ADVERTISEMENT

ಬಿಬಿಎಂಪಿ | 15 ದಿನದಲ್ಲಿ ಕಟ್ಟಡಕ್ಕೆ ‘ನಂಬಿಕೆ ನಕ್ಷೆ’

ಅರ್ಜಿ ಸಲ್ಲಿಸಿದ ಒಂದೇ ದಿನದಲ್ಲಿ ತಾತ್ಕಾಲಿಕ ನಕ್ಷೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 23:17 IST
Last Updated 3 ಜುಲೈ 2025, 23:17 IST
–
   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ‘ನಂಬಿಕೆ ನಕ್ಷೆ’ ಯೋಜನೆಯಡಿ 4,000 ಚದರಡಿವರೆಗಿನ ನಿವೇಶನಗಳಿಗೆ ಒಂದೇ ದಿನದಲ್ಲಿ ಕಟ್ಟಡ ನಕ್ಷೆ ನೀಡಲಾಗುತ್ತದೆ. 15 ದಿನದಲ್ಲಿ ಅನುಮೋದಿತ ನಕ್ಷೆ ಲಭ್ಯವಾಗಲಿದೆ.

ನಿವೇಶನಗಳಿಗೆ ಇ–ಖಾತಾ ಇಲ್ಲದಿದ್ದರೆ, ಕಟ್ಟಡ ನಕ್ಷೆಗೆ ಮಂಜೂರಾತಿ, ಕಟ್ಟಡ ಪ್ರಾರಂಭಿಕ ಪ್ರಮಾಣ ಪತ್ರ (ಸಿಸಿ), ಸ್ವಾಧೀನಾನುಭವ ಪತ್ರ (ಒಸಿ) ಇನ್ನು ಮುಂದೆ ಸಿಗುವುದಿಲ್ಲ. 

‘ವಸತಿ ಕಟ್ಟಡಗಳ ನಿರ್ಮಾಣಕ್ಕೆ  ಒಂದೇ ದಿನದಲ್ಲಿ ನಕ್ಷೆ ನೀಡಲಾಗುತ್ತದೆ. ಕಟ್ಟಡ ನಕ್ಷೆ ನಿಮ್ಮ ಮನೆ ಬಾಗಿಲಿಗೆ’ ಎಂಬ ಘೋಷ ವಾಕ್ಯದಲ್ಲಿ ‘ನಂಬಿಕೆ ನಕ್ಷೆ’ ಯೋಜನೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು 2024ರ ಸೆಪ್ಟೆಂಬರ್‌ನಲ್ಲಿ ಚಾಲನೆ ನೀಡಿದ್ದರು. 2025 ಜನವರಿವರೆಗೂ ಕುಂಟುತ್ತಾ ಸಾಗಿದ್ದ, ಯೋಜನೆ ನಂತರ ವೇಗ ಪಡೆದುಕೊಂಡಿತ್ತು. ಎಲ್ಲ ಪ್ರಕ್ರಿಯೆಗಳನ್ನು ಆನ್‌ಲೈನ್‌ನಲ್ಲೇ ನಡೆಸಲಾಗುತ್ತಿದ್ದರೂ, ಕಾಲಮಿತಿಯಾದ 15 ದಿನದಲ್ಲಿ ಅನುಮೋದಿತ ನಕ್ಷೆ ಸಿಗುತ್ತಿರಲಿಲ್ಲ. ಜುಲೈ 3ರಿಂದ ಎಲ್ಲ ವ್ಯವಸ್ಥೆಯನ್ನೂ ಆನ್‌ಲೈನ್‌ನಲ್ಲೇ ನಡೆಸಲಾಗುತ್ತಿದ್ದು, ಬಿಬಿಎಂಪಿ ಕಚೇರಿಗೆ ಹೋಗದೆ ಕಟ್ಟಡ ನಕ್ಷೆಯನ್ನು ಪಡೆಯಬಹುದಾಗಿದೆ.

