿಗೆಯನ್ನು ಬಿಬಿಎಂಪಿ, ಸಾಯಿ ತ್ರಿಷಾ ಇನ್‌ಫ್ರಾ ಎಂಜಿನಿಯರಿಂಗ್ ಕಂಪನಿಗೆ ನೀಡಿದೆ.

‘ಡಾಂಬರೀಕರಣ ಕಾಮಗಾರಿ ಶುಕ್ರವಾರದಿಂದ ಆರಂಭವಾಗಲಿದೆ. ಇದು ಪೂರ್ಣಗೊಳ್ಳಲು 40 ದಿನಗಳು ಬೇಕು. ಆದರೂ, 30 ದಿನಗಳ ಒಳಗೆ ಪೂರ್ಣಗೊಳಿಸುವಂತೆ ಸೂಚಿಸಿದ್ದೇವೆ’ ಎಂದು ಪಾಲಿಕೆ ಆಯುಕ್ತ ಎನ್‌. ಮಂಜುನಾಥ್ ಪ್ರಸಾದ್ ತಿಳಿಸಿದರು.

ADVERTISEMENT

‘ಮೇಲ್ಸೇತುವೆಯಲ್ಲಿ ಹಾಕಲಾಗಿರುವ ಡಾಂಬರಿನ ಒಂದು ಪದ ಕಿತ್ತು ಹೋಗಿದೆ. ಈಗ ಕಾಮಗಾರಿ ಕೈಗೊಂಡು, 3 ಎಂಎಂ ದಪ್ಪದ ಡಾಂಬರಿನ ಶೀಟ್ ಹಾಕಲಾಗುವುದು. ಅದರ ಮೇಲೆ 40 ಎಂ.ಎಂ ದಪ್ಪದ ಡಾಂಬರು ಹಾಕಲಾಗುವುದು. ಇದು ಐದು ವರ್ಷ ಬಾಳಿಕೆ ಬರಲಿದೆ’ ಎಂದು ಅವರು ತಿಳಿಸಿದರು.

ಪರ್ಯಾಯ ಮಾರ್ಗ ಅಭಿವೃದ್ಧಿ: ಮೇಲ್ಸೇತುವೆ ಬಂದ್ ಮಾಡಿದರೆ, ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗ ಕಲ್ಪಿಸಬೇಕಿದೆ. ಅದೇ ಕಾರಣಕ್ಕೆ ಮೇಲ್ಸೇತುವೆ ಕೆಳಭಾಗದ ರಸ್ತೆಗಳನ್ನು ಬಿಬಿಎಂಪಿ ಅಭಿವೃದ್ಧಿಪಡಿಸುತ್ತಿದೆ.

‘ಕಾಮಗಾರಿ ವೇಳೆ ಮೇಲ್ಸೇತುವೆಯ ಒಂದು ಪಾರ್ಶ್ವದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುತ್ತೇವೆ. ಇದರಲ್ಲಿ ಬೆಳಿಗ್ಗೆ 5ರಿಂದ ಸಂಜೆ 3ರವರೆಗೆ ಟೌನ್‌ಹಾಲ್‌ ಕಡೆಗೆ ಬರುವ ವಾಹನಗಳಿಗೆ ಹಾಗೂ ಸಂಜೆ 3ರ ಬಳಿಕ ಮೈಸೂರು ರಸ್ತೆ ಕಡೆಗೆ ಹೋಗುವ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು’ ಎಂದು ಆಯುಕ್ತರು ತಿಳಿಸಿದರು.

ವಾಹನ ದಟ್ಟಣೆ ಭೀತಿ: ಮೈಸೂರು ರಸ್ತೆಯಲ್ಲಿ ಕೆಲವು ತಿಂಗಳ ಹಿಂದೆ ವೈಟ್‌ ಟಾಪಿಂಗ್‌ ಕಾಮಗಾರಿ ಆರಂಭವಾದಾಗ, ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಅದರಿಂದಾಗಿ ಬೆಳಿಗ್ಗೆ ಹಾಗೂ ಸಂಜೆ ವೇಳೆ ವಾಹನಗಳ ದಟ್ಟಣೆ ಇತ್ತು.

ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ ಕೆಳಭಾಗದ ರಸ್ತೆಯಲ್ಲೇ ಕಾಮಗಾರಿ ನಡೆದಿತ್ತು. ವಾಹನಗಳು ಪರ್ಯಾಯ ಮಾರ್ಗ ಕಲ್ಪಿಸಿದರೂ ವಾಹನಗಳ ದಟ್ಟಣೆ ನಿಯಂತ್ರಿಸಲು ಸಾಧ್ಯವಾಗಿರಲಿಲ್ಲ. ಈಗ ಮೇಲ್ಸೇತುವೆ ಕಾಮಗಾರಿ ನಡೆಯುವಾಗಲೂ ಅದೇ ಸ್ಥಿತಿ ಬರಬಹುದು ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

**

ಬಾಲಗಂಗಾಧರನಾಥ ಸ್ವಾಮಿ ಮೇಲ್ಸೇತುವೆ

ಕಾಮಗಾರಿ ನಡೆಯುವ ಪ್ರದೇಶ

ಗೂಡ್‌ಶೆಡ್‌ ರಸ್ತೆ ಕಡೆಗೆ

ಕೆ.ಆರ್‌.ಮಾರುಕಟ್ಟೆ ಕಡೆಗೆ

ಚರ್ಚ್‌ ಕಡೆಗೆ

ರಾಯನ್‌ ವೃತ್ತದ ಕಡೆಗೆ

ವಿಕ್ಟೋರಿಯಾ ಆಸ್ಪತ್ರೆ ಕಡೆಗೆ

ಮೇಲ್ಸೇತುವೆ ಮೇಲೆ ಹೋಗಲು ರ‍್ಯಾಂಪ್‌

ರಸ್ತೆ ವಿಭಜಕವನ್ನು ಕತ್ತರಿಸಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ

80 ಅಡಿಗಳಷ್ಟು ಉದ್ದಕ್ಕೆ ರಸ್ತೆ ವಿಭಜಕವನ್ನು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ

ಟೌನ್‌ಹಾಲ್‌ ಕಡೆಗೆ- ಬೆಳಿಗ್ಗೆ 5ರಿಂದ ಸಂಜೆ 3ರವರೆಗೆ ವಾಹನ ಸಂಚಾರಕ್ಕೆ ಅವಕಾಶ

ಮೈಸೂರು ರಸ್ತೆ ಕಡೆಗೆ - ಸಂಜೆ 3ರಿಂದ ರಾತ್ರಿ 10ರವರೆಗೆ ವಾಹನ ಸಂಚಾರಕ್ಕೆ ಅವಕಾಶ
**
ಅಂಕಿ ಅಂಶ
2.65 ಕಿ.ಮೀ - ಮೇಲ್ಸೇತುವೆ ಉದ್ದ
₹4.30 ಕೋಟಿ - ಮೇಲ್ಸೇತುವೆ ದುರಸ್ತಿಯ ವೆಚ್ಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.