ಬೆಂಗಳೂರು: ‘ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗದ ವರದಿಯು ಅವೈಜ್ಞಾನಿಕವಾಗಿದ್ದು, ಇದರಲ್ಲಿರುವ ಅಂಕಿ–ಅಂಶಗಳನ್ನು ಮರು ಪರಿಶೀಲಿಸಬೇಕು. ಜನಸಂಖ್ಯೆಯ ಆಧಾರದ ಮೇಲೆ ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಸೇರಿದ ಜಾತಿಗಳನ್ನು ಪ್ರವರ್ಗ ‘ಎ’ ಗುಂಪಿಗೆ ಸೇರಿಸಿ, ಆದೇಶ ಹೊರಡಿಸಬೇಕು’ ಎಂದು ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟ ಆಗ್ರಹಿಸಿದೆ.
ನಾಗಮೋಹನದಾಸ್ ವರದಿಯ ಒಳ ಸಂಚು ತಿಳಿಯುವುದು, ಸಾಮಾಜಿಕ, ಶೈಕ್ಷಣಿಕ ಗಣತಿಯಲ್ಲಿ ಬಲಗೈ ಜಾತಿಗಳ ಜವಾಬ್ದಾರಿ ಕುರಿತು ಗುರುವಾರ ಇಲ್ಲಿ ನಡೆದ ವಿಚಾರಸಂಕಿರಣದಲ್ಲಿ ಈ ಸಂಬಂಧ ನಿರ್ಣಯ ಕೈಗೊಂಡಿದೆ.
‘ಸೆ. 3ರಂದು ರೋಸ್ಟರ್ ಬಿಂದುಗಳನ್ನು ನಿಗದಿಪಡಿಸಿ ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು. ಹಿಂದುಳಿದ ವರ್ಗಗಳ ಆಯೋಗದ ವರದಿಯ ನಂತರವೇ ಪರಿಶಿಷ್ಟ ಜಾತಿಯ ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕು. ಬಲಗೈ ಜಾತಿಗೆ ಆಗಿರುವ ಅನ್ಯಾಯವನ್ನು ಕೂಡಲೇ ಸರಿಪಡಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಸಮುದಾಯದಿಂದ ಪ್ರತಿರೋಧ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದೆ.
ವಿಚಾರಸಂಕಿರಣದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ನಿವೃತ್ತ ಐಎಎಸ್ ಅಧಿಕಾರಿ ಎಸ್. ಸಿದ್ಧಯ್ಯ, ‘ನಾಗಮೋಹನದಾಸ್ ಆಯೋಗದ ವರದಿಯು ಅಪೂರ್ಣವಾಗಿದ್ದು, ಇದು ಬಲಗೈ ಜನಾಂಗದ ಭವಿಷ್ಯಕ್ಕೆ ಮಾರಕವಾಗಿದೆ. ಇದರಲ್ಲಿ ನಮ್ಮ ಜನಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ. ನಮ್ಮ ಸಮುದಾಯದ ಶೇ 40 ರಷ್ಟು ಜನರನ್ನು ಉದ್ದೇಶಪೂರ್ವಕವಾಗಿ ಸಮೀಕ್ಷೆಯಿಂದ ಹೊರಗೆ ಇಡಲಾಗಿದೆ’ ಎಂದು ಆರೋಪಿಸಿದರು.
ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಜಂಟಿ ನಿರ್ದೇಶಕ ಡಿ. ಚಂದ್ರಶೇಖರಯ್ಯ, ಶಾಸಕ ಪಿ.ಎಂ. ನರೇಂದ್ರಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಎಫ್.ಎಸ್. ಜಕ್ಕಪ್ಪನವರ, ಮಾಜಿ ಶಾಸಕ ಕುಮಾರಸ್ವಾಮಿ, ಮಾಜಿ ಸಚಿವ ಬಿ.ಬಿ. ನಿಂಗಯ್ಯ, ಮಾಜಿ ಸಂಸದ ಮುನಿಸ್ವಾಮಿ, ಒಕ್ಕೂಟದ ಬಿ. ಶಿವಣ್ಣ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.