ADVERTISEMENT

ತಾತ್ವಿಕ ಪ್ರಜಾಪ್ರಭುತ್ವಕ್ಕೆ ಧಕ್ಕೆ: ಬರಗೂರು- ‘ನಮ್ಮ ಭಾರತ’ ಕೃತಿ ಬಿಡುಗಡೆ

‘ನಮ್ಮ ಭಾರತ’ ಕೃತಿ ಬಿಡುಗಡೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2022, 20:42 IST
Last Updated 10 ಡಿಸೆಂಬರ್ 2022, 20:42 IST
‘ನಮ್ಮ ಭಾರತ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಬರಗೂರು ರಾಮಚಂದ್ರಪ್ಪ ಮತ್ತು ಕ್ಯಾಪ್ಟನ್ ಗೋಪಿನಾಥ್ ಅವರು ಸಮಾಲೋಚನೆಯಲ್ಲಿ ತೊಡಗಿದ್ದರು. ಲೇಖಕಿ ಗೀತಾ ವಸಂತ ಇದ್ದರು. –ಪ್ರಜಾವಾಣಿ ಚಿತ್ರ
‘ನಮ್ಮ ಭಾರತ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಬರಗೂರು ರಾಮಚಂದ್ರಪ್ಪ ಮತ್ತು ಕ್ಯಾಪ್ಟನ್ ಗೋಪಿನಾಥ್ ಅವರು ಸಮಾಲೋಚನೆಯಲ್ಲಿ ತೊಡಗಿದ್ದರು. ಲೇಖಕಿ ಗೀತಾ ವಸಂತ ಇದ್ದರು. –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ತಾಂತ್ರಿಕ ಪ್ರಜಾಪ್ರಭುತ್ವವು ಇಂದು ತಾತ್ವಿಕ ಪ್ರಜಾಪ್ರಭುತ್ವವನ್ನೇ ನುಂಗಿ ಹಾಕುವಂತೆ ಕಾಣಿಸುತ್ತಿದೆ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಆತಂಕ ವ್ಯಕ್ತಪಡಿಸಿದರು.

ಪತ್ರಕರ್ತ ವಿಜಯ್ ಜೋಶಿ ಕನ್ನಡಕ್ಕೆ ಅನುವಾದಿಸಿರುವ‘ಹರಿವು ಬುಕ್ಸ್‌’ ಪ್ರಕಟಿಸಿರುವ ನಮ್ಮ ಭಾರತ’ (ಮೂಲ:ಕ್ಯಾಪ್ಟನ್ ಗೋಪಿನಾಥ್) ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಮ್ಮ ಭಾರತವು ಇಂದು ಆದ್ಯತೆಗಳ ಪಲ್ಲಟವನ್ನು ಕಂಡಿದೆ. ಹಿಂದೆ ಸಮಾನತೆ ಬಗ್ಗೆ ಮಾತನಾಡುತ್ತಿದ್ದೆವು. ಈಗ ಸಹಿಷ್ಣುತೆ ಬಗ್ಗೆ ಮಾತನಾಡುತ್ತಿದ್ದೇವೆ. ದೊಡ್ಡ ನಾಗರಿಕತೆಯ ವಾರಸುದಾರರು ನಾವು. ಇಲ್ಲಿ ಬಡತನವೂ ಇದೆ, ಸಂಘರ್ಷವೂ ಇದೆ. ಸ್ವಾತಂತ್ರ್ಯ ಮತ್ತು ಸಮಾನತೆ ಇಲ್ಲದ ಪ್ರಜಾಪ್ರಭುತ್ವ ಇಲ್ಲ. ನಾವೆಲ್ಲರೂ ಜಾತಿ ಎಂಬ ಜೈಲು, ಧರ್ಮ ಎಂಬ ದ್ವೀಪಗಳಲ್ಲಿ ಬಂಧಿಯಾಗಿದ್ದೇವೆ. ಇದರಿಂದ ಕಳಚಿಕೊಳ್ಳಬೇಕು. ನಾಯಕ,ಖಳನಾಯಕರನ್ನು ಸೃಷ್ಟಿಸುವ ಚಾಳಿಯನ್ನು ಬಿಡಬೇಕಿದೆ. ನಮ್ಮ ದೇಶವೇ ನಿಜವಾದ ನಾಯಕ’ ಎಂದು ಹೇಳಿದರು.

ADVERTISEMENT

‘ಉದ್ಯಮಶೀಲತೆ ಹಾಗೂ ಚಿಂತನಶೀಲತೆ ಒಂದಾಗಿರುವ ವ್ಯಕ್ತಿತ್ವ ಗೋಪಿನಾಥ್ ಅವರದ್ದು. ಜಾತಿಯೊಳಗಿದ್ದು ಜಾತಿಯನ್ನು ಮೀರಿ, ಧರ್ಮದೊಳಗಿದ್ದು ಧರ್ಮವನ್ನು ಮೀರಿ, ರಾಜಕೀಯದಲ್ಲಿದ್ದು ರಾಜಕೀಯವನ್ನು ಮೀರಿ ನಿಲ್ಲುವ ನಾಯಕತ್ವ ಈ ದೇಶಕ್ಕೆ ಇಂದು ಬೇಕಿದೆ’ ಎಂದು ಹೇಳಿದರು.

ಲೇಖಕಿ ಗೀತಾ ವಸಂತ ಮಾತನಾಡಿ, ‘ಒಂದೇ ಜೀವಿತಾವಧಿಯಲ್ಲಿ ಹಲವು ಅವತಾರಗಳನ್ನು ಎತ್ತಿದವರು ಕ್ಯಾಪ್ಟನ್ಗೋಪಿನಾಥ್. ಹಾಗಾಗಿ ಅವರ ಬಗ್ಗೆ ಬೆರಗು ಇದೆ. ಅವರ ಬರಹಗಳಲ್ಲಿ ಕೇವಲ ತಾತ್ವಿಕತೆ ಅಥವಾ‌ ಏಕಪಕ್ಷೀಯತೆ ಇಲ್ಲ, ಅನುಭವ ಇದೆ. ದೇಶದ ಎಲ್ಲ ಸಕಾರಾತ್ಮಕ ಶಕ್ತಿಗಳನ್ನು ಅವರುಗುರುತಿಸಿದ್ದಾರೆ. ಬದುಕನ್ನು ಕಟ್ಟಲೇಬೇಕು ಎಂಬ ಆಶಾವಾದ ಅವರ ಬರಹದಲ್ಲಿದೆ’ ಎಂದು ತಿಳಿಸಿದರು.

‘ಒಡನಾಟಗಳ ನೆನಪು ಈ ಪುಸ್ತಕದ ವೈಶಿಷ್ಟ್ಯ. ಧಾರ್ಮಿಕ ಸಂಕೇತಗಳನ್ನು ಸಹಜವಾಗಿ ಸ್ವೀಕರಿಸಿದರೆ ಹಿಜಾಬ್ ಅಥವಾ ಇತರ ಧಾರ್ಮಿಕ ಸಂಕೇತಕ್ಕೆ ಸಂಬಂಧಿಸಿದ ಬಿಕ್ಕಟ್ಟು ಇರುವುದಿಲ್ಲ ಎನ್ನುವುದನ್ನು ಕ್ಯಾಪ್ಟನ್ ಪ್ರತಿಪಾದಿಸಿದ್ದಾರೆ’ ಎಂದರು.

‘ಪ್ರಜಾವಾಣಿ’ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.