ADVERTISEMENT

‘ಕಪಾಳಕ್ಕೆ ಹೊಡೆದ ಮೊಹಮ್ಮದ್ ನಲಪಾಡ್’

ಯುವ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಗಲಾಟೆ; ದೂರು– ಪ್ರತಿದೂರು

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2020, 22:23 IST
Last Updated 16 ಮಾರ್ಚ್ 2020, 22:23 IST
ನಲಪಾಡ್
ನಲಪಾಡ್   

ಬೆಂಗಳೂರು: ಉದ್ಯಮಿ ಲೋಕನಾಥನ್ ಪುತ್ರ ವಿದ್ವತ್‌ ಕೊಲೆಗೆ ಯತ್ನಿಸಿದ್ದ ಹಾಗೂ ಮೇಖ್ರಿ ವೃತ್ತದ ಕೆಳಸೇತುವೆಯಲ್ಲಿ ಸಂಭವಿಸಿದ್ದ ಸರಣಿ ಅಪಘಾತ ಪ್ರಕರಣದಲ್ಲಿ ಬಂಧಿತರಾಗಿ ಜಾಮೀನು ಪಡೆದಿದ್ದ ಶಾಸಕ ಎನ್‌.ಎ.ಹ್ಯಾರಿಸ್‌ ಮಗ ಮೊಹಮದ್ ನಲಪಾಡ್‌ ಈಗ ಮತ್ತೊಮ್ಮೆ ಕಿರಿಕ್ ಮಾಡಿಕೊಂಡಿದ್ದಾರೆ.

ವೈಯಾಲಿಕಾವಲ್ ಬಳಿಯ ತೆಲುಗು ವಿಜ್ಞಾನ ಸಮಿತಿ ಸಭಾಂಗಣದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಭಾನುವಾರ ಆಯೋಜಿಸಿದ್ದ ಭಾಷಣ ಸ್ಪರ್ಧೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಗಲಾಟೆ ನಡೆದಿದ್ದು, ಇದೇ ಸಂದರ್ಭದಲ್ಲೇ ಕಾರ್ಯಕರ್ತ ಸಚಿನ್ ಗೌಡ ಎಂಬುವರ ಮೇಲೆ ನಲಪಾಡ್ ಹಾಗೂ ಇತರರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಹಲ್ಲೆ ಬಗ್ಗೆ ವೈಯಾಲಿಕಾವಲ್ ಠಾಣೆಗೆ ದೂರು ನೀಡಿರುವ ಸಚಿನ್ ಗೌಡ, ‘ನನ್ನ ಜೊತೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಮೊಹಮ್ಮದ್ ನಲಪಾಡ್ ಕಪಾಳಕ್ಕೆ ಹೊಡೆದಿದ್ದಾರೆ. ಜೀವ ಬೆದರಿಕೆಯನ್ನೂ ಹಾಕಿದ್ದಾರೆ. ನಂತರ, ಅವರ ಗನ್‌ಮ್ಯಾನ್ ಹಾಗೂ ಇತರರು ಸಹ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ.

ADVERTISEMENT

ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ವಿಭಾಗದ ಡಿಸಿಪಿ ಚೇತನ್‌ಸಿಂಗ್ ರಾಥೋಡ್, ‘ಅಪರಾಧ ಸಂಚು (ಐಪಿಸಿ 34), ಉದ್ದೇಶ ಪೂರ್ವಕವಾಗಿ ಶಾಂತಿ ಕದಡುವುದು (ಐಪಿಸಿ 504), ಜೀವ ಬೆದರಿಕೆ (ಐಪಿಸಿ 506), ಹಲ್ಲೆ (ಐಪಿಸಿ 323) ಹಾಗೂ ಅಕ್ರಮವಾಗಿ ಕೂಡಿ ಹಾಕಿದ (ಐಪಿಸಿ 341) ಆರೋಪದಡಿ ನಲಪಾಡ್ ಹಾಗೂ ಅವರ ಗನ್‌ಮ್ಯಾನ್ ವಿರುದ್ಧ ಎಫ್ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದರು.

‘ಯುವ ಕಾಂಗ್ರೆಸ್ಉಪಾಧ್ಯಕ್ಷ ಶಿವಕುಮಾರ್, ಮಂಜು ಹಾಗೂ ಇತರರನ್ನೂ ಆರೋಪಿಯನ್ನಾಗಿ ಮಾಡಲಾಗಿದೆ’ ಎಂದು ಅವರು ಹೇಳಿದರು.

