ADVERTISEMENT

₹3.59 ಲಕ್ಷ ಕೋಟಿ ಸಾಲ ವಿತರಣೆ ಗುರಿ

ನಬಾರ್ಡ್‌ನಿಂದ 2023–24ರ ಅಂದಾಜು ವರದಿ ಬಿಡುಗಡೆ: ಕೃಷಿ ವಲಯಕ್ಕೆ ಆದ್ಯತೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 16:28 IST
Last Updated 23 ಜನವರಿ 2023, 16:28 IST
ಬೆಂಗಳೂರಿನಲ್ಲಿ ಸೋಮವಾರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್ ಅವರು 2023 -2024ನೇ ಸಾಲಿನ ನಬಾರ್ಡ್‌ ‘ಸ್ಟೇಟ್ ಪೋಕಸ್ ಪೇಪರ್’ ಬಿಡುಗಡೆ ಮಾಡಿದರು. ಕೆನರಾ ಬ್ಯಾಂಕ್‌ನ ಮಹಾಪ್ರಬಂಧಕ ಮುರಳಿಕೃಷ್ಣ, ಆರ್‌ಬಿಐ ಮಹಾಪ್ರಬಂಧಕ ಸುನಂದಾ ಬಾತ್ರಾ, ನಬಾರ್ಡ್ ಮುಖ್ಯ ಮಹಾ ಪ್ರಬಂಧಕ ಟಿ. ರಮೇಶ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತು ಕೆನರಾ ಬ್ಯಾಂಕ್ ಮುಖ್ಯ ಮಹಾಪ್ರಬಂಧಕ ದೇಬಾನಂದ ಶಾಹೂ ಇದ್ದರು -ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ಸೋಮವಾರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್ ಅವರು 2023 -2024ನೇ ಸಾಲಿನ ನಬಾರ್ಡ್‌ ‘ಸ್ಟೇಟ್ ಪೋಕಸ್ ಪೇಪರ್’ ಬಿಡುಗಡೆ ಮಾಡಿದರು. ಕೆನರಾ ಬ್ಯಾಂಕ್‌ನ ಮಹಾಪ್ರಬಂಧಕ ಮುರಳಿಕೃಷ್ಣ, ಆರ್‌ಬಿಐ ಮಹಾಪ್ರಬಂಧಕ ಸುನಂದಾ ಬಾತ್ರಾ, ನಬಾರ್ಡ್ ಮುಖ್ಯ ಮಹಾ ಪ್ರಬಂಧಕ ಟಿ. ರಮೇಶ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತು ಕೆನರಾ ಬ್ಯಾಂಕ್ ಮುಖ್ಯ ಮಹಾಪ್ರಬಂಧಕ ದೇಬಾನಂದ ಶಾಹೂ ಇದ್ದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ವಿವಿಧ ಬ್ಯಾಂಕ್‌ಗಳ ಮೂಲಕ 2023–24ನೇ ಆರ್ಥಿಕ ವರ್ಷದಲ್ಲಿ ₹3.59 ಲಕ್ಷ ಕೋಟಿ ಮೊತ್ತದ ಸಾಲ ವಿತರಿಸುವ ಗುರಿಯನ್ನು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ (ನಬಾರ್ಡ್‌) ಹೊಂದಿದೆ.

ಇದು ಹಿಂದಿನ ವರ್ಷಗಳ ಸಾಲದ ಸಾಮರ್ಥ್ಯಕ್ಕಿಂತ ಶೇ 8 ರಷ್ಟು ಹೆಚ್ಚು. 2022–23ನೇ ಹಣಕಾಸು ವರ್ಷದಲ್ಲಿ ₹3.32 ಲಕ್ಷ ಕೋಟಿ ಸಾಲ ವಿತರಣೆ ಗುರಿ ನಿಗದಿಪಡಿಸಲಾಗಿತ್ತು.

ಈ ಬಾರಿಯೂ ಕೃಷಿ ವಲಯಕ್ಕೆ ಆದ್ಯತೆ ನೀಡಲಾಗಿದೆ. ಒಟ್ಟು ಸಾಲದ ಗುರಿಯಲ್ಲಿ ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ ₹1.79 ಲಕ್ಷ ಕೋಟಿ ಸಾಲ ನಿಗದಿಪಡಿಸಲಾಗಿದೆ. ಇದು ಒಟ್ಟು ಮೊತ್ತದಲ್ಲಿನ ಶೇ 49.90ರಷ್ಟಾಗಿದೆ.

