ADVERTISEMENT

‘ತಬ್ಲೀಗ್: ಭಾಗವಹಿಸಿದವರ ವೈದ್ಯಕೀಯ ತಪಾಸಣೆ ನಡೆಸಿ’

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2020, 21:20 IST
Last Updated 10 ಏಪ್ರಿಲ್ 2020, 21:20 IST
ನಳಿನ್ ಕುಮಾರ್ ಕಟೀಲ್
ನಳಿನ್ ಕುಮಾರ್ ಕಟೀಲ್   

ಬೆಂಗಳೂರು: ‘ದೆಹಲಿಯಲ್ಲಿ ನಡೆದ ತಬ್ಲೀಗ್‌ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ ಇನ್ನೂ ಕೆಲವರು ವೈದ್ಯಕೀಯ ತಪಾಸಣೆಗೆ ಒಳಪಟ್ಟಿಲ್ಲ. ಅವರೆಲ್ಲರೂ ತಪಾಸಣೆಗೆ ಒಳಪಡುವಂತೆ ಅಲ್ಪಸಂಖ್ಯಾತ ವರ್ಗದ ನಾಯಕರು ಮಾಡಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಆಗ್ರಹಿಸಿದ್ದಾರೆ.

‘ಕೊರೊನಾ ಸೋಂಕು ಹರಡದಂತೆ ಘೋಷಿಸಿದ ಲಾಕ್‌ಡೌನ್‌ ಪರಿಣಾಮ ಸಂಕಷ್ಟದಲ್ಲಿರುವವರ ನೆರವಿನಲ್ಲಿ ಪಕ್ಷದ ಕಾರ್ಯಕರ್ತರು ತೊಡಗಿಸಿಕೊಂಡಿದ್ದು, ಈವರೆಗೆ 20.14 ಲಕ್ಷ ಜನರಿಗೆ ಆಹಾರ ಪಟ್ಟಣ, 5.96 ಲಕ್ಷ ಕುಟುಂಬಗಳಿಗೆ ರೇಷನ್‌ ಕಿಟ್‌ ತಲುಪಿಸಿದ್ದಾರೆ‘ ಎಂದಿದ್ದಾರೆ.

‘ಪಕ್ಷದ ವತಿಯಿಂದ ಈವರೆಗೆ 15.52 ಲಕ್ಷ ಮಾಸ್ಕ್‌ಗಳನ್ನು ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಪಕ್ಷ ಎಲ್ಲ 311 ಮಂಡಲಗಳಲ್ಲಿ, ಏಳು ಸಾವಿರ ಕೇಂದ್ರಗಳಲ್ಲಿ ಮಾಸ್ಕ್‌ಗಳನ್ನು ತಯಾರಿಸಿ ಬಡ, ಕಾರ್ಮಿಕ, ಮಧ್ಯಮ ವರ್ಗದ ಜನರ ಮನೆಗಳಿಗೆ ಮಾಸ್ಕ್‌ಗಳನ್ನು ವಿತರಿಸಲು ಉದ್ದೇಶಿಸಲಾಗಿದೆ’ ಎಂದೂ ತಿಳಿಸಿದ್ದಾರೆ.

ADVERTISEMENT

‘ಪಕ್ಷದ ಯುವ ಮೋರ್ಚಾ ಕಾರ್ಯಕರ್ತರು ಬಡವರಿಗೆ, ವೃದ್ಧರಿಗೆ ಔಷಧಿಯನ್ನು ಮನೆಗೆ ತಲುಪಿಸುತ್ತಿದ್ದಾರೆ. ಪಕ್ಷದ ಘಟಕಗಳಿರುವ 311 ಮಂಡಲಗಳು, ಜಿಲ್ಲಾ ಕೇಂದ್ರಗಳು ಮತ್ತು ಬೆಂಗಳೂರು ಕೇಂದ್ರವಾಗಿಟ್ಟು ಸಹಾಯವಾಣಿ (080–68324040/ 8722557733) ತೆರೆಯಲಾಗಿದೆ. ಈ ಸಹಾಯವಾಣಿ ಮೂಲಕ ಈಗಾಗಲೇ 1.24 ಲಕ್ಷ ಜನರಿಗೆ ಪರಿಹಾರ ಒದಗಿಸಲಾಗಿದೆ’ ಎಂದೂ ಅವರು ವಿವರಿಸಿದ್ದಾರೆ.

‘ಪಕ್ಷದ 1.68 ಕಾರ್ಯಕರ್ತರು ಮನೆಯನ್ನೇ ಕೇಂದ್ರವಾಗಿ ಮಾಡಿಕೊಂಡು ಮೊಬೈಲ್‌ ಮತ್ತು ದೂರವಾಣಿ ಮೂಲಕ ಕೆಲಸ ಮಾಡುತ್ತಿದ್ದಾರೆ. ಒಂದು ಬೂತ್‌ಗೆ ತಲಾ ಇಬ್ಬರಂತೆ 1.16 ಲಕ್ಷ ಕಾರ್ಯಕರ್ತರು ಬೂತ್‌ಮಟ್ಟದಲ್ಲಿ ಕರೆ ಮಾಡಿ ಪ್ರಧಾನ ಮಂತ್ರಿ ಸಹಾಯ ನಿಧಿಗೆ ನೆರವು ನೀಡುವಂತೆ ಮನವಿ ಮಾಡುತ್ತಿದ್ದಾರೆ. ಪ್ರತಿ ಬೂತ್‌ನಲ್ಲಿ ತಲಾ 40 ಜನರ ಮೊಬೈಲ್‌ಗಳಿಗೆ ‘ಆರೋಗ್ಯ ಸೇತು’ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು, ಸಮೀಪದಲ್ಲಿ ಯಾರಿಗಾದರೂ ಕೊರೊನಾ ಸೋಂಕು ತಗಲಿದರೆ ಎಚ್ಚರಿಕೆ ಸಂದೇಶ ನೀಡುವಂತೆ ಮನವಿ ಮಾಡಲಾಗುತ್ತಿದೆ’ ಎಂದು ಕಟೀಲ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.