ADVERTISEMENT

ಮೆಟ್ರೊ ನಿಲ್ದಾಣದಲ್ಲಿ ಗ್ರಾನೈಟ್ ಸಮಸ್ಯೆ; ದೂರು

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2019, 18:37 IST
Last Updated 17 ಏಪ್ರಿಲ್ 2019, 18:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಮಾಗಡಿ ರಸ್ತೆ ಮೆಟ್ರೊ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಜಾರಿಬಿದ್ದು ನನ್ನ ಕೈ ಮೂಳೆ ಮುರಿದಿದೆ. ನಿಲ್ದಾಣದ ನಿರ್ವಹಣೆ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿರುವ ಮೆಟ್ರೊ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಪಿ.ಜನಾರ್ದನ್ ಎಂಬುವರು ಮಾಗಡಿ ರಸ್ತೆ ಠಾಣೆಗೆ ದೂರು ಕೊಟ್ಟಿದ್ದಾರೆ.

ಮಂಜುನಾಥನಗರ ನಿವಾಸಿಯಾದ ಅವರು, ‘ಬ್ರಾಡ್‌ಕಾಸ್ಟಿಂಗ್‌ ಎಂಜಿನಿಯರಿಂಗ್‌ ಕನ್ಸಲ್‌ಟೆಂಟ್ಸ್‌ ಇಂಡಿಯಾ ಲಿಮಿಟೆಡ್‌’ನಲ್ಲಿ (ಬಿಇಸಿಐಎಲ್‌) ಉಪ ವ್ಯವಸ್ಥಾಪಕರಾಗಿದ್ದಾರೆ. ಮಾರ್ಚ್ 6ರಂದು ಬೆಳಿಗ್ಗೆ 9.30ರ ಸುಮಾರಿಗೆ ನಿಲ್ದಾಣದಲ್ಲಿ ಬಿದ್ದು ಗಾಯಗೊಂಡಿದ್ದ ಅವರು, ಚಿಕಿತ್ಸೆ ಪಡೆದು ಮಂಗಳವಾರ ಠಾಣೆಯ ಮೆಟ್ಟಿಲೇರಿದ್ದಾರೆ. ಪೊಲೀಸರು ನಿರ್ಲಕ್ಷ್ಯ (ಐಪಿಸಿ 338) ಆರೋಪದಡಿ ಎಫ್‌ಐಆರ್ ದಾಖಲಿಸಿಕೊಂಡು, ಮೆಟ್ರೊ ಅಧಿಕಾರಿಗಳಿಂದ ವಿವರಣೆ ಕೇಳಿದ್ದಾರೆ.

‘ಪ್ಲಾಟ್‌ಫಾರ್ಮ್‌ನಲ್ಲಿ ಹಾಕಿರುವ ಗ್ರಾನೈಟ್‌ಗಳು ಪ್ರಯಾಣಿಕರ ಓಡಾಟಕ್ಕೆ ಅನುಕೂಲಕರವಾಗಿಲ್ಲ’ ಎಂದು ಜನಾರ್ದನ್ ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕರು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೂ ಪತ್ರ ಬರೆದಿದ್ದಾರೆ.

ADVERTISEMENT

‘ಅಧಿಕಾರಿಗಳ ಬೇಜವಾಬ್ದಾರಿಯಿಂದ ನಾನು ದೊಡ್ಡ ಪೆಟ್ಟು ತಿನ್ನಬೇಕಾಯಿತು. ಈಗ ಚಿಕಿತ್ಸೆಗೆ ₹ 2 ಲಕ್ಷ ಖರ್ಚು ಮಾಡಿದ್ದೇನೆ. ಎರಡು ತಿಂಗಳು ವಿಶ್ರಾಂತಿಯ ಅಗತ್ಯವಿರುವುದಾಗಿ ವೈದ್ಯರು ಹೇಳಿದ್ದಾರೆ’ ಎಂದು ಅವರು ಜನಾರ್ದನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.