ADVERTISEMENT

ಮೆಟ್ರೊ: ಒಂದೇ ದಿನ ₹1.56 ಕೋಟಿ ವರಮಾನ

ಡಿ.31ರಂದು 6.29 ಲಕ್ಷ ಜನ ಪ್ರಯಾಣ, ಜ.1ರಂದು 5.56 ಲಕ್ಷ ಜನ ಪ್ರಯಾಣ

​ಪ್ರಜಾವಾಣಿ ವಾರ್ತೆ
Published 2 ಜನವರಿ 2023, 21:02 IST
Last Updated 2 ಜನವರಿ 2023, 21:02 IST
   

ಬೆಂಗಳೂರು: ಡಿ.31ರಂದು ವರ್ಷಾಂತ್ಯದ ದಿನ ಮೆಟ್ರೊ ರೈಲಿನಲ್ಲಿ 6.29 ಲಕ್ಷಕ್ಕೂ ಹೆಚ್ಚು ಮಂದಿ ಪ್ರಯಾಣಿಸಿದ್ದಾರೆ. ಒಂದೇ ದಿನ ₹1.56 ಕೋಟಿ ವರಮಾನವನ್ನು ಬಿಎಂಆರ್‌ಸಿಎಲ್ ಸಂಗ್ರಹಿಸಿದೆ.

ಹೊಸ ವರ್ಷದ ಆಚರಣೆಯಲ್ಲಿ ಭಾಗವಹಿಸುವ ಜನರ ಅನುಕೂಲಕ್ಕಾಗಿ ಮೆಟ್ರೊ ರೈಲುಗಳ ಸಂಚಾರವನ್ನು ರಾತ್ರಿ 11.30ರ ಬದಲಿಗೆ ಬೆಳಗಿನ ಜಾವ 2 ಗಂಟೆ ತನಕ ವಿಸ್ತರಿಸಲಾಗಿತ್ತು. ಎಂ.ಜಿ ರಸ್ತೆ, ಬ್ರಿಗೇಡ್‌ ರಸ್ತೆ, ಇಂದಿರಾನಗರ ಭಾಗಗಳಿಗೆ ಹೋಗಲು ಹೆಚ್ಚಿನವರು ಮೆಟ್ರೊ ರೈಲನ್ನೇ ಅವಲಂಬಿಸಿದ್ದರು. ಎಂ.ಜಿ. ರಸ್ತೆಯಲ್ಲಿ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು. ಅಲ್ಲದೇ, ವಾರಾಂತ್ಯ ರಜೆಯೂ ಇದ್ದದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು.

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರನ್ನು ಪೊಲೀಸರು ತಡೆದು ದಂಡ ವಿಧಿಸಿದರು. ಇದರ ಮುನ್ಸೂಚನೆ ಇದ್ದ ಬಹುತೇಕರು ಮೆಟ್ರೊ ರೈಲು ಪ್ರಯಾಣವನ್ನೇ ಆಯ್ಕೆ ಮಾಡಿಕೊಂಡಿದ್ದರು. ಪ್ರಯಾಣಿಕರ ಸಂಖ್ಯೆ ಹೆಚ್ಚಳ ಆಗುವ ನಿರೀಕ್ಷೆಯಿಂದ 100ಕ್ಕೂ ಹೆಚ್ಚು ಗೃಹ ರಕ್ಷಕ ಸಿಬ್ಬಂದಿಯನ್ನು ಬಿಎಂಆರ್‌ಸಿಎಲ್ ಹೆಚ್ಚುವರಿಯಾಗಿ ನಿಯೋಜಿಸಿಕೊಂಡಿತ್ತು.

ADVERTISEMENT

ಶನಿವಾರ ತಡರಾತ್ರಿ ಮೆಜೆಸ್ಟಿಕ್–ಬೈಯಪ್ಪನಹಳ್ಳಿ ಮಾರ್ಗದಲ್ಲಿ ಎಂ.ಜಿ.ರಸ್ತೆ, ಕಬ್ಬನ್ ಪಾರ್ಕ್, ಟ್ರಿನಿಟಿ ನಿಲ್ದಾಣಗಳಲ್ಲಿ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಹತ್ತಿದ್ದಾರೆ.‌ ಅಂದು ರಾತ್ರಿ 11.30ರ ನಂತರ ಎಂ.ಜಿ. ರಸ್ತೆ, ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳಿಂದ ಪ್ರಯಾಣಿಸುವವರಿಗೆ ₹50 ಮೊತ್ತದ ಕಾಗದದ ಟಿಕೆಟ್ ವಿತರಿಸಿತ್ತು.

ಹೊಸ ವರ್ಷದ ದಿನವಾದ ಜ.1ರಂದು 5.56 ಲಕ್ಷ ಜನ ಪ್ರಯಾಣಿಸಿದ್ದು, ₹1.45 ಕೋಟಿ ವರಮಾನ ಸಂಗ್ರಹವಾಗಿದೆ ಎಂದು ಬಿಎಂಆರ್‌ಸಿಎಲ್ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.