ADVERTISEMENT

ಮೈಸೂರು ಸ್ಯಾಂಡಲ್‌ ನಕಲಿ ಸೋಪು ತಯಾರಿಕೆ ಪತ್ತೆ

ಕೆಎಸ್‌ಡಿಎಲ್‌ ಅಧಿಕಾರಿಗಳಿಂದ ಕಾರ್ಯಾಚರಣೆ: ಹೈದರಾಬಾದ್‌ನಲ್ಲಿ ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 13 ಜನವರಿ 2024, 23:45 IST
Last Updated 13 ಜನವರಿ 2024, 23:45 IST
ಹೈದರಾಬಾದ್‌ನಲ್ಲಿ ಪತ್ತೆಯಾಗಿರುವ ಮೈಸೂರು ಸ್ಯಾಂಡಲ್‌ ಬ್ರ್ಯಾಂಡ್‌ನ ನಕಲಿ ಸೋಪು ಮತ್ತು ಇತರ ಉತ್ಪನ್ನಗಳು
ಹೈದರಾಬಾದ್‌ನಲ್ಲಿ ಪತ್ತೆಯಾಗಿರುವ ಮೈಸೂರು ಸ್ಯಾಂಡಲ್‌ ಬ್ರ್ಯಾಂಡ್‌ನ ನಕಲಿ ಸೋಪು ಮತ್ತು ಇತರ ಉತ್ಪನ್ನಗಳು   

ಬೆಂಗಳೂರು: ರಾಜ್ಯ ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆಎಸ್‌ಡಿಎಲ್‌) ‘ಮೈಸೂರು ಸ್ಯಾಂಡಲ್‌’ ಬ್ರ್ಯಾಂಡ್‌ ಹೆಸರಿನಲ್ಲಿ ನಕಲಿ ಸೋಪು ಹಾಗೂ ವಿವಿಧ ಉತ್ಪನ್ನಗಳನ್ನು ತಯಾರಿಸಿ, ಮಾರಾಟ ಮಾಡುತ್ತಿದ್ದ ಘಟಕವೊಂದು ಹೈದರಾಬಾದ್‌ನಲ್ಲಿ ಪತ್ತೆಯಾಗಿದೆ.

ಹೈದರಾಬಾದ್‌ನ ಮಾಲಕಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿದ್ದ ನಕಲಿ ಸೋಪು ತಯಾರಿಕಾ ಘಟಕವನ್ನು ಪತ್ತೆಹಚ್ಚಿದ್ದು, ಕೆಎಸ್‌ಡಿಎಲ್‌ ಅಧಿಕಾರಿಗಳ ದೂರನ್ನು ಆಧರಿಸಿ ರಾಕೇಶ್‌ ಜೈನ್‌ ಮತ್ತು ಮಹಾವೀರ್‌ ಜೈನ್‌ ಎಂಬುವವರನ್ನು ಬಂಧಿಸಲಾಗಿದೆ. ₹ 2 ಕೋಟಿ ಮೌಲ್ಯದ ಸೋಪುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹೈದರಾಬಾದ್‌ ಮಾರುಕಟ್ಟೆಯಲ್ಲಿ ಮೈಸೂರು ಸ್ಯಾಂಡಲ್‌ ಬ್ರ್ಯಾಂಡ್‌ ಹೆಸರಿನಲ್ಲಿ ನಕಲಿ ಸೋಪುಗಳನ್ನು ಮಾರಾಟ ಮಾಡುತ್ತಿರುವ ಕುರಿತು ಅನಾಮಧೇಯರೊಬ್ಬರು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದರು. ಈ ಮಾಹಿತಿಯನ್ನು ಕೆಎಸ್‌ಡಿಎಲ್‌ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್‌ ಅವರಿಗೆ ನೀಡಿದ್ದ ಸಚಿವರು, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.

ADVERTISEMENT

‘ಹೈದರಾಬಾದ್‌ನ ಕೆಲವು ಪ್ರದೇಶಗಳಲ್ಲಿ ಮೈಸೂರು ಸ್ಯಾಂಡಲ್‌ ಬ್ರ್ಯಾಂಡ್‌ ಹೆಸರಿನಲ್ಲಿ ನಕಲಿ ಸೋಪು ಪೂರೈಕೆಯಾಗುತ್ತಿರುವುದು ಕಂಡುಬಂದಿತ್ತು. ಆದರೆ, ಪೂರೈಕೆದಾರರ ಖಚಿತ ಮಾಹಿತಿ ಸಿಕ್ಕಿರಲಿಲ್ಲ. ಇದಕ್ಕಾಗಿ ₹ 1 ಲಕ್ಷ ಮೌಲ್ಯದ ಸೋಪುಗಳನ್ನು ಖರೀದಿಸಿ, ಮೂಲ ಪತ್ತೆಗೆ ನಿರ್ಧರಿಸಲಾಗಿತ್ತು’ ಎಂದು ಪ್ರಶಾಂತ್‌ ತಿಳಿಸಿದ್ದಾರೆ.

ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಬೇಡಿಕೆ ಇದೆ ಎಂಬ ಕಾರಣ ನೀಡಿ ₹ 25 ಲಕ್ಷ ಮೌಲ್ಯದ ಸೋಪುಗಳನ್ನು ಪೂರೈಸುವಂತೆ ಬೇಡಿಕೆ ಸಲ್ಲಿಸಲಾಗಿತ್ತು. ಸ್ವಂತ ವಾಹನದಲ್ಲಿ ಕೊಂಡೊಯ್ಯುವ ನೆಪದಲ್ಲಿ ಉತ್ಪಾದನಾ ಘಟಕವನ್ನು ಪತ್ತೆ ಹಚ್ಚಲಾಯಿತು. ನಂತರ ಪೊಲೀಸರಿಗೆ ದೂರು ನೀಡಿ, ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ತಲಾ 150 ಗ್ರಾಂ. ತೂಕದ 1,800 ಮತ್ತು 75 ಗ್ರಾಂ. ತೂಕದ 9,400 ಸೋಪುಗಳು ಹಾಗೂ ಅವುಗಳನ್ನು ತುಂಬುವ 800 ಖಾಲಿ ಪೆಟ್ಟಿಗೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.