ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮಹಿಳಾ ಸಮನ್ವಯ ಆಯೋಜಿಸಿದ್ದ ‘ನಾರಿ ಶಕ್ತಿ ಸಂಗಮ’ ಮಹಿಳಾ ಸಮ್ಮೇಳನ (ಸಂಗ್ರಹ ಚಿತ್ರ)
ಬೆಂಗಳೂರು: ‘ಸಮರ್ಥ ಭಾರತ’ ವತಿಯಿಂದ ಬೆಂಗಳೂರು ದಕ್ಷಿಣ ವಿಭಾಗ ಮಟ್ಟದ ‘ನಾರೀ ಶಕ್ತಿ ಸಂಗಮ’ ಮಹಿಳಾ ಸಮ್ಮೇಳನವನ್ನು ನ.26ರಂದು ಆಯೋಜಿಸಲಾಗಿದೆ.
ಬಸವನಗುಡಿಯ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಮ್ಮೇಳನ ನಡೆಯಲಿದೆ ಎಂದು ‘ಸಮರ್ಥ ಭಾರತ’ ಬೆಂಗಳೂರು ದಕ್ಷಿಣ ವಿಭಾಗದ ಸಂಯೋಜಕಿ ತೇಜಸ್ವಿನಿ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.
ಸಮಾಜದ ಬಗ್ಗೆ ಕಳಕಳಿಯಿರುವ ಮಹಿಳೆಯರ ಏಕತ್ರೀಕರಣ, ವಿವಿಧ ವೃತ್ತಿಯಲ್ಲಿರುವ ಮಹಿಳೆಯರಿಗೆ ಸಮಾಜಮುಖಿ ದೃಷ್ಟಿ ನೀಡುವುದು, ಸಮಾಜ ಸೇವೆಯ ಅವಕಾಶ ಕಲ್ಪಿಸುವ ಉದ್ದೇಶದಿಂದ ಸಮ್ಮೇಳನ ಆಯೋಜಿಸಲಾಗಿದೆ ಎಂದರು.
ಡಾ. ವಿಜಯಲಕ್ಷ್ಮಿ ದೇಶಮಾನೆ ಅವರು ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದು, ಡಾ. ಎಲ್. ಗೋಮತೀದೇವಿ ಅವರು ಉಪಾಧ್ಯಕ್ಷತೆ ವಹಿಸಿದ್ದಾರೆ. ವಿಭು ಅಕಾಡೆಮಿ ಅಧ್ಯಕ್ಷರಾದ ಡಾ. ಆರತಿ ಸಮ್ಮೇಳನ ಉದ್ಘಾಟಿಸಲಿದ್ದಾರೆ. ‘ಭಾರತೀಯ ಚಿಂತನೆಯಲ್ಲಿ ಮಹಿಳೆ’ ವಿಚಾರ ಸಂಕಿರಣ, ‘ಸ್ಥಾನೀಯ ಮಹಿಳೆಯರ ಸ್ಥಿತಿ, ಸವಾಲುಗಳು ಹಾಗೂ ಪರಿಹಾರ’ ಹಾಗೂ ‘ಆಧುನಿಕ ಭಾರತ ವಿಕಾಸದಲ್ಲಿ ಮಹಿಳೆಯರ ಪಾತ್ರ’ ಚರ್ಚಾಗೋಷ್ಠಿಗಳು ನಡೆಯಲಿವೆ. ಸಮಾರೋಪದಲ್ಲಿ ಮಾಜಿ ಶಾಸಕಿ ಡಾ.ಎಸ್.ಆರ್. ಲೀಲಾ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುಮಾರು 2 ಸಾವಿರ ಮಹಿಳೆಯರು ಭಾಗವಹಿಸಲಿದ್ದು, ರಾಷ್ಟ್ರೀಯ ಸಾಹಿತ್ಯ ಮಳಿಗೆ, ವನವಾಸಿ, ಗೋ ಉತ್ಪನ್ನ ಹಾಗೂ ಸ್ವದೇಶಿ ಮಳಿಗೆಗಳು ಇರಲಿವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.