ADVERTISEMENT

‘ನಂಬಿಕೆ ನಕ್ಷೆ’ ಯೋಜನೆಯಲ್ಲಿ ಕಾಲಮಿತಿಯಾದ 15 ದಿನದಲ್ಲಿ ಅನುಮೋದಿತ ನಕ್ಷೆ ಆನ್‌ಲೈನ್‌ನಲ್ಲೇ ಅನುಮೋದನೆಯಾಗುತ್ತದೆ. ಇ–ಖಾತಾ ದಾಖಲಿಸುವುದರಿಂದ ಕಂದಾಯ ಅಧಿಕಾರಿಗಳ ಪರಿಶೀಲನೆ ಅಗತ್ಯ ಇರುವುದಿಲ್ಲ. ಅಧಿಕಾರಿಗಳು ಅವರಿಗೆ ನೀಡಿರುವ ಅವಧಿಯೊಳಗೆ ಪರಿಶೀಲನೆ ನಡೆಸಿ, ಅನುಮೋದನೆ ನೀಡಲಿದ್ದರೆ ಸ್ವಯಂಚಾಲಿತವಾಗಿ (ಡೀಮ್ಡ್‌) ಕಟ್ಟಡ ನಕ್ಷೆ ಅನುಮೋದನೆಯಾಗುವ ವ್ಯವಸ್ಥೆ ಇದೀಗ ಜಾರಿಯಾಗಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಮಾರ್ಗದರ್ಶನದಲ್ಲಿ ಈ ವ್ಯವಸ್ಥೆ ಜಾರಿಯಾಗಿದ್ದು, ಇನ್ನಷ್ಟು ಸುಲಲಿತವಾಗಲಿದೆ’  ಎಂದು ಬಿಬಿಎಂಪಿ ನಗರ ಯೋಜನೆಯ ಹೆಚ್ಚುವರಿ ನಿರ್ದೇಶಕ ಗಿರೀಶ್‌ ಹೇಳಿದರು

‘ಮ್ಯಾನ್ಯುಯಲ್ ಖಾತಾ’ ಹೊಂದಿರುವವರಿಗೆ ಕಟ್ಟಡ ನಕ್ಷೆ ನೀಡುವುದನ್ನು ನಿಲ್ಲಿಸಲಾಗಿದೆ. ಕಟ್ಟಡ ನಕ್ಷೆಗೆ ಅರ್ಜಿ ಸಲ್ಲಿಸುವಾಗ ಇ–ಖಾತಾ ಕಡ್ಡಾಯ. ಇದರಿಂದ, ಆಸ್ತಿಗೆ ಸಂಬಂಧಿಸಿದಂತೆ ಇತರೆ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ. ಕಂದಾಯ ಅಧಿಕಾರಿಗಳ ಪರಿಶೀಲನೆ ಅಗತ್ಯವಿಲ್ಲ. ಆಸ್ತಿ ತೆರಿಗೆ, ಕ್ರಯಪತ್ರ, ಆಸ್ತಿಯ ಸ್ಥಳ (ಅಕ್ಷಾಂಶ, ರೇಖಾಂಶ), ಮಾಲೀಕರ ಚಿತ್ರ, ಆಧಾರ್ ಎಲ್ಲವೂ ಇ–ಖಾತಾದಲ್ಲಿಯೇ ನಮೂದಾಗಿರುವುದರಿಂದ ಈ ಎಲ್ಲ ದಾಖಲೆಗಳು ಆನ್‌ಲೈನ್‌ನಲ್ಲಿಯೇ ಲಭ್ಯವಾಗುತ್ತವೆ. ನಕ್ಷೆಗೆ ಸಂಬಂಧಿಸಿದ ದಾಖಲೆಗಳನ್ನು ಮಾತ್ರ ಸಲ್ಲಿಸಬೇಕಾಗುತ್ತದೆ’  ಎಂದರು.

  • ಕಂದಾಯ ನೌಕರರ ಪರಿಶೀಲನೆ ಅಗತ್ಯವಿಲ್ಲ

  • ಬಫರ್‌ ಝೋನ್‌, ಕೆರೆ ಅಂಗಳ ಸ್ವಯಂಚಾಲಿತವಾಗಿ ಪರಿಶೀಲನೆ

ಪ್ರಕ್ರಿಯೆ ಹೇಗೆ?