ದೂರು ನೀಡಿದ ನಲಪಾಡ್: ಗಲಾಟೆ ಸಂಬಂಧ ಮೊಹಮ್ಮದ್ ನಲಪಾಡ್‌ ಸಹ ವೈಯಾಲಿಕಾವಲ್ ಠಾಣೆಗೆ ದೂರು ನೀಡಿದ್ದಾರೆ.

‘ಕಾರ್ಯಕ್ರಮ ಜಾಗದಲ್ಲಿ ಶಿವಕುಮಾರ್ ಹಾಗೂ ಸಚಿನ್ ಗೌಡ ಎಂಬುವರ ನಡುವೆ ಜಗಳವಾಗುತ್ತಿತ್ತು. ಇಬ್ಬರನ್ನೂ ಸಮಾಧಾನಪಡಿಸಲು ಹೋಗಿದ್ದೆ. ನನ್ನನ್ನೇ ಏಕವಚನದಲ್ಲಿ ಮಾತನಾಡಿಸಿದ್ದ ಸಚಿನ್ ಗೌಡ, ಒಂದು ಗತಿ ಕಾಣಿಸುತ್ತೇನೆಂದು ಜೀವ ಬೆದರಿಕೆ ಹಾಕಿದ. ಮಾಧ್ಯಮದಲ್ಲಿ ಸುದ್ದಿ ಬರುವಂತೆ ಮಾಡುತ್ತೇನೆಂದು ಹೇಳಿದ್ದ’ ಎಂದು ನಲಪಾಡ್ ದೂರಿದ್ದಾರೆ.

ವೈಯಾಲಿಕಾವಲ್ ಠಾಣೆ ಪೊಲೀಸರು, ‘ನಲಪಾಡ್ ನೀಡಿರುವ ದೂರು ಆಧರಿಸಿ ಎನ್‌ಸಿಆರ್‌ (ಗಂಭೀರವಲ್ಲದ ಪ್ರಕರಣ) ದಾಖಲಿಸಿಕೊಳ್ಳಲಾಗಿದೆ. ನ್ಯಾಯಾಲಯದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಆಗಿದ್ದೇನು?: ಯುವ ಕಾಂಗ್ರೆಸ್ ಕರ್ನಾಟಕ ಘಟಕದಿಂದ ಭಾಷಣ ಸ್ಪರ್ಧೆ ಆಯೋಜಿಸಲಾಗಿತ್ತು. ಮಧ್ಯಾಹ್ನ 3ರಿಂದ ರಾತ್ರಿ 8ರವರೆಗೆ ಸ್ಪರ್ಧೆ ನಡೆದು, ನಂತರ ಬಹುಮಾನ ವಿತರಣಾ ಕಾರ್ಯಕ್ರಮ ಆರಂಭವಾಗಿತ್ತು. ಆಯ್ಕೆ ಸಮಿತಿ ಸದಸ್ಯರೇ ವಿಜೇತರಿಗೆ ಬಹುಮಾನ ನೀಡಿದ್ದರು.

ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸಚಿನ್ ಗೌಡ, ‘ಶಾಸಕರ ಮಗ ಗೌತಮ್‌ ಅವರನ್ನು ವೇದಿಕೆಗೆ ಏಕೆ ಕರೆಯಲಿಲ್ಲ’ ಎಂದು ಯುವ ಕಾಂಗ್ರೆಸ್ ಬೆಂಗಳೂರು ಉಸ್ತುವಾರಿ ಇಮ್ರಾನ್ ಅವರನ್ನು ಪ್ರಶ್ನಿಸಿದ್ದರು. ಅದು ಪಕ್ಷದ ತೀರ್ಮಾನವೆಂದು ಇಮ್ರಾನ್ ಉತ್ತರಿಸಿದ್ದರು. ಉಪಾಧ್ಯಕ್ಷ ಶಿವಕುಮಾರ್ ಅವರನ್ನೂ ಸಚಿನ್ ಪ್ರಶ್ನಿಸಿದ್ದರು. ಅವಾಗಲೇ ಅವರಿಬ್ಬರ ನಡುವೆ ಮಾತಿನ ಚಕಮಕಿ ನಡೆದು, ಗಲಾಟೆ ಶುರುವಾಗಿತ್ತು. ರಾಜ್ಯ ಘಟಕದ ಅಧ್ಯಕ್ಷ ಬಸವನಗೌಡ ಬಾದರ್ಲಿ ಹಾಗೂ ಯುವ ಕಾಂಗ್ರೆಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷರೂ ಆಗಿರುವ ನಲಪಾಡ್ ಮಧ್ಯಪ್ರವೇಶಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.