
ನಮ್ಮ ಮೆಟ್ರೊ
ಬೆಂಗಳೂರು: ನಮ್ಮ ಮೆಟ್ರೊ ರೈಲಿನಲ್ಲಿ ಪ್ರಯಾಣಿಸುವ ವೇಳೆ ಜೋರಾಗಿ ಸಂಗೀತ ಕೇಳಿದ, ಮೀಸಲಾದ ಆಸನಗಳನ್ನು ಬಿಟ್ಟುಕೊಡದೇ ಇರುವ, ಆಹಾರ, ತಂಬಾಕು ಸೇವಿಸಿರುವ ಒಟ್ಟು 98,160 ಪ್ರಕರಣಗಳು ಒಂದು ವರ್ಷದಲ್ಲಿ ದಾಖಲಾಗಿವೆ.
ಮೆಟ್ರೊ ರೈಲುಗಳಲ್ಲಿ ಪ್ರಯಾಣಿಕರ ಜವಾಬ್ದಾರಿಯುತ ವರ್ತನೆ ಹಾಗೂ ಪ್ರಯಾಣದಲ್ಲಿ ಪಾಲಿಸಬೇಕಾದ ನಿಯಮಗಳನ್ನು ಪ್ರಚುರಪಡಿಸುವ ಉದ್ದೇಶದಿಂದ ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ವಿಶೇಷ ಜಾಗೃತಿ ಅಭಿಯಾನವನ್ನು ಕೈಗೊಂಡಿತ್ತು.
ಇಬ್ಬರು ಗೃಹ ರಕ್ಷಕರನ್ನೊಳಗೊಂಡ ವಿಶೇಷ ತಂಡಗಳನ್ನು ಮೆಟ್ರೊ ರೈಲುಗಳಲ್ಲಿ ನಿಯೋಜಿಸಿ, ಪ್ರಯಾಣಿಕರಿಗೆ ತಿಳಿವಳಿಕೆ ನೀಡುವ ಹಾಗೂ ಜಾಗೃತಿ ಮೂಡಿಸುವ ಕಾರ್ಯ ನಡೆಸಲಾಗಿತ್ತು.
ಅಭಿಯಾನದ ವೇಳೆ 57,538 ಪ್ರಯಾಣಿಕರು ಜೋರಾಗಿ ಸಂಗೀತ ಕೇಳಿರುವುದು, 37,038 ಪ್ರಯಾಣಿಕರು ಅಗತ್ಯವಿರುವವರಿಗೆ ಮೀಸಲು ಆಸನಗಳನ್ನು ಬಿಡದೆ ಬಳಸಿರುವುದು, 1,907 ಪ್ರಯಾಣಿಕರು ರೈಲುಗಳೊಳಗೆ ಆಹಾರ ಸೇವಿಸಿರುವುದು, 1,677 ಪ್ರಯಾಣಿಕರು ತಂಬಾಕು ಉತ್ಪನ್ನಗಳ ಸೇವನೆ ಮಾಡುತ್ತಿದ್ದುದು ಪತ್ತೆಯಾಗಿತ್ತು.
ಮೆಟ್ರೊಗಳಲ್ಲಿ ಆಹಾರ ಸೇವಿಸುವುದು, ತಂಬಾಕು ಸೇವನೆ ಮಾಡುವುದು, ಹೆಡ್‌ಫೋನ್ ಇಲ್ಲದೆ ಸಂಗೀತ ಕೇಳುವುದರಿಂದ ಸಹ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ. ಹಿರಿಯ ನಾಗರಿಕರಿಗೆ, ಗರ್ಭಿಣಿಯರಿಗೆ, ಅಂಗವಿಕಲರಿಗೆ ಮತ್ತು ಅಗತ್ಯವಿರುವವರಿಗೆ ಮೀಸಲು ಆಸನಗಳನ್ನು ಬಿಟ್ಟುಕೊಡದಿದ್ದರೆ ಅವರಿಗೆ ಅನನುಕೂಲವಾಗುತ್ತದೆ. ಮೆಟ್ರೊ ರೈಲ್ವೇಸ್ (ಆಪರೇಷನ್ ಆ್ಯಂಡ್ ಮೆಂಟೆನನ್ಸ್) ಕಾಯ್ದೆ, 2002ರ ಅಡಿಯಲ್ಲಿ, ಸಹ ಪ್ರಯಾಣಿಕರಿಗೆ ತೊಂದರೆ ಉಂಟುಮಾಡಿದಲ್ಲಿ ಕೆಲವು ಅಪರಾಧಗಳಿಗೆ ದಂಡ ವಿಧಿಸುವ ಅವಕಾಶವಿದೆ. ಸಾರ್ವಜನಿಕರು ಸಹಕರಿಸುವ ಮೂಲಕ ಎಲ್ಲರಿಗೂ ಸುರಕ್ಷಿತ, ಆರಾಮದಾಯಕ ಮತ್ತು ಆನಂದದಾಯಕ ಪ್ರಯಾಣ ಸಿಗುವಂತೆ ಮಾಡಬೇಕು. ಸಹ ಪ್ರಯಾಣಿಕರೊಂದಿಗೆ ಸಹನೆ, ಸೌಜನ್ಯ ಮತ್ತು ಪರಸ್ಪರ ಗೌರವದಿಂದ ವರ್ತಿಸಬೇಕು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.