ಬಿಬಿಎಂಪಿಯಿಂದ ಅನುಮತಿ ಪಡೆದಿರುವ ಆರ್ಕಿಟೆಕ್ಟ್‌ಗಳು ಅಥವಾ ಎಂಜಿನಿಯರ್‌ಗಳು ಮಾಲೀಕರು ಒದಗಿಸುವ ದಾಖಲೆ ಮತ್ತು ಕಟ್ಟಡ ನಕ್ಷೆಯನ್ನು ಬಿಬಿಎಂಪಿ ವೆಬ್‌ಸೈಟ್‌ನಲ್ಲಿ (https://bpas.bbmpgov.in/BPAMSClient4/Default.aspx? TAV-1) ಅಪ್‌ಲೋಡ್‌ ಮಾಡಬೇಕು.

ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ (ಕೆಎಸ್‌ಆರ್‌ಎಸ್‌ಎಸಿ) ಆನ್‌ಲೈನ್‌ನಲ್ಲೇ ಪರಿಶೀಲಿಸಿ ಕೆರೆ ಸರ್ಕಾರಿ ಪ್ರದೇಶಗಳ ಯಾವುದೇ ಬಫರ್‌ ಝೋನ್‌ನಲ್ಲಿ ಈ ಕಟ್ಟಡ ಬರುವುದಿಲ್ಲ ಎಂಬುದನ್ನು ಸ್ಪಷ್ಟೀಕರಿಸುತ್ತದೆ.

ಆಟೊ ಡಿಸಿಆರ್‌ ಮೂಲಕ ವರದಿ ಸಿದ್ಧಗೊಂಡು ತಾತ್ಕಾಲಿಕ ನಕ್ಷೆ ಹಾಗೂ ಅನುಮತಿ ಪತ್ರವನ್ನು ಒಂದು ದಿನದಲ್ಲಿ ನೀಡಲಾಗುತ್ತದೆ.

ನಂತರ ನಗರ ಯೋಜನೆ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ನಕ್ಷೆ ಮಂಜೂರು ಮಾಡುತ್ತಾರೆ. ದಾಖಲೆಗಳಲ್ಲಿ ಯಾವುದಾದರೂ ಸಮಸ್ಯೆ ಅಥವಾ ತಪ್ಪಿದ್ದರೆ ಬಿಬಿಎಂಪಿ ಕಾಯ್ದೆಯಂತೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

‘ತಾತ್ಕಾಲಿಕ ನಕ್ಷೆ’ಯನ್ನು ರದ್ದುಗೊಳಿಸಿ ಕಟ್ಟಡ ನಿರ್ಮಿಸದಂತೆ ನಿರ್ಬಂಧಿಸಲಾಗುತ್ತದೆ.

15 ದಿನದಲ್ಲಿ ಎಲ್ಲ ಪ್ರಕ್ರಿಯೆಗಳೂ ಮುಗಿಯಲಿವೆ. ಪ್ರತಿಯೊಂದು ಅನುಮೋದನೆಯನ್ನೂ ಆನ್‌ಲೈನ್‌ನಲ್ಲೇ ನಡೆಸಲು ಅಧಿಕಾರಿಗಳಿಗೆ ಲಾಗಿನ್‌ ನೀಡಲಾಗಿದೆ.

ಅಧಿಕಾರಿಗಳಿಗೆ ನಿಗದಿಯಾದ ಅವಧಿಯಲ್ಲಿ ಅವರು ಪರಿಶೀಲನೆ ನಡೆಸಿ ಸಮ್ಮತಿ ನೀಡದಿದ್ದರೆ ‘ಡೀಮ್ಡ್‌’ ವ್ಯವಸ್ಥೆಯಲ್ಲಿ ಸ್ವಯಂಚಾಲಿತವಾಗಿ ಕಟ್ಟಡ ನಕ್ಷೆ ಅನುಮೋದನೆಯಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.