ADVERTISEMENT

ಕೆಂಗೇರಿ: ಏಪ್ರಿಲ್‌ಗೆ ಮೆಟ್ರೊ ರೈಲು ಸಂಚಾರ ಆರಂಭ

ನಮ್ಮ ಮೆಟ್ರೊ ರೀಚ್‌ 2: ಫೆಬ್ರುವರಿಗೆ ಪರೀಕ್ಷಾರ್ಥ ಸಂಚಾರ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2020, 19:31 IST
Last Updated 17 ಡಿಸೆಂಬರ್ 2020, 19:31 IST
‘ನಮ್ಮ ಮೆಟ್ರೊ’ ಎರಡನೇ ಹಂತದ ವಿಸ್ತರಿತ ಮಾರ್ಗದಲ್ಲಿನ ಕೆಂಗೇರಿ ನಿಲ್ದಾಣದಲ್ಲಿ ಹಳಿ ನಿರ್ಮಾಣ ಮತ್ತು ಚಾವಣಿ ಅಳವಡಿಕೆ ಕಾರ್ಯ ನಡೆಯುತ್ತಿದೆ  ಪ್ರಜಾವಾಣಿ ಚಿತ್ರ : ಅನೂಪ್ ರಾಘ. ಟಿ.
‘ನಮ್ಮ ಮೆಟ್ರೊ’ ಎರಡನೇ ಹಂತದ ವಿಸ್ತರಿತ ಮಾರ್ಗದಲ್ಲಿನ ಕೆಂಗೇರಿ ನಿಲ್ದಾಣದಲ್ಲಿ ಹಳಿ ನಿರ್ಮಾಣ ಮತ್ತು ಚಾವಣಿ ಅಳವಡಿಕೆ ಕಾರ್ಯ ನಡೆಯುತ್ತಿದೆ  ಪ್ರಜಾವಾಣಿ ಚಿತ್ರ : ಅನೂಪ್ ರಾಘ. ಟಿ.   

ಬೆಂಗಳೂರು: ’ನಮ್ಮ ಮೆಟ್ರೊ‘ ಎರಡನೇ ಹಂತದಲ್ಲಿನ ಮೈಸೂರು ರಸ್ತೆ–ಕೆಂಗೇರಿ ವಿಸ್ತರಿತ ಮಾರ್ಗದಲ್ಲಿ (ರೀಚ್‌ 2) ಮಾರ್ಚ್‌ ಕೊನೆಯ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಮೆಟ್ರೊ ರೈಲು ಸಂಚಾರ ಆರಂಭವಾಗಲಿದೆ. ಫೆಬ್ರುವರಿಯಲ್ಲಿ ಪರೀಕ್ಷಾರ್ಥ ಸಂಚಾರ ನಡೆಯುವ ಸಾಧ್ಯತೆ ಇದೆ.

‘ಮಾರ್ಚ್‌ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ನಂತರ, ಮೆಟ್ರೊ ರೈಲು ಸುರಕ್ಷತಾ ಆಯುಕ್ತರ ತಂಡ ‍ಪರಿಶೀಲನೆ ನಡೆಸಿದ ನಂತರ ಹಸಿರು ನಿಶಾನೆ ದೊರೆಯಲಿದೆ. ಮಾರ್ಚ್‌ ಕೊನೆಯ ವಾರ ಅಥವಾ ಏಪ್ರಿಲ್‌ ಮೊದಲ ವಾರದಿಂದ ಸಂಚಾರ ಆರಂಭಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ಯಶವಂತ ಚೌಹಾಣ್ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ವಿಸ್ತರಿತ ಮಾರ್ಗವು ಆರು ನಿಲ್ದಾಣಗಳನ್ನು ಒಳಗೊಂಡಿದೆ. ನಾಯಂಡಹಳ್ಳಿ, ರಾಜರಾಜೇಶ್ವರಿನಗರ, ಜ್ಞಾನಭಾರತಿ, ಪಟ್ಟಣಗೆರೆ, ಮೈಲಸಂದ್ರ, ಕೆಂಗೇರಿಯಲ್ಲಿ ನಿಲ್ದಾಣಗಳು ನಿರ್ಮಾಣವಾಗಿವೆ. ಸದ್ಯ ನಿಲ್ದಾಣಗಳಲ್ಲಿ ಚಾವಣಿ (ರೂಫ್‌ಶೀಟ್‌) ಹಾಕಲಾಗುತ್ತಿದೆ. ನಿಲ್ದಾಣದೊಳಗೆ ಗ್ರಾನೈಟ್‌ ಹಾಕುವ ಕಾರ್ಯ ನಡೆಯುತ್ತಿದ್ದು, ಇದರ ನಂತರ ವಿದ್ಯುತ್‌ ಸಂಪರ್ಕ ಸೇರಿದಂತೆ ಇನ್ನಿತರ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.

