ADVERTISEMENT

‘ನಾಗರಿಕರು ಕೈ ಜೋಡಿಸಿದರೆ, ತ್ಯಾಜ್ಯ ಸಮಸ್ಯೆಗೆ ಶೀಘ್ರ ಪರಿಹಾರ‘-ಎಸ್.ಟಿ.ಸೋಮಶೇಖರ್

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2021, 18:15 IST
Last Updated 14 ಮಾರ್ಚ್ 2021, 18:15 IST
‘ನಮ್ಮ ಕಾಂಪೋಸ್ಟಿಂಗ್’ ಸಾವಯವ ಗೊಬ್ಬರ ಸಂತೆಗೆ ಭೇಟಿ ನೀಡಿದ ಸಚಿವ ಎಸ್.ಟಿ.ಸೋಮಶೇಖರ್ ಮಳಿಗೆಯಲ್ಲಿದ್ದ ಪರಿಕರಗಳನ್ನು ವೀಕ್ಷಿಸಿದರು. ಸ್ಥಳೀಯ ಮುಖಂಡ ಅನಿಲ್ ಕುಮಾರ್, ಎಇಇ ಪೂರ್ಣಿಮಾ ಇದ್ದಾರೆ
‘ನಮ್ಮ ಕಾಂಪೋಸ್ಟಿಂಗ್’ ಸಾವಯವ ಗೊಬ್ಬರ ಸಂತೆಗೆ ಭೇಟಿ ನೀಡಿದ ಸಚಿವ ಎಸ್.ಟಿ.ಸೋಮಶೇಖರ್ ಮಳಿಗೆಯಲ್ಲಿದ್ದ ಪರಿಕರಗಳನ್ನು ವೀಕ್ಷಿಸಿದರು. ಸ್ಥಳೀಯ ಮುಖಂಡ ಅನಿಲ್ ಕುಮಾರ್, ಎಇಇ ಪೂರ್ಣಿಮಾ ಇದ್ದಾರೆ   

ಕೆಂಗೇರಿ: ‘ಕಸ ವಿಲೇವಾರಿ ಪ್ರಕ್ರಿಯೆಯಲ್ಲಿ ಸರ್ಕಾರದೊಂದಿಗೆ ನಾಗರಿಕರು ಕೈ ಜೋಡಿಸಿದರೆ ತ್ಯಾಜ್ಯ ಸಮಸ್ಯೆಗೆ ಶೀಘ್ರ ಪರಿಹಾರ ದೊರಕುತ್ತದೆ’ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉಲ್ಲಾಳು ವಾರ್ಡ್‍ನಲ್ಲಿ ಬಿಬಿಎಂಪಿ ಘನ ತ್ಯಾಜ್ಯ ಕೆಂಗೇರಿ ಉಪವಿಭಾಗ ಹಾಗೂ ಸರ್.ಎಂ. ವಿಶ್ವೇಶ್ವರಯ್ಯ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ(1ರಿಂದ9) ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ನಮ್ಮ ಕಾಂಪೋಸ್ಟಿಂಗ್’ ಸಾವಯವ ಗೊಬ್ಬರ ಸಂತೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಬೆಂಗಳೂರಿಗೆ ಕಸದ ಸಮಸ್ಯೆಯೇ ಕಂಟಕವಾಗಿ ಪರಿಣಮಿಸಿದೆ. ಘನ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆ ಸಮರ್ಪಕವಾಗಿ ನಡೆದರೆ ಯಾವುದೇ ರೀತಿಯ ತೊಂದರೆ ಎದುರಾಗುವುದಿಲ್ಲ. ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ಹಂತ ಹಂತವಾಗಿ ವಿಂಗಡಿಸಿ ಗೊಬ್ಬರವನ್ನಾಗಿ ಪರಿವರ್ತಿಸಿಕೊಂಡರೆ ತ್ಯಾಜ್ಯ ಸಮಸ್ಯೆಗೆ ಪ್ರಾಥಮಿಕ ಹಂತದಲ್ಲೇ ಪರಿಹಾರ ದೊರಕಲಿದೆ’ ಎಂದರು.

