ಬೆಂಗಳೂರು: ಮೆಟ್ರೊ ಪ್ರಯಾಣದರ ಪರಿಷ್ಕರಣೆ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ ಎಂದು ಬುಧವಾರವರೆಗೂ ಹೇಳಿಕೊಂಡು ಬಂದಿದ್ದ ಬಿಎಂಆರ್‌ಸಿಎಲ್ ಅಧಿಕಾರಿಗಳು ಗುರುವಾರ ದರ ಪರಿಷ್ಕರಣೆಯ ಪಟ್ಟಿ ಪ್ರಕಟಿಸಿದ್ದಾರೆ.
ಫೆ.9ರಿಂದ ಜಾರಿಗೆ ಬರುವಂತೆ ವಾರ್ಷಿಕ ಸ್ವಯಂಚಾಲಿತ ದರ ಪರಿಷ್ಕರಣೆ ಜಾರಿಗೆ ಬರಲಿದೆ. 96.10 ಕಿ.ಮೀ. ಮೆಟ್ರೊ ಜಾಲದಲ್ಲಿರುವ 10 ದರ ವಲಯಗಳಲ್ಲಿ ಕನಿಷ್ಠ ₹ 1 ಮತ್ತು ಗರಿಷ್ಠ ₹ 5 ಹೆಚ್ಚಳ ಮಾಡಲಾಗಿದೆ.
ಬಿಎಂಆರ್‌ಸಿಎಲ್ ಸ್ಮಾರ್ಟ್‌ಕಾರ್ಡ್, ಎನ್‌ಸಿಎಂಸಿ ಬಳಕೆದಾರರಿಗೆ ರಿಯಾಯಿತಿ ಮುಂದುವರಿಸಲಾಗಿದೆ. ದಟ್ಟಣೆ ಅವಧಿಯಲ್ಲಿ ಶೇ 5, ದಟ್ಟಣೆ ಅಲ್ಲದ ಅವಧಿಯಲ್ಲಿ ಶೇ 10 ಹಾಗೂ ಭಾನುವಾರ ಮತ್ತು ಗೊತ್ತುಪಡಿಸಿದ ಮೂರು ರಾಷ್ಟ್ರೀಯ ರಜಾದಿನಗಳಲ್ಲಿ ಶೇ 10 ರಿಯಾಯಿತಿ ದೊರೆಯಲಿದೆ. ಎಂದು ಬಿಎಂಆರ್‌ಸಿಎಲ್ ಪ್ರಕಟಣೆ ತಿಳಿಸಿದೆ.
ಮೆಟ್ರೊ ರೈಲ್ವೇಸ್ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ–2002ರ ಅಡಿಯಲ್ಲಿ ರಚಿತವಾದ ದರ ನಿಗದಿ ಸಮಿತಿ (ಎಫ್‌ಎಫ್‌ಸಿ) ಪ್ರಕಾರ ವಾರ್ಷಿಕ ದರ ಪರಿಷ್ಕರಣೆ ಮಾಡಲಾಗಿದೆ ಎಂದು ತಿಳಿಸಿದೆ.