ADVERTISEMENT

ಸಾಲ ವಿತರಣೆಗೆ ಸಂಬಂಧಿಸಿದಂತೆ ರಾಜ್ಯದ ಎಲ್ಲ ಜಿಲ್ಲೆಗಳ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ, ಅಧ್ಯಯನ ನಡೆಸಿ ನಬಾರ್ಡ್‌ ಸಿದ್ಧಪಡಿಸಿರುವ ‘ಸ್ಟೇಟ್‌ ಫೋಕಸ್‌ ಪೇಪರ್‌–2023– 24’ ಅನ್ನು ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತ ಐ.ಎಸ್‌.ಎನ್‌. ಪ್ರಸಾದ್‌ ಸೋಮವಾರ ನಗರದಲ್ಲಿ ಬಿಡುಗಡೆ ಮಾಡಿದರು.

ಐ.ಎಸ್‌.ಎನ್‌ ಪ್ರಸಾದ್‌ ಮಾತನಾಡಿ, ‘ರಾಜ್ಯದಲ್ಲಿ ವಿವಿಧ ವಲಯಗಳಿಗೆ ಸಾಲ ವಿತರಿಸಲು ಸಾಕಷ್ಟು ಅವಕಾಶಗಳಿವೆ. ಈ ನಿಟ್ಟಿನಲ್ಲಿ ಬ್ಯಾಂಕ್‌ಗಳು ಹೆಚ್ಚು ಆಸಕ್ತಿ ತೋರಿಸಬೇಕು’ ಎಂದು ಸಲಹೆ ನೀಡಿದರು.

ವಲಯವಾರು ಸಾಲ ನಿಗದಿಪಡಿಸಿದ ಬಗ್ಗೆ ವಿವರ ನೀಡಿದ ನಬಾರ್ಡ್ ಮುಖ್ಯ ಮಹಾಪ್ರಬಂಧಕ ಟಿ. ರಮೇಶ್, ರೈತರ ಆದಾಯ ವೃದ್ಧಿಸುವ ಯೋಜನೆಗಳನ್ನು ಗಮನದಲ್ಲಿರಿಸಿಕೊಂಡು ಸಾಲ ವಿತರಿಸುವ ಗುರಿಯನ್ನು ಹೆಚ್ಚಿಸಲಾಗಿದೆ. 2021-22 ರ ಅವಧಿಯಲ್ಲಿ ಕೋವಿಡ್‌ ಕಾರಣಕ್ಕೆ ಸಾಲ ವಿತರಿಸುವ ಪ್ರಮಾಣ ಕಡಿಮೆಯಾಗಿತ್ತು. ಈ ಬಾರಿ ಎಲ್ಲ ಬ್ಯಾಂಕ್‌ಗಳು ಸಾಲವನ್ನು ಆದ್ಯತೆಯ ವಲಯಕ್ಕೆ ವರ್ಗಾಯಿಸಬೇಕು’ ಎಂದು ಹೇಳಿದರು.

ವಸತಿ ವಲಯಕ್ಕೆ ಆದ್ಯತೆ ನೀಡಿ: ‘ಪ್ರಧಾನ ಮಂತ್ರಿ ಆವಾಸ್‌ ವಸತಿ ಯೋಜನೆ ಸೇರಿದಂತೆ ಕೇಂದ್ರ ಸರ್ಕಾರದ ವಸತಿ ಯೋಜನೆಗಳನ್ನು ಅನುಷ್ಠಾನಕ್ಕೆ ಬ್ಯಾಂಕ್‌ಗಳು ನೆರವು ನೀಡಲು ಮುಂದಾಗಬೇಕು ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸಲಹೆ ನೀಡಿದರು.

‘ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಗೆ ಫೆ.10 ರಂದು ಚಾಲನೆ ನೀಡಲಾಗುವುದು. ಈ ಯೋಜನೆಗೆ ₹500 ಕೋಟಿ ಮೀಸಲಿಡಲಾಗಿದೆ. ಈ ಯೋಜನೆ ಅಡಿಯಲ್ಲಿ ಯುವಕರಿಗೆ ತರಬೇತಿ ನೀಡಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.