
ಯಲಹಂಕ: ದೇಶದಾದ್ಯಂತ ನಡೆಯುತ್ತಿರುವ ಮತಗಳ್ಳತನ ವಿರೋಧಿಸಿ ಹಾಗೂ ಸವಿತಾ ಸಮಾಜದ ವಿರುದ್ಧ ಸಿ.ಟಿ. ರವಿ ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ, ನಾಗವಾರ ವೃತ್ತದಲ್ಲಿ ಬುಧವಾರ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಬಸವರಾಜು ಮಾತನಾಡಿ, ‘ದೇಶದಾದ್ಯಂತ ಬಿಜೆಪಿ ಮತ್ತು ಆರ್‌ಎಸ್‌ಎಸ್ ಪರಿವಾರದಿಂದ ಮತಗಳ್ಳತನ ನಡೆಯುತ್ತಿದೆ. ಅಧಿಕಾರ ದುರುಪಯೋಗಪಡಿಸಿಕೊಳ್ಳುವ ಮೂಲಕ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡುತ್ತಿದೆ’ ಎಂದು ಆರೋಪಿಸಿದರು.
ಪರಿಶಿಷ್ಟ, ಹಿಂದುಳಿದವರ್ಗ ಹಾಗೂ ಅಲ್ಪಸಂಖ್ಯಾತರ ಮತಗಳನ್ನು ಗುರಿಯಾಗಿಸಿಕೊಂಡು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವುದು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ರಾಹುಲ್ ಗಾಂಧಿಯವರು ಮಹದೇವಪುರದಲ್ಲಿ ಮತಗಳ್ಳತನದ ಅಕ್ರಮ ನಡೆದಿರುವ ಬಗ್ಗೆ ದಾಖಲೆ ಸಮೇತ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಅವರ ಹೋರಾಟದಿಂದ ಮತದಾರರ ಹೆಸರು ಸೇರ್ಪಡೆ ಮತ್ತು ತೆಗೆಯಲು ಒಟಿಪಿ ಜಾರಿಗೊಳಿಸಲಾಗಿದೆ ಎಂದು ಹೇಳಿದರು.
ಬ್ಯಾಟರಾಯನಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಜಯಗೋಪಾಲಗೌಡ ಮಾತನಾಡಿ, ‘ದೇಶದಲ್ಲಿ ಬಿಜೆಪಿ ನ್ಯಾಯಯುತವಾಗಿ ಚುನಾವಣೆ ನಡೆಸುವುದನ್ನು ಬಿಟ್ಟು, ಅಧಿಕಾರ ದುರುಪಯೋಗ ಮಾಡಿಕೊಂಡು ವಾಮಮಾರ್ಗದಿಂದ ಅಧಿಕಾರ ಹಿಡಿಯುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು ಈ ಬಗ್ಗೆ ಎಚ್ಚರವಹಿಸುವುದರ ಜೊತೆಗೆ ಮನೆಮನೆಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸಬೇಕು’ ಎಂದು ಸಲಹೆ ನೀಡಿದರು.
ಮತಗಳ್ಳತನ ವಿರೋಧಿಸಿ, ಸಹಿ ಸಂಗ್ರಹ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾಂಗ್ರೆಸ್ ಮುಖಂಡರಾದ ಎಚ್.ಎ. ಶಿವಕುಮಾರ್, ಟಿ.ಎಂ. ಶ್ರೀನಿವಾಸ್, ರಮೇಶ್, ಪಾರ್ವತಮ್ಮ, ಅರುಣ್‌ಕುಮಾರ್, ವಿ.ಮೋಹನ್‌ರಾಜ್, ಕಾಂತರಾಜ್, ಅಫ್ಜಲ್ ಖಾನ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.