ನಮ್ಮ ಮೆಟ್ರೊ
ಬೆಂಗಳೂರು: ‘ನಮ್ಮ ಮೆಟ್ರೊ’ ಪ್ರಯಾಣ ದರ ಪರಿಷ್ಕರಣೆಗೆ ಶಿಫಾರಸು ಮಾಡಿರುವ ದರ ನಿಗದಿ ಸಮಿತಿಯ ವರದಿಯನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಬೇಕು. ಬಿಎಂಆರ್‌ಸಿಎಲ್ ವೆಬ್‌ಸೈಟ್ ನಲ್ಲಿ ಪ್ರಕಟಿಸಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಒತ್ತಾಯಿಸಿದ್ದಾರೆ.
ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್ ಅವರಿಗೆ ಈ ಬಗ್ಗೆ ಮನವಿ ಸಲ್ಲಿಸಿದ್ದಾರೆ.
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯವರ ಅಧ್ಯಕ್ಷತೆಯಲ್ಲಿ ದರ ನಿಗದಿ ಸಮಿತಿ 2024ರ ಸೆಪ್ಟೆಂಬರ್ 7ರಂದು ರಚನೆಯಾಗಿತ್ತು. ಡಿ.16ರಂದು ಸಮಿತಿಯು ವರದಿ ನೀಡಿತ್ತು. ಆನಂತರ ಮೆಟ್ರೊ ಪ್ರಯಾಣ ದರ ಶೇ 71ರಷ್ಟು ಹೆಚ್ಚಳ ಮಾಡಲಾಯಿತು. ಇದು ದೇಶದಲ್ಲಿಯೇ ದುಬಾರಿಯಾಗಿದೆ. ದರ ನಿಗದಿ ಸಮಿತಿ (ಎಫ್ಎಫ್‌ಸಿ) ವರದಿಯಲ್ಲಿರುವ ಶಿಫಾರಸುಗಳನ್ನು ಇಲ್ಲಿವರೆಗೆ ಬಹಿರಂಗಪಡಿಸಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ದೆಹಲಿ ಮೆಟ್ರೊಗೆ ಸಂಬಂಧಿಸಿದಂತೆ ನಾಲ್ಕು ವಿಭಿನ್ನ ಸಂದರ್ಭಗಳಲ್ಲಿ ದರ ನಿಗದಿ ಸಮಿತಿಗಳನ್ನು ರಚಿಸಲಾಗಿತ್ತು. ಆ ಸಮಿತಿಗಳು ನೀಡಿದ್ದ ವರದಿಗಳನ್ನು ದೆಹಲಿ ಮೆಟ್ರೊ ರೈಲು ನಿಗಮ (ಡಿಎಂಆರ್‌ಸಿ) ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಅದೇ ರೀತಿ, ಮುಂಬೈ ಮತ್ತು ಹೈದರಾಬಾದ್ ಮೆಟ್ರೊ ಸಂಸ್ಥೆಗಳು ಕೂಡ ದರ ನಿಗದಿ ಸಮಿತಿಯ ವರದಿಗಳನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿ ಪಾರದರ್ಶಕ ವನ್ನು ಕಾಯ್ದುಕೊಂಡಿವೆ. ಸಾರ್ವಜನಿಕರ ವಿಶ್ವಾಸವನ್ನು ಉಳಿಸಿಕೊಂಡಿವೆ. ಬಿಎಂಆರ್‌ಸಿಎಲ್ ಕೂಡ ಇದೇ ಮಾದರಿಯನ್ನು ಅನುಸರಿಸಿ ವರದಿಯನ್ನು ಸಾರ್ವಜನಿಕ ವಲಯಕ್ಕೆ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.