ದರ ನಿಗದಿ ಸಮಿತಿ ಪ್ರಕಾರ 7.5 ವರ್ಷಗಳ ನಂತರ ದರ ಪರಿಷ್ಕರಣೆ ಮಾಡಿದ್ದರಿಂದ ಸರಾಸರಿ ಶೇ 51.55 ರಷ್ಟು ಹೆಚ್ಚಳಕ್ಕೆ ಕಾರಣವಾಯಿತು. ಭವಿಷ್ಯದಲ್ಲಿ ಇಂತಹ ದರ ಹೆಚ್ಚಳದ ಪರಿಸ್ಥಿತಿಯನ್ನು ತಪ್ಪಿಸುವ ದೃಷ್ಟಿಯೊಂದಿಗೆ, ಸಮಿತಿಯು ತನ್ನ ವರದಿಯಲ್ಲಿ ಪಾರದರ್ಶಕ ವಾರ್ಷಿಕ ಸ್ವಯಂಚಾಲಿತ ದರ ಪರಿಷ್ಕರಣೆ ಸೂತ್ರವನ್ನು, ವಾರ್ಷಿಕ ಕಾರ್ಯಾಚರಣೆ ಮತ್ತು ನಿರ್ವಹಣೆಯ ಶೇಕಡವಾರು ವೆಚ್ಚ ಅಥವಾ ವಾರ್ಷಿಕ ಶೇ 5 ಯಾವುದು ಕಡಿಮೆಯೋ ಮತ್ತು ಮುಂದಿನ ಒಂದು ರೂಪಾಯಿಗೆ ಪೂರ್ಣಾಂಕಗೊಳಿಸಿ ಪರಿಷ್ಕರಿಸಲು ಶಿಫಾರಸು ಮಾಡಿದೆ. ಈ ಕಾರ್ಯವಿಧಾನವು, ವಾರ್ಷಿಕವಾಗಿ ಅಲ್ಪ ದರ ಹೆಚ್ಚಳಕ್ಕೆ ಸಹಾಯ ಮಾಡುತ್ತದೆ ಎಂದು ವಿವರಣೆ ನೀಡಿದೆ.
ತಪ್ಪು ಮಾಹಿತಿ?
ಏಳೂವರೆ ವರ್ಷ ದರ ಹೆಚ್ಚಳ ಮಾಡದೇ ಇದ್ದಿದ್ದರಿಂದ 2025ರಲ್ಲಿ ಶೇ 51.55ರಷ್ಟು ದರ ಏರಿಕೆ ಮಾಡಲಾಯಿತು ಎಂದು ಬಿಎಂಆರ್‌ಸಿಎಲ್ ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ 2025ರ ಫೆ.9ರಂದು ಹಲವು ನಿಲ್ದಾಣಗಳಿಗೆ ಶೇ 100ಕ್ಕೂ ಅಧಿಕ ದರ ಹೆಚ್ಚಳ ಮಾಡಲಾಗಿತ್ತು. ವಿರೋಧಗಳು ಬಂದ ಬಳಿಕ ಶೇ 71.5ಕ್ಕೆ ಇಳಿಕೆ ಮಾಡಲಾಗಿತ್ತು.
ದರ ವಿವರ
ವಲಯ;ಅಂತರ (ಕಿ.ಮೀ);ಪ್ರಸ್ತುತ ದರ (₹);ಪರಿಷ್ಕೃತ ದರ (₹)
ಎಫ್ 1;0-2;10;11
ಎಫ್ 2;2-4;20;21
ಎಫ್ 3;4-6;30;32
ಎಫ್ 4;6-8;40;42
ಎಫ್ 5;8-10;50;53
ಎಫ್ 6;10-15;60;63
ಎಫ್ 7;15-20;70;74
ಎಫ್ 8;20-25;80;84;
ಎಫ್ 9;25-30;90;95;
ಎಫ್ 10;30ಕ್ಕಿಂತ ಅಧಿಕ;90;95
ಪಾಸ್ ದರ ವಿವರ
ಮಾನ್ಯತೆ;ಪ್ರಸ್ತುತ ದರ (₹);ಪರಿಷ್ಕೃತ ದರ (₹)
ಅವಧಿ;ಸ್ಮಾರ್ಟ್‌ಕಾರ್ಡ್;ಮೊಬೈಲ್ ಕ್ಯೂಆರ್;ಸ್ಮಾರ್ಟ್‌ಕಾರ್ಡ್;ಮೊಬೈಲ್ ಕ್ಯೂಆರ್
ಒಂದು ದಿನ;300;250;313;263
ಮೂರು ದಿನಗಳು;600;550;628;578
ಐದು ದಿನಗಳು;900;850;943;893
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.