ADVERTISEMENT

ಸರ್.ಎಂ. ವಿಶ್ವೇಶ್ವರಯ್ಯ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಿ.ಎಸ್.ಗೌಡ , ‘ಬಿಡಿಎ ವತಿಯಿಂದ ಬಡಾವಣೆ ನಿರ್ಮಾಣಗೊಂಡಿದ್ದರೂ ಘನತ್ಯಾಜ್ಯ ವಿಲೇವಾರಿ ಸಮಸ್ಯೆಯಿಂದ ಬಡಾವಣೆಯ ಜನರು ಹೈರಾಣಾಗಿದ್ದರು. ಹಸಿರು ನ್ಯಾಯ ಮಂಡಳಿಯ ಮಧ್ಯಸ್ತಿಕೆಯಿಂದಾಗಿ ತ್ಯಾಜ್ಯ ವಿಲೇವಾರಿ ಮಾಡಲು ಬಿಬಿಎಂಪಿ ಮುಂದಾಗಿದ್ದು, ಸಮಸ್ಯೆಗೆ ಪರಿಹಾರ ದೊರಕಿದಂತಾಗಿದೆ’ ಎಂದರು.

ಗೊಬ್ಬರ ಸಂತೆಯಲ್ಲಿ ಸಾವಯವ ಗೊಬ್ಬರ ತಯಾರಿಸುವ ವಿಧಾನದ ಪ್ರಾತ್ಯಕ್ಷಿಕೆ, ಸಾವಯವ ಗೊಬ್ಬರದಿಂದಾಗುವ ಅನುಕೂಲಗಳು, ಗೊಬ್ಬರ ಮಾರಾಟದ ಬಗ್ಗೆ ಮಾಹಿತಿ ನೀಡಲಾಯಿತು. ಕೈದೋಟ ಮಾಡಲು ಬೇಕಾದ ಪಾಟ್ ಗಿಡಗಳು, ಬೀಜ, ಗೊಬ್ಬರ, ಕಳೆ ಕೀಳುವ ಉಪಕರಣ, ಔಷಧ ಸಿಂಪಡಿಸುವ ಉಪಕರಣ ಮತ್ತು ನಾನಾ ಪರಿಕರಗಳ ಮಾರಾಟ ಮಳಿಗೆಗಳನ್ನು ತೆರೆಯಲಾಗಿತ್ತು.

ಬಿಬಿಎಂಪಿ ಘನತ್ಯಾಜ್ಯ ವಿಶೇಷ ಆಯುಕ್ತ ರಂದೀಪ್ ಸಂತೆಗೆ ಭೇಟಿ ನೀಡಿದ್ದರು.

ಘನತ್ಯಾಜ್ಯ ಮುಖ್ಯ ಎಂಜಿನಿಯರ್ ವಿಶ್ವನಾಥ್, ಸಹಾಯಕ ಕಾರ್ಯಪಾಲಕ ಅಭಿಯಂತರ ಪೂರ್ಣಿಮಾ, ಘನ ತ್ಯಾಜ್ಯ ಹಿರಿಯ ಆರೋಗ್ಯ ಪರಿವೀಕ್ಷಕ ನಾಗರಾಜ್, ಕಿರಿಯ ಆರೋಗ್ಯ ಪರಿವೀಕ್ಷಕ ವಿನಯ್, ಅನಿಲ್ ಚಳಗೇರಿ, ವಾರ್ಡ್ ಅಧ್ಯಕ್ಷ ಜಯರಾಮ್, ಮುಖಂಡರಾದ ಕದರಪ್ಪ, ಗಿರೀಶ್, ರಮೇಶ್‍ಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.