ADVERTISEMENT

‘ಮೂಲಸೌಕರ್ಯ ನಿರ್ಮಾಣ ಕಾರ್ಯಗಳನ್ನು ಫೆಬ್ರುವರಿಗೇ ಪೂರ್ಣಗೊಳಿಸಲು ಸೂಚನೆ ನೀಡಿದ್ದಾರೆ. ಮಾರ್ಚ್‌ನಲ್ಲಿಯೇ ವಾಣಿಜ್ಯ ಸಂಚಾರ ಆರಂಭವಾಗಬಹುದು’ ಎಂದು ಅಧಿಕಾರಿಯೊಬ್ಬರು ಹೇಳಿದರು.

ನೇರಳೆ ಮಾರ್ಗದಲ್ಲಿ ಬರುವ 6.46 ಕಿ.ಮೀ. ಉದ್ದದ ಈ ವಿಸ್ತರಿತ ಮಾರ್ಗವು 2019ರ ಕೊನೆಯ ವೇಳೆಗೆ ಮುಕ್ತಾಯವಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಹಲವು ಕಾರಣಗಳಿಂದ ವಿಳಂಬವಾಗುತ್ತಲೇ ಇದೆ. ಗುತ್ತಿಗೆದಾರರ ಬದಲಾವಣೆ, ಭೂಸ್ವಾಧೀನದಲ್ಲಾದ ವಿಳಂಬವೂ ಇದಕ್ಕೆ ಕಾರಣವಾಗಿತ್ತು. ಪರಿಷ್ಕೃತ ಗಡುವಿನಂತೆ 2021ರ ಫೆಬ್ರುವರಿಯಲ್ಲಿಯೇ ರೈಲು ಸಂಚಾರ ಆರಂಭವಾಗಬೇಕಿತ್ತು. ಆದರೆ, ಕೋವಿಡ್‌ನಿಂದ ಕಾರ್ಮಿಕರು ಸ್ವಂತ ಊರಿಗೆ ತೆರಳಿದ್ದರಿಂದ ಮತ್ತಷ್ಟು ತಡವಾಯಿತು. ಈಗ ಹಳಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ತಾಂತ್ರಿಕ ಕೆಲಸ– ಕಾರ್ಯಗಳು ನಡೆಯುತ್ತಿವೆ.

ಕನಕಪುರ ರಸ್ತೆ: ಮುಂದಿನ ವಾರದಿಂದ ಸಂಚಾರ ಆರಂಭ ?

ಬಹುನಿರೀಕ್ಷಿತ ಯಲಚೇನಹಳ್ಳಿ– ಸಿಲ್ಕ್‌ ಇನ್‌ಸ್ಟಿಟ್ಯೂಟ್‌ (ಅಂಜನಾಪುರ) ವಿಸ್ತರಿತ ಮಾರ್ಗದಲ್ಲಿ ಮುಂದಿನ ವಾರದಿಂದ ಮೆಟ್ರೊ ರೈಲು ಸೇವೆ ಸಾರ್ವಜನಿಕರಿಗೆ ಲಭ್ಯವಾಗುವ ಸಾಧ್ಯತೆ ಇದೆ ಎಂದು ನಿಗಮದ ಮೂಲಗಳು ಹೇಳಿವೆ.

ಹಸಿರು ಮಾರ್ಗದಲ್ಲಿ ಬರುವ ಈ 6.4 ಕಿ.ಮೀ. ಉದ್ದದ ವಿಸ್ತರಿತ ಮಾರ್ಗದಲ್ಲಿ ಎರಡು ವರ್ಷಗಳ ಹಿಂದೆಯೇ ಸಂಚಾರ ಆರಂಭವಾಗಬೇಕಿತ್ತು. ಹಲವು ಕಾರಣಗಳಿಂದ 2020ರ ಆ.15, ನ.1 ಮತ್ತು ಡಿಸೆಂಬರ್‌ 15 ಗಡುವು ವಿಸ್ತರಿಸಲಾಗಿತ್ತು. ಈಗ ಕಾಲ ಕೂಡಿ ಬಂದಿದೆ.

‘ವಿಧಾನಸಭಾ ಅಧಿವೇಶನ ನಡೆಯುತ್ತಿದ್ದುದರಿಂದ ರೈಲು ಸಂಚಾರ ಆರಂಭ ವಿಳಂಬವಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಅತಿಥಿಗಳ ದಿನಾಂಕ ಹೊಂದಾಣಿಕೆಯಾದ ನಂತರ, ಮುಂದಿನ ವಾರ ಅಥವಾ ತಿಂಗಳಾಂತ್ಯಕ್ಕೆ ವಾಣಿಜ್ಯ ಸಂಚಾರ ಆರಂಭವಾಗಲಿದೆ. ದಿನಾಂಕ ಇನ್ನೂ ಅಂತಿಮಗೊಂಡಿಲ್ಲ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.