ADVERTISEMENT

ಪ್ರಯಾಣಿಕರ ಅನುಕೂಲಕ್ಕೆ ಪೇಪರ್‌ ಟಿಕೆಟ್‌

ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 23 ಜನವರಿ 2019, 20:02 IST
Last Updated 23 ಜನವರಿ 2019, 20:02 IST
   

ಬೆಂಗಳೂರು: ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಮೆಟ್ರೊ ರೈಲಿನಲ್ಲಿ ಪ್ರಯಾಣಿಸುವ ಪ್ರವಾಸಿಗರು ಲಾಲ್‌ಬಾಗ್‌ ಮೆಟ್ರೊ ನಿಲ್ದಾಣದಲ್ಲಿ ಟಿಕೆಟ್‌ಗಾಗಿ ಸರತಿ ಸಾಲಿನಲ್ಲಿ ಕಾಯುವುದನ್ನು ತಪ್ಪಿಸಲು ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಪೇಪರ್‌ ಟಿಕೆಟ್‌ ವಿತರಿಸಲಿದೆ.

‘ಗಣರಾಜ್ಯೋತ್ಸವ ಪ್ರಯುಕ್ತ ಲಾಲ್‌ಬಾಗ್‌ ಸಸ್ಯೋದ್ಯಾನದಲ್ಲಿ ಏರ್ಪಡಿಸಿರುವ ಈ ಫಲಪುಷ್ಪ ಪ್ರದರ್ಶದ ಅಂಗವಾಗಿ ಇದೇ 25, (ಶುಕ್ರವಾರ), 26 (ಶನಿವಾರ) ಹಾಗೂ 27ರಂದು (ಭಾನುವಾರ) ಪೇಪರ್‌ ಟಿಕೆಟ್‌ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಲಾಲ್‌ಬಾಗ್‌ ಮೆಟ್ರೊ ನಿಲ್ದಾಣದಿಂದ ಬೇರೆ ನಿಲ್ದಾಣಗಳಿಗೆ ಪ್ರಯಾಣಿಸಲು ಪೇಪರ್‌ ಟಿಕೆಟ್‌ ಬಳಸಬಹುದು. ಇದಕ್ಕೆ ₹ 30 ದರ ನಿಗದಿಪಡಿಸಲಾಗಿದೆ’ ಎಂದು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್‌.ಯಶವಂತ ಚೌಹಾಣ್‌ ತಿಳಿಸಿದರು.

‘ಲಾಲ್‌ಬಾಗ್‌ ನಿಲ್ದಾಣದಲ್ಲಿ ಬೆಳಿಗ್ಗೆ 8ರಿಂದ ರಾತ್ರಿ 8ಗಂಟೆವರೆಗೆ ಹಾಗೂ ಉಳಿದ ಮೆಟ್ರೊ ನಿಲ್ದಾಣಗಳಲ್ಲಿ ಬೆಳಿಗ್ಗೆ 8ಗಂಟೆಯಿಂದ ರಾತ್ರಿ 6 ಗಂಟೆವರೆಗೆ ಪೇಪರ್‌ ಟಿಕೆಟ್‌ ಖರೀದಿಸಲು ಅವಕಾಶವಿದೆ. ಬೆಳಿಗ್ಗೆ 10ರಿಂದ ರಾತ್ರಿ 8 ಗಂಟೆವರೆಗೆ ಮಾತ್ರ ಇದನ್ನು ಬಳಸಬಹುದು. ಖರೀದಿಸುವ ಪೇಪರ್‌ ಟಿಕೆಟ್‌ಗಳನ್ನು ಅದೇ ದಿನ ಬಳಸಬೇಕು’ ಎಂದರು.

ADVERTISEMENT

‘ಲಾಲ್‌ಬಾಗ್‌ ನಿಲ್ದಾಣಕ್ಕೆ ಪ್ರಯಾಣಿಸಲು ಎಂದಿನಂತೆಯೇ ಮೆಟ್ರೊ ಸ್ಮಾರ್ಟ್‌ಕಾರ್ಡ್‌ ಹಾಗೂ ಟೋಕನ್‌ ಬಳಸಬಹುದು. ಆದರೆ ಲಾಲ್‌ಬಾಗ್‌ ನಿಲ್ದಾಣದಲ್ಲಿ ದಟ್ಟಣೆ ಅವಧಿಯಲ್ಲಿ ಟೋಕನ್ ಬದಲು ಪೇಪರ್‌ ಟಿಕೆಟ್‌ ಮಾತ್ರ ಮಾರಾಟ ಮಾಡುತ್ತೇವೆ. ಸ್ಮಾರ್ಟ್‌ಕಾರ್ಡ್‌ ಹೊಂದಿರುವವರು ಪೇಪರ್‌ ಟಿಕೆಟ್‌ ಖರೀದಿಸಬೇಕಾಗಿಲ್ಲ’ ಎಂದು ನಿಗಮದ ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಶಂಕರ್‌ ತಿಳಿಸಿದರು.

ಲಾಲ್‌ಬಾಗ್‌ನಿಂದ ದೂರದ ನಿಲ್ದಾಣಗಳಿಗೆ ಪ್ರಯಾಣಿಸುವವರಿಗೆ ಪೇಪರ್‌ ಟಿಕೆಟ್‌ನಿಂದ ಅನುಕೂಲವಾಗಲಿದೆ. ಆದರೆ, ಆಸುಪಾಸಿನ ನಿಲ್ದಾಣಗಳಿಗೆ ಪ್ರಯಾಣಿಸುವವರಿಗೆ ಇದು ತುಸು ದುಬಾರಿ ಆಗಲಿದೆ.

‘ಲಾಲ್‌ಬಾಗ್‌ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ಇಂತಹ ವ್ಯವಸ್ಥೆ ಕಲ್ಪಿಸುವುದು ಅನಿವಾರ್ಯ’ ಎಂದು ಅಧಿಕಾರಿಗಳು ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.